ಪಂಜಾಬ್ ವಿಧಾನಸಭೆ ಚುನಾವಣೆ (Punjab Assembly Election)ಯಲ್ಲಿ ಭರ್ಜರಿ ಬಹುಮತ ಪಡೆದಿರುವ ಆಮ್ ಆದ್ಮಿ ಪಕ್ಷದ ಭಗವಂತ್ ಮಾನ್ (Bhagwant Mann) ಇಂದು ಪಂಜಾಬ್ನ 17ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇಂದು, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ಸಿಂಗ್ ಗ್ರಾಮವಾದ, ಪಂಜಾಬ್ನ ಖಟ್ಕರ್ಕಲಾನ್ನಲ್ಲಿ ಈ ಸಮಾರಂಭ ಅದ್ದೂರಿಯಾಗಿ ನಡೆದಿತ್ತು. ಸದ್ಯ ಭಗವಂತ್ ಮಾನ್ ಒಬ್ಬರೇ ಪ್ರಮಾಣ ವಚನ ಸ್ವೀಕರಿಸಿದ್ದು, ಅವರ ಕ್ಯಾಬಿನೆಟ್ ಸಚಿವರು ಇನ್ನು ಕೆಲವೇ ದಿನಗಳಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇಂದು ಖಟ್ಕರ್ ಕಲಾನ್ನಲ್ಲಿ ಅಕ್ಷರಶಃ ಹಬ್ಬದ ವಾತಾವರಣವಿತ್ತು. ಅನೇಕ ಜನರು ಸೇರಿದ್ದರು. ಎಲ್ಲಿ ನೋಡಿದರೂ ಹಳದಿ ಪೇಟವೇ ಕಾಣಿಸುತ್ತಿತ್ತು.
Bhagwant Mann sworn-in as the Chief Minister of Punjab, in Khatkar Kalan. pic.twitter.com/mrRVRNX9ab
— ANI (@ANI) March 16, 2022
ಪಂಜಾಬ್ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ, ಕಾಂಗ್ರೆಸ್ ನಾಯಕ ಮನೀಶ್ ತಿವಾರಿ, ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಸೇರಿ ಅನೇಕರು ಶುಭಹಾರೈಸಿದ್ದಾರೆ. ಅಖಿಲೇಶ್ ಯಾದವ್ ಟ್ವೀಟ್ ಮಾಡಿ, ಪಂಜಾಬ್ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಅಭಿನಂದನೆಗಳು. ಅವರ ಸಮರ್ಥ ನಾಯಕತ್ವದಲ್ಲಿ ಪಂಜಾಬ್ ಪ್ರಗತಿ ಕಾಣಲಿ. ಅಲ್ಲಿ ಸೋದರತ್ವ ಬೆಳೆಯಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ. ಹಾಗೇ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಶುಭಕೋರಿದ್ದು, ಭಾರತೀಯ ಒಕ್ಕೂಟದಲ್ಲಿ ಭಾಷಾವಾರು ಹಕ್ಕುಗಳು ಮತ್ತು ರಾಜ್ಯದ ಹಕ್ಕುಗಳ ಬಗ್ಗೆ ಧ್ವನಿ ಎತ್ತಿರುವ ರಾಜ್ಯಗಳು ತಮಿಳುನಾಡು ಮತ್ತು ಪಂಜಾಬ್. ಈ ವಿಚಾರಗಳಲ್ಲಿ ಎರಡೂ ರಾಜ್ಯಗಳು ಸುದೀರ್ಘ ಇತಿಹಾಸ ಹೊಂದಿವೆ ಎಂದು ಹೇಳಿದ ಸ್ಟಾಲಿನ್, ಪಂಜಾಬ್ನ ಹೊಸ ಸರ್ಕಾರ ಅತ್ಯುತ್ತಮವಾಗಿ ಆಡಳಿತ ನಡೆಸಲಿ ಎಂದು ಹಾರೈಸಿದ್ದಾರೆ.
ಬೆಳಗ್ಗೆಯಿಂದಲೇ ಜನರ ಆಗಮನ
ಇಂದು ಭಗವಂತ್ ಮಾನ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಮುಂಜಾನೆ 9.30ರಿಂದಲೇ ಜನರು ಆಗಮಿಸುತ್ತಿದ್ದರು. 11.30 ಹೊತ್ತಿಗೆ ಕಾರ್ಯಕ್ರಮ ಸ್ಥಳ ಭರ್ತಿಯಾಗಿತ್ತು. ಸಮಾರಂಭಕ್ಕೆ ಬಹಳ ಬೇಗನೇ ಬಂದವರಲ್ಲಿ ಆಪ್ ಶಾಸಕರಾದ ಅಮನ್ ಅರೋರಾ, ಹರ್ಪಾಲ್ ಸಿಂಗ್ ಚೀಮಾ, ಕುಲ್ತರ್ ಸಿಂಗ್ ಸಾಂಧವಾ, ನೀನಾ ಮಿತ್ತಲ್, ಜೈಕಿಶನ್ ಸಿಂಗ್ ರೋರಿ, ಸಂತೋಶ್ ಕಟಾರಿಯಾ ಕೂಡ ಸೇರಿದ್ದಾರೆ. ಹೊಸದಾಗಿ ಆಯ್ಕೆಯಾದ ಶಾಸಕರೆಲ್ಲರೂ ಬೆಳಗ್ಗೆ 11.30ರ ಹೊತ್ತಿಗೇ ಖಟ್ಕರ್ಕಲಾನ್ಗೆ ತಲುಪಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮ ಮಧ್ಯಾಹ್ನ 12.30ಕ್ಕೆ ಎಂದು ಹೇಳಲಾಗಿತ್ತಾದರೂ, ಭಗವಂತ್ ಮಾನ್, ಅರವಿಂದ್ ಕೇಜ್ರಿವಾಲ್ ಮತ್ತು ರಾಜ್ಯಪಾಲರು ಇಲ್ಲಿಗೆ ತಲುಪಲು ವಿಳಂಬವಾಗಿದ್ದರಿಂದ ಕಾರ್ಯಕ್ರಮ ತಡವಾಗಿದೆ.
ಇದನ್ನೂ ಓದಿ: ಇವರೆಂಥಾ ದುಬಾರಿ ಸಿಎಂ?-ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕಾರಕ್ಕಾಗಿ 40 ಎಕರೆ ಗೋಧಿ ಬೆಳೆ ನಾಶ !
Published On - 1:30 pm, Wed, 16 March 22