ಚಂಡೀಗಢ: ಈ ಹಿಂದೆ ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಲಾಗಿದ್ದ ಪಂಜಾಬ್ (Punjab) ಕಾಂಗ್ರೆಸ್ ಮಾಜಿ ಮುಖ್ಯಸ್ಥ ಸುನೀಲ್ ಜಾಖರ್ (Sunil Jakhar) ಅವರು ಚುನಾವಣಾ ರಾಜಕೀಯವನ್ನು ತೊರೆದಿದ್ದೇನೆ ಆದರೆ ಪಕ್ಷದಲ್ಲಿಯೇ ಮುಂದುವರಿಯುವುದಾಗಿ ಹೇಳಿದ್ದಾರೆ. ರಾಜಕೀಯದಲ್ಲಿ ಮುಂದುವರಿಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಜಾಖರ್, ನಾನು ಸಕ್ರಿಯ ರಾಜಕಾರಣದಿಂದ ಹೊರಗಿದ್ದೇನೆ. ಕಳೆದ ಐದು ದಿನಗಳಿಂದ ನಾನು ಇದನ್ನು ಹೇಳುತ್ತಿದ್ದೇನೆ. ಆದರೆ ನಾನು ಕಾಂಗ್ರೆಸ್‌ನ ಭಾಗವಾಗಿದ್ದೇನೆ ಎಂದು ಭಾನುವಾರ ಲುಧಿಯಾನದಲ್ಲಿ ಹೇಳಿದ್ದಾರೆ. ಪಕ್ಷದ ನಾಯಕ ರಾಹುಲ್ ಗಾಂಧಿಯವರ ವರ್ಚುವಲ್ ರ್ಯಾಲಿಯಲ್ಲಿ 68 ವರ್ಷದ ಜಾಖರ್ ಅವರು ಭಾನುವಾರ ಭಾಗವಹಿಸಿದ್ದರು. ಕಳೆದ ವರ್ಷ ಅಮರಿಂದರ್ ಸಿಂಗ್ (Amarinder Singh) ಅವರು ಅನೌಪಚಾರಿಕವಾಗಿ ನಿರ್ಗಮಿಸಿದ ನಂತರ 42 ಶಾಸಕರು ತಾವು ರಾಜ್ಯದ ಮುಖ್ಯಮಂತ್ರಿಯಾಗಬೇಕೆಂದು ಬಯಸಿದ್ದರು ಎಂದು ಕೆಲವು ದಿನಗಳ ಹಿಂದೆ ಜಾಖರ್ ಹೇಳಿಕೊಂಡಿದ್ದರು. ಈ ಬಹಿರಂಗಪಡಿಸುವಿಕೆಯ ನಂತರ, ಕಾಂಗ್ರೆಸ್ ಜಾತಿ ಮತ್ತು ಧರ್ಮದ ಆಧಾರದ ಮೇಲೆ ರಾಜಕೀಯ ಮಾಡುತ್ತಿದೆ ಎಂದು ಎಎಪಿ ಆರೋಪಿಸಿತು. ಆದರೆ ಜಾಖರ್ ಅವರ ಧರ್ಮ ಆಧರಿಸಿ ಮುಖ್ಯಮಂತ್ರಿ ಸ್ಥಾನ ನಿರಾಕರಿಸಲಾಗಿದೆ ಎಂದು ಆರೋಪಿಸಿದ ಬಿಜೆಪಿ ಕಾಂಗ್ರೆಸ್ ಪಕ್ಷದ ಸೆಲೆಕ್ಟಿವ್ ಜಾತ್ಯತೀತತೆಯನ್ನು ಪ್ರಶ್ನಿಸಿತ್ತು.
ಅಮರಿಂದರ್ ಸಿಂಗ್ ಅವರ ನಿರ್ಗಮನದ ನಂತರ ಮುಖ್ಯಮಂತ್ರಿ ಸ್ಥಾನದ ಮುಂಚೂಣಿಯಲ್ಲಿದ್ದವರಲ್ಲಿ ಸುನೀಲ್ ಜಾಖರ್ ಕೂಡ ಇದ್ದರು. ಆದರೆ ಪಕ್ಷವು ಪರಿಶಿಷ್ಟ ಜಾತಿ ಸಮುದಾಯದಿಂದ ಪಂಜಾಬ್‌ನ ಮೊದಲ ಮುಖ್ಯಮಂತ್ರಿಯಾದ ಚರಣ್ ಜಿತ್ ಸಿಂಗ್ ಚನ್ನಿ ಅವರಿಗೆ ಆದ್ಯತೆ ನೀಡಿತು.
ಜಾಖರ್ ಅವರ ಸೋದರಳಿಯ ಸಂದೀಪ್ ಜಾಖರ್ ಅವರು ಫೆಬ್ರವರಿ 20 ರಂದು ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಅಬೋಹರ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಜಾಖರ್ ಅವರು ಮಾಜಿ ಕೇಂದ್ರ ಸಚಿವ ಮತ್ತು ಲೋಕಸಭೆ ಸ್ಪೀಕರ್ ಬಲರಾಮ್ ಜಾಖರ್ ಅವರ ಮಗ.
1954 ರಲ್ಲಿ ಅಬೋಹರ್‌ನ ಪಂಜ್ಕೋಸಿ ಗ್ರಾಮದಲ್ಲಿ ಜನಿಸಿದ ಜಾಖರ್ 2002 ರಿಂದ 2017 ರವರೆಗೆ ಅಬೋಹರ್ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದಾರೆ. ಹಿಂದಿನ ಅಕಾಲಿ-ಬಿಜೆಪಿ ಆಡಳಿತದಲ್ಲಿ ಅವರು ಪಂಜಾಬ್ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.
ಜಾಖರ್ ಅವರು 2017 ರಲ್ಲಿ ಬಿಜೆಪಿ ಅಭ್ಯರ್ಥಿಯಿಂದ ಅಬೋಹರ್ ಕ್ಷೇತ್ರದಿಂದ ಸೋತಿದ್ದರು.
2017 ರಲ್ಲಿ ಹಾಲಿ ಸಂಸದ ವಿನೋದ್ ಖನ್ನಾ ಅವರ ನಿಧನದ ನಂತರ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಅವರು ಯಶಸ್ವಿಯಾಗಿ ಸ್ಪರ್ಧಿಸಿದ್ದರು. ಅವರನ್ನು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರನ್ನಾಗಿಯೂ ನೇಮಿಸಲಾಯಿತು. ನಂತರ ಅವರ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ಬಂದರು.
ಗುರುದಾಸ್‌ಪುರ ಕ್ಷೇತ್ರದಿಂದ 2019 ರ ಲೋಕಸಭಾ ಚುನಾವಣೆಯಲ್ಲಿ ಜಾಖರ್ ಅವರು ಬಿಜೆಪಿ ಅಭ್ಯರ್ಥಿ ಮತ್ತು ನಟ ಸನ್ನಿ ಡಿಯೋಲ್ ವಿರುದ್ಧ 82,000 ಮತಗಳ ಅಂತರದಿಂದ ಸೋಲು ಅನುಭವಿಸಿದರು.
ಇದನ್ನೂ ಓದಿ: ಅಸಾದುದ್ದೀನ್ ಓವೈಸಿ ವಾಹನದ ಮೇಲೆ ಗುಂಡಿನ ದಾಳಿ ಪ್ರಕರಣ: ಝೆಡ್ ಕೆಟಗರಿ ಭದ್ರತೆಯನ್ನು ಸ್ವೀಕರಿಸಲು ಓವೈಸಿಗೆ ಅಮಿತ್ ಶಾ ಮನವಿ