ನವದೆಹಲಿ: ಕಳೆದ ವರ್ಷ ಅಮರಿಂದರ್ ಸಿಂಗ್ (Amarinder Singh)- ನವಜೋತ್ ಸಿಂಗ್ ಸಿಧು (Navjot Singh Sidhu) ನಡುವಿನ ಸಂಘರ್ಷ ಉತ್ತುಂಗದಲ್ಲಿದ್ದಾಗ ನವಜೋತ್ ಸಿಧುಗೆ ದಾರಿ ಮಾಡಿಕೊಟ್ಟ ಪಂಜಾಬ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಸುನೀಲ್ ಜಖಾರ್ (Sunil Jakhar) 2022ರ ಪಂಜಾಬ್ ವಿಧಾನಸಭಾ ಚುನಾವಣೆಗೂ ಮುನ್ನ ಹೊಸ ಬಾಂಬ್ ಸಿಡಿಸಿದ್ದಾರೆ. ಅಮರಿಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ನಾನೇ ಪಂಜಾಬ್ ಮುಖ್ಯಮಂತ್ರಿಯಾಗಬೇಕು ಎಂದು 79 ಕಾಂಗ್ರೆಸ್ ಶಾಸಕರಲ್ಲಿ 42 ಶಾಸಕರು ಬಯಸಿದ್ದರು. ಕೇವಲ ಇಬ್ಬರು ಶಾಸಕರು ಮಾತ್ರ ಚರಣ್ಜಿತ್ ಸಿಂಗ್ ಚನ್ನಿ ಪಂಜಾಬ್ ಸಿಎಂ ಆಗಬೇಕೆಂದು ಬಯಸಿದ್ದರು ಎಂದು ಸುನಿಲ್ ಜಖಾರ್ ಹೇಳಿದ್ದಾರೆ.
ಈ ಬಗ್ಗೆ ವಿವರವಾದ ಮಾಹಿತಿ ನೀಡಿದ ಸುನಿಲ್ ಜಖಾರ್ 16 ಶಾಸಕರು ಪ್ರಸ್ತುತ ಉಪ ಮುಖ್ಯಮಂತ್ರಿ ಸುಖ್ಜಿಂದರ್ ರಾಂಧವಾ ಮುಂಬರುವ ಚುನಾವಣೆ ಬಳಿಕ ಸಿಎಂ ಆಗಬೇಕೆಂದು ಬಯಸಿದ್ದಾರೆ. 12 ಶಾಸಕರು ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪತ್ನಿ ಪ್ರಣೀತ್ ಕೌರ್ ಉಪ ಮುಖ್ಯಮಂತ್ರಿಯಾಗಬೇಕೆಂದು ಬಯಸಿದ್ದಾರೆ. ಆರು ಶಾಸಕರು ನವಜೋತ್ ಸಿಂಗ್ ಸಿಧು ಮುಖ್ಯಮಂತ್ರಿಯಾಗಬೇಕೆಂದು ಬಯಸಿದ್ದರು. ನಾನು ಉಪಮುಖ್ಯಮಂತ್ರಿಯಾಗುವ ಪ್ರಸ್ತಾಪವನ್ನು ನಿರಾಕರಿಸಿದ್ದೆ ಎಂದು ಸುನಿಲ್ ಜಖಾರ್ ಹೇಳಿದ್ದಾರೆ. ಈ ಹೇಳಿಕೆ ಪಂಜಾಬ್ ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದೆ.
ಅಬೋಹರ್ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸುನಿಲ್ ಜಖಾರ್ ಈ ಮಹತ್ವದ ಹೇಳಿಕೆ ನೀಡಿದ್ದಾರೆ. ಮುಂಬರುವ ಚುನಾವಣೆಗೆ ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿಯಾಗಲು ನನ್ನ ಹೆಸರು ಮುಂಚೂಣಿಯಲ್ಲಿದೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದು ಸಾಮಾನ್ಯ ಪದ್ಧತಿಯಲ್ಲ ಎಂದು ಕಾಂಗ್ರೆಸ್ ಹೇಳಿದ್ದರೂ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರ ಬೇಡಿಕೆಗೆ ಪಕ್ಷವು ಈ ಬಾರಿ ಮಣಿಯಲಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಭಾವನೆಗೆ ತಕ್ಕಂತೆ ನವಜೋತ್ ಸಿಂಗ್ ಸಿಧುಗಿಂತ ಚರಣ್ಜಿತ್ ಸಿಂಗ್ ಚನ್ನಿ ಸಂಭಾವ್ಯ ಅಭ್ಯರ್ಥಿಯಾಗಿ ಹೊರಹೊಮ್ಮುತ್ತಿದ್ದಾರೆ.
ಮುಖ್ಯಮಂತ್ರಿಯಾಗಿ ಚರಣ್ಜಿತ್ ಸಿಂಗ್ ಚನ್ನಿ ಹೆಸರು ಅಚ್ಚರಿ ಮೂಡಿಸಿದರೆ, ಅಮರಿಂದರ್ ಸಿಂಗ್ ಅವರ ರಾಜೀನಾಮೆಯ ನಂತರ ಸುನೀಲ್ ಜಖಾರ್ ಅವರ ಹೆಸರನ್ನು ಸಂಭಾವ್ಯ ಮುಖ್ಯಮಂತ್ರಿ ಎಂದು ವ್ಯಾಪಕವಾಗಿ ಚರ್ಚಿಸಲಾಗಿದೆ.
ಇದನ್ನೂ ಓದಿ: Rain Updates: ದೆಹಲಿ, ಪಂಜಾಬ್, ಹರಿಯಾಣದಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ಭಾರೀ ಮಳೆ ಸಾಧ್ಯತೆ
Published On - 3:54 pm, Wed, 2 February 22