ಚಂಡೀಗಢ: ಪಂಜಾಬ್‌ನಲ್ಲಿ (Punjab) ಶಾಂತಿ ಕದಡಲು ಕೆಲವು ಮೂಲಭೂತವಾದಿ ಶಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿರುವ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು (Navjot Singh Sidhu) ಭಾನುವಾರ ಮಲೇರ್‌ಕೋಟ್ಲಾದಲ್ಲಿ(Malerkotla) ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ಯಾವುದೇ ಧಾರ್ಮಿಕ ಗ್ರಂಥಗಳನ್ನು ಅಪವಿತ್ರಗೊಳಿಸಿದ ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಹೇಳಿದರು. ನಾವು ಏಕತೆಯ ಧ್ವನಿಯನ್ನು ಸ್ಥಾಪಿಸಬೇಕಾಗಿದೆ. ಮೂಲಭೂತವಾದಿ ಶಕ್ತಿಗಳು ನಮ್ಮ ಒಗ್ಗಟ್ಟನ್ನು ಕದಡುತ್ತಿವೆ. ಆದಾಗ್ಯೂ, ರಾಷ್ಟ್ರದಾದ್ಯಂತ ಒಂದು ಧರ್ಮವು ಮೇಲು ಮತ್ತು ಇನ್ನೊಂದು ಧರ್ಮವನ್ನು ಕೀಳು ಎಂದು ಬಿಂಬಿಸಿದಾಗ, ಪಂಜಾಬ್ ಯಾವಾಗಲೂ ಅದರ ವಿರುದ್ಧ ನಿಲ್ಲುತ್ತದೆ. ಪಂಜಾಬ್‌ನಲ್ಲಿ ಎಲ್ಲಾ ಜನರು ಸಮಾನರು. ಗುರುಗ್ರಂಥ ಸಾಹಿಬ್, ಗೀತೆ ಅಥವಾ ಕುರಾನ್ ಯಾವುದಾದರೂ ಅಗೌರವದ ಘಟನೆ ನಡೆದರೆ, ತಪ್ಪಿತಸ್ಥರನ್ನು ಗಲ್ಲಿಗೇರಿಸಬೇಕು ಎಂದು ಸಿಧು ಹೇಳಿದರು. ಸ್ಥಳೀಯ ಶಾಸಕಿ,ಕ್ಯಾಬಿನೆಟ್ ಸಚಿವೆ ರಜಿಯಾ ಸುಲ್ತಾನಾ ಮತ್ತು ಅವರ ಪತಿ ಮತ್ತು ಮಾಜಿ ಡಿಜಿಪಿ ಮೊಹಮ್ಮದ್ ಮುಸ್ತಫಾ ಅವರೊಂದಿಗೆ ರ್ಯಾಲಿಯಲ್ಲಿ ಭಾಗವಹಿಸಿದ ಸಿಧು, ಸಮುದಾಯವನ್ನು ನಿರ್ಮೂಲನೆ ಮಾಡುವ ಸಂಚು ನಡೆಯುತ್ತಿದೆ ಮತ್ತು ಅಂತಹ ಶಕ್ತಿಗಳನ್ನು ಸೋಲಿಸಲು ಹಿಂದೂಗಳು, ಸಿಖ್ಖರು ಮತ್ತು ಮುಸ್ಲಿಮರು ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಹೇಳಿದರು.
Punjabiyat stands for Unity in Diversity … India is One Family !! pic.twitter.com/k3nTenf5Wp
— Navjot Singh Sidhu (@sherryontopp) December 19, 2021
ಪ್ರತಿಭಟನಾಕಾರರಿಂದ ಭಾಷಣಕ್ಕೆ ಅಡ್ಡಿ
ಇದಕ್ಕೂ ಮೊದಲು, ಸಿಧು ತಮ್ಮ ಭಾಷಣವನ್ನು ಪ್ರಾರಂಭಿಸಲು ಮುಂದಾದಾಗ, ಜಮೀನ್ ಪ್ರಾಪ್ತಿ ಸಂಘರ್ಷ್ ಸಮಿತಿ (ZPSC) ಸದಸ್ಯರು ಮತ್ತು ಪ್ರತಿಭಟನಾನಿರತ ಮಹತ್ವಾಕಾಂಕ್ಷಿ ಶಿಕ್ಷಕರು ಘೋಷಣೆಗಳನ್ನು ಕೂಗಿದರು. ಆದರೆ ಪೊಲೀಸರು ಅವರನ್ನು ತೆರವುಗೊಳಿಸಿದರು. ಎಸ್‌ಸಿ ಸಮುದಾಯಕ್ಕೆ ಕಾಯ್ದಿರಿಸಿದ ಭೂಮಿ ಮತ್ತು ಉದ್ಯೋಗಕ್ಕಾಗಿ ಪ್ರತಿಭಟನಾಕಾರರು ಒತ್ತಾಯಿಸಿದರು. ಅಂಗನವಾಡಿ ಕಾರ್ಯಕರ್ತೆಯರು, ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರು ಮತ್ತು ಇತರ ಗುತ್ತಿಗೆ ನೌಕರರು ಸಹ ಕಾಯಂಗೊಳಿಸುವುದು ಮತ್ತು ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಮೀನ್ ಪ್ರಾಪ್ತಿ ಸಂಘರ್ಷ್ ಸಮಿತಿ ಪ್ರತಿಭಟನೆ ನಡೆಸಿದೆ.
ಅಮೃತಸರದ ಸ್ವರ್ಣ ಮಂದಿರ ಅಪವಿತ್ರಗೊಳಿಸಲು ಯತ್ನ; ಯುವಕನನ್ನು ಥಳಿಸಿ ಕೊಂದ ಸಿಖ್ಖರು!
ಪಂಜಾಬ್ನಲ್ಲಿರುವ ಸಿಖ್ಖರ ಪವಿತ್ರ ಕ್ಷೇತ್ರವಾದ ಅಮೃತಸರದ ಸ್ವರ್ಣ ಮಂದಿರವನ್ನು ಅಪವಿತ್ರಗೊಳಿಸಲು ಪ್ರಯತ್ನಿಸಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೋಪಗೊಂಡ ಭಕ್ತರು ಯುವಕನೊಬ್ಬನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಶನಿವಾರ ನಡೆದಿದೆ. ಅಮೃತಸರ ಗೋಲ್ಡನ್ ಟೆಂಪಲ್ನಲ್ಲಿ ಸಂಜೆ ನಡೆಯುವ ಪ್ರಾರ್ಥನೆ ವೇಳೆ ಆ ಯುವಕ ಕಬ್ಬಿಣದ ಸರಪಳಿಯ ಮೇಲಿನಿಂದ ಹಾರಿ ಗುರು ಗ್ರಂಥ ಸಾಹೀಬ್ (ಸಿಖ್ ಧರ್ಮದ ಪವಿತ್ರ ಗ್ರಂಥ) ಬಳಿ ಇರಿಸಲಾಗಿದ್ದ ಖಡ್ಗವನ್ನು ಎತ್ತಿಕೊಂಡಿದ್ದ. ಇದರಿಂದ ಕೋಪಗೊಂಡ ಪ್ರಾರ್ಥನಾನಿರತ ಸಿಖ್ಖರ ಗುಂಪು ಹಾಗೂ ಅಲ್ಲಿದ್ದ ಭದ್ರತಾ ಸಿಬ್ಬಂದಿ ಆತನಿಗೆ ಮನಬಂದಂತೆ ಥಳಿಸಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಆತ ಸಾವನ್ನಪ್ಪಿದ್ದಾನೆ.
ನೀಟಾಗಿ ಕ್ಷೌರ ಮಾಡಿಸಿಕೊಂಡಿದ್ದ ಆತ ತಲೆಗೆ ಹಳದಿ ಬಣ್ಣದ ಬಟ್ಟೆ ಕಟ್ಟಿಕೊಂಡಿದ್ದ. ಖಡ್ಗದ ಬಳಿ ಯಾರೂ ಹೋಗದಂತೆ ಕಬ್ಬಿಣದ ಸರಪಳಿಯನ್ನು ಹಾಕಲಾಗಿತ್ತು. ಆ ಸರಪಳಿಯನ್ನು ದಾಟಿ ಆತ ಖಡ್ಗ ಎತ್ತಿಕೊಂಡಿದ್ದ. ತಕ್ಷಣ ಕರ್ತವ್ಯನಿರತ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುವಾಗ ಆತನಿಗೆ ಥಳಿಸಿದ್ದರು. ಅಲ್ಲಿದ್ದ ಸಿಖ್ಖರು ಕೂಡ ಆತನಿಗೆ ಹೊಡೆದಿದ್ದರು.
ಇದನ್ನೂ ಓದಿ: ಅಮರಿಂದರ್ ಸಿಂಗ್ ದುರಹಂಕಾರಿ ರಾಜ; ಪಂಜಾಬ್ ಲೋಕ ಕಾಂಗ್ರೆಸ್-ಬಿಜೆಪಿ ಮೈತ್ರಿ ಬಗ್ಗೆ ನವಜೋತ್ ಸಿಂಗ್ ಸಿಧು ವಾಗ್ದಾಳಿ
ಇದನ್ನೂ ಓದಿ: Golden Temple: ಅಮೃತಸರದ ಸ್ವರ್ಣ ಮಂದಿರ ಅಪವಿತ್ರಗೊಳಿಸಲು ಯತ್ನ; ಯುವಕನನ್ನು ಥಳಿಸಿ ಕೊಂದ ಸಿಖ್ಖರು!