ಹೈದರಾಬಾದ್, ಡಿಸೆಂಬರ್ 3: ಈ ಬಾರಿಯ ತೆಲಂಗಾಣ ಚುನಾವಣೆ ಬಗ್ಗೆ ಆಸಕ್ತಿ ಹೊಂದಿದವರಿಗೆ ಬರ್ರೆಲಕ್ಕ ಹೆಸರು ಪರಿಚಿತವಿರಬಹುದು. ಮತದಾನಕ್ಕೂ ಮುನ್ನವೇ ತೆಲಂಗಾಣದಲ್ಲಿ ಸಂಚಲನ ಸೃಷ್ಟಿಸಿದ ಬರೆಲಕ್ಕ ಅಕಾ ಕಾರ್ಣೆ ಶಿರೀಷಾ (Barrelakka Karni Shireesha) ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಕೊಲ್ಲಾಪುರ ಕ್ಷೇತ್ರದಲ್ಲಿ ಮುನ್ನಡೆ ಗಳಿಸಿದ್ದಾಳೆ. ಜುಪಲ್ಲಿ ಕೃಷ್ಣರಾವ್ ಮತ್ತು ಶಿರೀಷಾ ಮಧ್ಯೆ ನಿಕಟ ಪೈಪೋಟಿ ನಡೆದಿದೆ. ಒಂದು ಹಂತದಲ್ಲಿ ಬರೆಲಕ್ಕ ಮುನ್ನಡೆಯನ್ನೂ ಪಡೆದಿದ್ದು ಗಮನಾರ್ಹ.
25 ವರ್ಷದ ಶಿರೀಷಾ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವ ಮುಂಚೆಯೇ ರಾಜ್ಯಾದ್ಯಂತ ಖ್ಯಾತರಾಗಿದ್ದವರು, ವೈರಲ್ ಆಗಿದ್ದವರು. ಶಿರೀಷಾ ಅವರ ಒಂದು ಇನ್ಸ್ಟಾಗ್ರಾಂ ವಿಡಿಯೋ 2021ರಲ್ಲಿ ಬಹಳ ವೈರಲ್ ಆಗಿತ್ತು. ಪದವಿ ಪಡೆದಿದ್ದರೂ ಕೆಲಸ ಸಿಕ್ಕಿಲ್ಲ. ಅಮ್ಮನಿಂದ ಹಣ ಪಡೆದು 4 ಎಮ್ಮೆಗಳನ್ನು ಖರೀದಿಸಿದ್ದೇನೆ ಎಂದು ಈ ಹುಡುಗಿ ಇನ್ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಪೋಸ್ಟ್ ಹಾಕಿದ್ದಳು. ಆಗ ಆ ವಿಡಿಯೋ ದೊಡ್ಡ ವೈರಲ್ ಆಗಿಹೋಗಿತ್ತು. ಆಗಿನಿಂದ ಆಕೆಯ ಹೆಸರು ಬರ್ರೆಲಕ್ಕ ಎಂದೇ ಖ್ಯಾತವಾಗಿದೆ. ಬರ್ರೆಲ ಎಂದರೆ ತೆಲುಗಿನಲ್ಲಿ ಎಮ್ಮೆ ಎಂದರ್ಥ.
ಇದನ್ನೂ ಓದಿ: Telangana Results: ತೆಲಂಗಾಣ ಕಾಂಗ್ರೆಸ್ ಶಾಸಕರ ರಕ್ಷಣೆಗೆ ಹೈದರಾಬಾದ್ ತಲುಪಿದ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್
ತೆಲಂಗಾಣದ ನಾಗರ್ ಕರ್ನೂಲ್ ಜಿಲ್ಲೆಯ ಶಿರೀಷಾ ಒಂದು ರೀತಿಯಲ್ಲಿ ತೆಲಂಗಾಣದ ನಿರುದ್ಯೋಗಿಗಳ ಧ್ವನಿಯಾಗಿದ್ದಾರೆ. ಹಲವು ಸಾಮಾಜಿಕ ಕಾರ್ಯಕರ್ತರು, ಬುದ್ಧಿಜೀವಿಗಳು ಶಿರೀಷಾ ಬೆನ್ನಿಗೆ ನಿಂತು ಬೆಂಬಲ ಕೊಟ್ಟಿದ್ದಾರೆ. ಆಕೆ ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಪೋಸ್ಟ್ಗಳು ಸಾಕಷ್ಟು ಜನಪ್ರಿಯತೆ ಗಳಿಸುತ್ತವೆ. ಈ ಚುನಾವಣೆಯಲ್ಲಿ ಆಕೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದಾಗಲೇ ಇತರ ಪ್ರಬಲ ಅಭ್ಯರ್ಥಿಗಳ ಎದೆ ನಡುಗಿಸಿತ್ತು. ನಾಮಪತ್ರ ವಾಪಸ್ ಪಡೆಯಲು ಸಾಕಷ್ಟು ಒತ್ತಡಗಳು ಆಕೆಗೆ ಬರುತ್ತಿದ್ದವು. ಶಾಲೆಗೆ ಹೋಗುವ ಆಕೆಯ ತಮ್ಮನ ಮೇಲೆ ಹಲ್ಲೆಗೆ ಪ್ರಯತ್ನವೂ ಆಗಿತ್ತು. ಆದರೂ ಅದ್ಯಾವುದಕ್ಕೂ ಜಗ್ಗದೇ ಬರ್ರೆಲಕ್ಕ ಚುನಾವಣಾ ಕಣಕ್ಕದಲ್ಲಿ ಮುಂದುವರಿಯಲು ನಿರ್ಧರಿಸಲು ಧೈರ್ಯ ಮಾಡಿದ್ದು ಶ್ಲಾಘನೀಯ.
ತಮ್ಮ ಕುಟುಂಬಕ್ಕೆ ಬೆದರಿಕೆ ಬಂದಿರುವ ಬಗ್ಗೆ ಈಕೆ ಗದ್ಗದಿತಗೊಂಡು ಮಾತನಾಡಿದ ವಿಡಿಯೋ ಇತ್ತೀಚೆಗೆ ಬಹಳ ವೈರಲ್ ಆಯಿತು. ಈಕೆಗೆ ಜನಬೆಂಬಲ ಇನ್ನಷ್ಟು ಹೆಚ್ಚಿಸಿತ್ತು. ಚುನಾವಣೆಯಲ್ಲಿ ಈಕೆಯನ್ನು ಗೆಲ್ಲಿಸಲು ಸ್ವಯಂಪ್ರೇರಿತವಾಗಿ ಕಾರ್ಯಕರ್ತರ ಪಡೆಯೇ ಸಿದ್ಧವಾಗಿತ್ತು. ಈಕೆ ಹೈಕೋರ್ಟ್ ಮೆಟ್ಟಿಲು ಹತ್ತಿ ರಕ್ಷಣೆ ಪಡೆದರು.
ಇದನ್ನೂ ಓದಿ: ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ರೆಡ್ಡಿ ಮನೆಗೆ ಬಿಗಿ ಭದ್ರತೆ
ಕೊಲ್ಲಾಪುರದಲ್ಲಿ ಶಿರೀಷಾ ಮುನ್ನಡೆ ಗಳಿಸುತ್ತಾಳೆ ಎಂದು ಅಂದಾಜು ಮಾಡಿದವರು ಬಹಳ ವಿರಳ. ಹಾಲಿ ಶಾಸಕ ಬಿಆರ್ಎಸ್ನ ಬೀರಮ್ ಹರ್ಷವರ್ಧನ್ ರೆಡ್ಡಿ. ಈ ಕ್ಷೇತ್ರದಲ್ಲಿ ಹಿಂದೆ ಐದು ಬಾರಿ ಶಾಸಕರಾಗಿ ಗೆದ್ದವರು ಜುಪಲ್ಲಿ ಕೃಷ್ಣರಾವ್ ಕಾಂಗ್ರೆಸ್ನವರು. ಈ ಇಬ್ಬರು ಪ್ರಬಲ ಅಭ್ಯರ್ಥಿಗಳಿಗೆ ಪ್ರತಿಸ್ಪರ್ಧಿಯಾದವರು ಬರ್ರೆಲಕ್ಕ.
ಆದರೆ, ಜುಪಲ್ಲಿ ಕೃಷ್ಣರಾವ್ ಗೆಲುವಿನತ್ತ ಮುನ್ನಡೆದಿದ್ದಾರಾದರೂ ಶಿರೀಷಾ ಅಕಾ ಬರ್ರೆಲಕ್ಕ ಒಂದು ಹಂತದಲ್ಲಿ ಮುನ್ನಡೆ ಗಳಿಸಿದ್ದರು ಎಂಬುದೇ ಸೋಜಿಗದ ಸಂಗತಿ. ಈಕೆ ನಾಮಪತ್ರ ಸಲ್ಲಿಸಿದಾಗ ಎದುರಾಳಿಗಳು ಯಾಕೆ ಬೆಚ್ಚಿದ್ದರು ಎಂಬುದನ್ನು ಈಕೆಯ ಪ್ರಬಲ ಪೈಪೋಟಿಯೇ ತೋರಿಸಿಕೊಟ್ಟಿದೆ. ಈಕೆ ಈ ಚುನಾವಣೆಯಲ್ಲಿ ಸೋತರೂ ಕೂಡ ಈಕೆ ಮೂಡಿಸಿದ ಛಾಪು ನಿಜಕ್ಕೂ ಹೊಸ ಇತಿಹಾಸ ಪುಟ ತೆರೆಸಿದೆ.
ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:25 pm, Sun, 3 December 23