ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷದಿಂದ (Aam Aadmi Party) ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಮುಂದಿನ ವಾರ ಘೋಷಿಸುತ್ತೇನೆ ಎಂದು ಹೇಳಿದ್ದ ಆಪ್ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್(Arvind Kejriwal), ಇದೀಗ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯ ಹೊಣೆಯನ್ನು ಪಂಜಾಬ್ ಜನರಿಗೇ ಬಿಟ್ಟಿದ್ದಾರೆ. ಅಂದರೆ ಆಮ್ ಆದ್ಮಿ ಪಕ್ಷ ಒಂದು ಫೋನ್ ನಂಬರ್ನ್ನು ಸಾರ್ವಜನಿಕರಿಗೆ ನೀಡಿದೆ. ಆ ನಂಬರ್ಗೆ ಜನರು ಸಂದೇಶ ಕಳಿಸಿ, ಯಾರು ಸಿಎಂ ಆಗಬೇಕು ಎಂಬುದನ್ನು ಹೇಳಬೇಕು. ಅತಿ ಹೆಚ್ಚು ವೋಟ್ ಪಡೆದವರನ್ನು ಪಂಜಾಬ್ ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸುತ್ತೇನೆ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ಸದ್ಯ ಮುಂಬರುವ ಪಂಚರಾಜ್ಯಗಳ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ, ಪಂಜಾಬ್, ಗೋವಾ ಹಾಗೂ ಉತ್ತರಾಖಂಡ ಚುನಾವಣೆಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದೆ. ಪಂಜಾಬ್ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನೂ ಆಪ್ ಬಿಡುಗಡೆ ಮಾಡಿದೆ. ಆದರೆ ಒಂದೊಮ್ಮೆ ಆಪ್ ಗೆದ್ದರೆ, ಅದರ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಬಗ್ಗೆ ಇನ್ನೂ ಅರವಿಂದ್ ಕೇಜ್ರಿವಾಲ್ ಸುಳಿವು ಕೊಟ್ಟಿರಲಿಲ್ಲ.
ಅಂದಹಾಗೇ, ಇದೀಗ ಆಪ್ ಜನರಿಗೆ ಕೊಟ್ಟಿರುವ ಫೋನ್ ನಂಬರ್ 70748 70748. ಪಂಜಾಬ್ ಮುಖ್ಯಮಂತ್ರಿ ರೇಸ್ನಿಂದ ಅರವಿಂದ್ ಕೇಜ್ರಿವಾಲ್ ಹೊರಗುಳಿದಿದ್ದಾರೆ. ಹೀಗಾಗಿ ಆಪ್ ಪಕ್ಷ ಕೊಟ್ಟ ಫೋನ್/ಮೆಸೇಜ್ ಮಾಡಿ ಪಂಜಾಬ್ ಸಿಎಂ ಅಭ್ಯರ್ಥಿಯ ಹೆಸರು ಹೇಳುವ ಸಾರ್ವಜನಿಕರು ಅರವಿಂದ್ ಕೇಜ್ರಿವಾಲ್ ಹೆಸರು ಹೇಳುವಂತಿಲ್ಲ. ಇದೇ ನಂಬರ್ಗೆ ವಾಟ್ಸ್ ಆ್ಯಪ್ ಮೆಸೇಜ್ ಕೂಡ ಕಳಿಸಬಹುದು. ಪಂಜಾಬ್ನಲ್ಲಿ ಆಪ್ ಅಧಿಕಾರಕ್ಕೆ ಬಂದರೆ ಸಿಎಂ ಯಾರಾಗಬೇಕು ಎಂಬ ಆಯ್ಕೆಯನ್ನು ನಾವು ಪಂಜಾಬ್ನ ಮೂರು ಕೋಟಿ ಜನರಿಗೇ ಬಿಟ್ಟಿದ್ದೇವೆ. ಜನವರಿ 17ರ ಸಂಜೆ 5ಗಂಟೆಯೊಳಗೆ ಇಲ್ಲಿನ ಜನರು ತಮ್ಮ ಆಯ್ಕೆಯನ್ನು ಹೇಳಬೇಕು. ಹೀಗೆ ಸಿಎಂ ಅಭ್ಯರ್ಥಿಯನ್ನು ಮತದ ಮೂಲಕ ಇದೇ ಮೊದಲ ಬಾರಿಗೆ ಆಯ್ಕೆ ಮಾಡಲಾಗುತ್ತಿದೆ ಎಂದೂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ನಾನು ಪಂಜಾಬ್ನಲ್ಲಿ ಆಪ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಮ್ಮ ಪಕ್ಷದ ಪ್ರಮುಖ ನಾಯಕ ಭಗವಂತ್ ಮಾನ್ ಹೆಸರನ್ನು ಘೋಷಿಸಲು ನಿರ್ಧರಿಸಿದ್ದೆ. ಆದರೆ ಅವರೇ, ನನಗೆ ಈ ಐಡಿಯಾ ಕೊಟ್ಟರು. ಮುಖ್ಯಮಂತ್ರಿಯ ಹೆಸರನ್ನು ಎಂದಿಗೂ ಮುಚ್ಚಿದ ಬಾಗಿಲ ಹಿಂದೆ ನಿರ್ಧಾರ ಮಾಡಬಾರದು. ಜನತೆಗೆ ಅವಕಾಶ ಕೊಡೋಣ. ಅವರು ಮತ ಹಾಕಲಿ ಎಂದು ಭಗವಂತ್ ಮಾನ್ ನನಗೆ ಸಲಹೆ ನೀಡಿದರು. ಅದರಂತೆ ನಾವು ಈ ಬಾರಿ ಚುನಾವಣೆಗೂ ಪೂರ್ವ ಮತದಾನಕ್ಕೆ ಆಹ್ವಾನಿಸಿದ್ದೇವೆ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
117 ವಿಧಾನಸಭಾ ಕ್ಷೇತ್ರಗಳುಳ್ಳ ಪಂಜಾಬ್ನಲ್ಲಿ ಫೆಬ್ರವರಿ 14ರಂದು ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಮತ ಎಣಿಕೆಯಾಗಲಿದೆ. ಇಲ್ಲಿ ಕಾಂಗ್ರೆಸ್ ಮತ್ತು ಆಪ್ ಪಕ್ಷಗಳು ಏಕಾಂಗಿಯಾಗಿ ಸ್ಪರ್ಧಿಸಲಿದ್ದು, ಶಿರೋಮಣಿ ಅಕಾಲಿ ದಳ ಮತ್ತು ಬಹುಜನ ಸಮಾಜ ಪಾರ್ಟಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲಿವೆ. ಹಾಗೇ, ಇನ್ನೊಂದೆಡೆ ಬಿಜೆಪಿ-ಪಿಎಲ್ಸಿ ಮತ್ತು ಎಸ್ಎಡಿ(ಸಂಯುಕ್ತ) ಪಕ್ಷಗಳ ಮೈತ್ರಿ ಸವಾಲೊಡ್ಡಲಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 77 ಸೀಟುಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿದಿತ್ತು. ಈ ಮೂಲಕ ಅದಕ್ಕೂ ಹಿಂದಿದ್ದ ಎಸ್ಎಡ-ಬಿಜೆಪಿ ಮೈತ್ರಿ ಸರ್ಕಾರದ 10 ವರ್ಷಗಳ ಆಡಳಿತ ಕೊನೆಗೊಂಡಿತ್ತು. ಆಪ್ 20 ಕ್ಷೇತ್ರಗಳಲ್ಲಿ ಗೆದ್ದು, ಎರಡನೇ ಅತಿಹೆಚ್ಚು ಪಡೆದ ಕ್ಷೇತ್ರವಾಗಿತ್ತು. ಎಸ್ಎಡಿ-ಬಿಜೆಪಿ ಮೈತ್ರಿ 18 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದವು. ಅದರಲ್ಲೂ ಬಿಜೆಪಿ ಗೆದ್ದಿದ್ದು ಕೇವಲ ಮೂರು ಕ್ಷೇತ್ರಗಳಲ್ಲಾಗಿತ್ತು.
ಇದನ್ನೂ ಓದಿ: ಮೂವರು ಸುಂದರಿಯರ ಜತೆ ಧರ್ಮ ಕೀರ್ತಿರಾಜ್; ‘ಸುಮನ್’ ಚಿತ್ರದ ಹಾಡುಗಳು ರಿಲೀಸ್
Published On - 3:24 pm, Thu, 13 January 22