ಮೂವರು ಸುಂದರಿಯರ ಜತೆ ಧರ್ಮ ಕೀರ್ತಿರಾಜ್​; ‘ಸುಮನ್​’ ಚಿತ್ರದ ಹಾಡುಗಳು ರಿಲೀಸ್​

ಕೊರೊನಾ ಮೊದಲನೇ ಅಲೆ ಆರಂಭ ಆಗುವುದಕ್ಕೂ ಮುನ್ನವೇ ‘ಸುಮನ್​’ ಚಿತ್ರ ಸೆಟ್ಟೇರಿತ್ತು. ಆದರೆ ಕೊವಿಡ್​ ಲಾಕ್​ಡೌನ್​ ಕಾರಣದಿಂದ ಕೆಲಸಗಳು ವಿಳಂಬ ಆದವು. ಈಗ ಆಡಿಯೋ ಬಿಡುಗಡೆ ಆಗಿದೆ.

ಮೂವರು ಸುಂದರಿಯರ ಜತೆ ಧರ್ಮ ಕೀರ್ತಿರಾಜ್​; ‘ಸುಮನ್​’ ಚಿತ್ರದ ಹಾಡುಗಳು ರಿಲೀಸ್​
‘ಸುಮನ್​’ ಚಿತ್ರದ ನಾಯಕಿಯರ ಜೊತೆ ನಟ ಧರ್ಮ ಕೀರ್ತಿರಾಜ್

ನಟ ಧರ್ಮ ಕೀರ್ತಿರಾಜ್​ ಅವರು ನಟಿಸಿರುವ ‘ಸುಮನ್​’ ಸಿನಿಮಾದ ಹಾಡುಗಳು ಬಿಡುಗಡೆ ಆಗಿವೆ. ‘ನವಗ್ರಹ’ ಸಿನಿಮಾದಿಂದ ಕನ್ನಡ ಸಿನಿಪ್ರಿಯರಿಗೆ ಪರಿಚಿತರಾದ ಧರ್ಮ ಕೀರ್ತಿರಾಜ್​ ಅವರು ಹಲವು ಬಗೆಯ ಪಾತ್ರಗಳನ್ನು ಮಾಡುವ ಮೂಲಕ ಜನರನ್ನು ರಂಜಿಸುವ ಪ್ರಯತ್ನ ಮಾಡಿದ್ದಾರೆ. ಈಗ ಅವರು ‘ಸುಮನ್​’ ಚಿತ್ರ ಮೂಲಕ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ ರವಿ ಸಾಗರ್​ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ನಡೆದ ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಖ್ಯಾತ ನಿರ್ದೇಶಕ ನಂದಕಿಶೋರ್​ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಸಿನಿಮಾದಲ್ಲಿ ಧರ್ಮ್​ ಕೀರ್ತಿರಾಜ್​ ಅವರಿಗೆ ಮೂವರು ನಾಯಕಿಯರು ಎಂಬುದು ವಿಶೇಷ. ರಜನಿ ಭಾರದ್ವಜ್​, ಜೈಲಿನ್​ ಗಣಪತಿ ಮತ್ತು ನಿಮಿಕಾ ರತ್ನಾಕರ್​ ಅವರು ನಟಿಸಿದ್ದಾರೆ.

ಈ ಚಿತ್ರಕ್ಕೆ ಜುಬಿನ್ ಪಾಲ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಎ. ಶಾಂತ್ ಕುಕ್ಕೂರ್ ಸಾಹಿತ್ಯ ಬರೆದಿದ್ದಾರೆ. ಇದೊಂದು ತ್ರಿಕೋನ ಪ್ರೇಮಕಥೆಯುಳ್ಳ ಸಿನಿಮಾ. ಹಾಗಾಗಿ ಮೂವರು ನಾಯಕಿಯರು ಇದ್ದಾರೆ. ‘5 ಹಾಡು ಮತ್ತು 5 ಫೈಟ್​ಗಳು ಈ ಸಿನಿಮಾದಲ್ಲಿ ಇದೆ. ಮೈಸೂರು, ಚಿಕ್ಕಮಗಳೂರು ಮತ್ತು ಮಲ್ಪೆ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಜೈ ಜಗದೀಶ್​, ಉಗ್ರಂ ಮಂಜು, ಮಿತ್ರ, ಗೋವಿಂದೇ ಗೌಡ, ಬಾಲರಾಜ್​ ವಾಡಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ’ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ನಿರ್ದೇಶಕ ರವಿ ಸಾಗರ್​.

ಕೊರೊನಾ ಮೊದಲನೇ ಅಲೆ ಆರಂಭ ಆಗುವುದಕ್ಕೂ ಮುನ್ನವೇ ಈ ಸಿನಿಮಾ ಸೆಟ್ಟೇರಿತ್ತು. ಆದರೆ ಕೊವಿಡ್​ ಲಾಕ್​ಡೌನ್​ ಕಾರಣದಿಂದ ಕೆಲಸಗಳು ವಿಳಂಬ ಆದವು. ‘ಎರಡನೇ ಅಲೆ ಮುಗಿದ ಮೇಲೆ ಚಿತ್ರೀಕರಣ ಮುಗಿಸಿದ್ದೇವೆ. ಇಂತಹ ಸಂದರ್ಭದಲ್ಲಿ ಸಿನಿಮಾವನ್ನು ಪೂರ್ಣಗೊಳಿಸಿದ ನಮ್ಮ ನಿರ್ಮಾಪಕರಿಗೆ ವಿಶೇಷ ಧನ್ಯವಾದ. ನನ್ನೊಂದಿಗೆ ಮೂವರು ನಾಯಕಿಯರು ನಟಿಸಿದ್ದಾರೆ. ಎಲ್ಲರ ಅಭಿನಯ ಚೆನ್ನಾಗಿದೆ. ಜುಬಿನ್ ಪಾಲ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡುಗಳು ಇಂಪಾಗಿದೆ’ ಎಂದಿದ್ದಾರೆ ಧರ್ಮ ಕೀರ್ತಿರಾಜ್​. ಕೊರೊನಾ 3ನೇ ಅಲೆಯ ಆರ್ಭಟ ಕಡಿಮೆಯಾದರೆ ಫೆಬ್ರವರಿಯಲ್ಲಿ‌ ಈ ಸಿನಿಮಾ ತೆರೆಗೆ ಬರಲಿದೆ‌.

ಈ ಚಿತ್ರಕ್ಕಾಗಿ ಕೊರೆಯುವ ಚಳಿಯಲ್ಲಿ ನಿಮಿಕಾ ರತ್ನಾಕರ್​ ಅವರು ಶೂಟಿಂಗ್​ ಮಾಡಿದ್ದಾರೆ. ರಜನಿ ಭಾರದ್ವಾಜ್​ ಅವರು ಸ್ಟ್ರಾಂಗ್​ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ವಲ್ಪ ನೆಗೆಟಿವ್​ ಶೇಡ್​ ಇರುವಂತಹ ಪಾತ್ರದಲ್ಲಿ ಜೈಲಿನ್​ ಗಣಪತಿ ಅಭಿನಯಿಸಿದ್ದಾರೆ.

ಇದನ್ನೂ ಓದಿ:

ನಂದಕಿಶೋರ್​, ಧರ್ಮ ಕೀರ್ತಿರಾಜ್​ ಫ್ರೆಂಡ್​ಶಿಪ್​ ಮೆಲುಕು; ಗೆಳೆಯನ ಚಿತ್ರಕ್ಕೆ ‘ಪೊಗರು’ ಡೈರೆಕ್ಟರ್​ ಸಾಥ್​

ಮುಂದಿನ ವಾರವಾದ್ರೂ ಚೇತರಿಸಿಕೊಳ್ಳುತ್ತಾ ಚಿತ್ರರಂಗ? ವಾಣಿಜ್ಯ ಮಂಡಳಿಗೆ ‘ಡಿಎನ್​ಎ’ ತಂಡದ ಮನವಿ

Click on your DTH Provider to Add TV9 Kannada