UP Assembly Elections: ನನ್ನ ಕ್ಷಮಿಸಿಬಿಡಿ; ಚುನಾವಣಾ ರ್ಯಾಲಿ ವೇಳೆ ಕಿವಿ ಹಿಡಿದು ಬಸ್ಕಿ ಹೊಡೆದ ಬಿಜೆಪಿ ಶಾಸಕ

| Updated By: ಸುಷ್ಮಾ ಚಕ್ರೆ

Updated on: Feb 24, 2022 | 2:25 PM

ಬಿಜೆಪಿ ಶಾಸಕ ಭೂಪೇಶ್ ಚೌಬೆ ತಮ್ಮ ಕುರ್ಚಿಯ ಮೇಲೆ ನಿಂತು, ತಮ್ಮ ಕಿವಿಗಳನ್ನು ಹಿಡಿದುಕೊಂಡು, ಕಳೆದ ಐದು ವರ್ಷಗಳಲ್ಲಿ ತಾವು ಏನಾದರೂ ತಪ್ಪು ಮಾಡಿದ್ದರೆ ಅದನ್ನು ಕ್ಷಮಿಸಿ ಎಂದು ವೇದಿಕೆಯ ಮೇಲೇ ಬಸ್ಕಿ ಹೊಡೆದಿದ್ದಾರೆ.

UP Assembly Elections: ನನ್ನ ಕ್ಷಮಿಸಿಬಿಡಿ; ಚುನಾವಣಾ ರ್ಯಾಲಿ ವೇಳೆ ಕಿವಿ ಹಿಡಿದು ಬಸ್ಕಿ ಹೊಡೆದ ಬಿಜೆಪಿ ಶಾಸಕ
ಬಿಜೆಪಿ ಶಾಸಕನ ವಿಡಿಯೋ
Follow us on

ಉತ್ತರ ಪ್ರದೇಶದ ಸೋನ್‌ಭದ್ರದ ರಾಬರ್ಟ್ಸ್‌ಗಂಜ್ ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ (BJP) ಶಾಸಕರೊಬ್ಬರು ಇತ್ತೀಚೆಗೆ ಚುನಾವಣಾ ರ್ಯಾಲಿಯಲ್ಲಿ ಮಾಡಿದ ಕೆಲಸದಿಂದ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಬಿಜೆಪಿ ಶಾಸಕ ಭೂಪೇಶ್ ಚೌಬೆ ತಮ್ಮ ಕುರ್ಚಿಯ ಮೇಲೆ ನಿಂತು, ತಮ್ಮ ಕಿವಿಗಳನ್ನು ಹಿಡಿದುಕೊಂಡು, ಕಳೆದ ಐದು ವರ್ಷಗಳಲ್ಲಿ ತಾವು ಏನಾದರೂ ತಪ್ಪು ಮಾಡಿದ್ದರೆ ಅದನ್ನು ಕ್ಷಮಿಸಿ ಎಂದು ವೇದಿಕೆಯ ಮೇಲೇ ಬಸ್ಕಿ ಹೊಡೆದಿದ್ದಾರೆ. ಇದು ಚುನಾವಣಾ ಗಿಮಿಕ್ಕಾ? ಅಥವಾ ನಿಜವಾದ ಪಶ್ಚಾತ್ತಾಪವಾ? ಎಂಬ ಅನುಮಾನ ಜನರಲ್ಲಿ ಮೂಡುತ್ತಿದ್ದು, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಜಾರ್ಖಂಡ್‌ನ ಮಾಜಿ ಆರೋಗ್ಯ ಸಚಿವ ಮತ್ತು ಬಿಜೆಪಿ ಶಾಸಕರೂ ಆಗಿರುವ ಭಾನು ಪ್ರತಾಪ್ ಶಾಹಿ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾಗ ಈ ಘಟನೆ ಸಂಭವಿಸಿದೆ. ‘ನಾನು ಕೈ ಜೋಡಿಸಿ, ನಿಮ್ಮ ಕ್ಷಮೆಯನ್ನು ಕೇಳುತ್ತಿದ್ದೇನೆ’ ಎಂದು ಭೂಪೇಶ್ ಚೌಬೆ ಹೇಳಿದ್ದಾರೆ. ಆ ವೇದಿಕೆಯಲ್ಲಿ ಚೌಬೆ ಬಸ್ಕಿ ಹೊಡೆಯುತ್ತಿದ್ದಂತೆ ಜೈಕಾರ ಹಾಕಿದ ಅವರ ಬೆಂಬಲಿಗರು ಹರ್ಷೋದ್ಘಾರ ಹಾಕಿದ್ದಾರೆ.

2017ರ ಚುನಾವಣೆಯಲ್ಲಿ ನನಗೆ ನೀವೆಲ್ಲರೂ ಆಶೀರ್ವಾದ ನೀಡಿದ್ದೀರಿ. ಅದೇ ರೀತಿ ಈ ಬಾರಿಯೂ ರಾಬರ್ಟ್ಸ್‌ಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕಮಲ ಅರಳಲು ನಿಮ್ಮ ಆಶೀರ್ವಾದವನ್ನು ನೀಡಿ ಎಂದು ಅವರು ಹೇಳಿದ್ದಾರೆ. ಯಾರೇ ಫೋನ್ ಕರೆಗಳನ್ನು ಸ್ವೀಕರಿಸದ ಮತ್ತು ತಮ್ಮ ಕ್ಷೇತ್ರದಲ್ಲಿ ನಿಷ್ಕ್ರಿಯರಾಗಿದ್ದ ಚೌಬೆ ಬಗ್ಗೆ ಮತದಾರರು ಅಸಮಾಧಾನ ಹೊಂದಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಇದೀಗ ಚೌಬೆ ಮತದಾರರ ಎದುರು ಕ್ಷಮೆ ಯಾಚಿಸಿದ್ದಾರೆ.

ಚೌಬೆ ಅವರು 2017ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅವಿನಾಶ್ ಕುಶ್ವಾಹಾ ಅವರನ್ನು ಸೋಲಿಸಿ, ಮೊದಲ ಬಾರಿಗೆ ಶಾಸಕರಾಗಿದ್ದರು.

ಉತ್ತರ ಪ್ರದೇಶದ ರಾಬರ್ಟ್ಸ್‌ಗಂಜ್ ಕ್ಷೇತ್ರದಲ್ಲಿ ಏಳನೇ ಮತ್ತು ಕೊನೆಯ ಹಂತದಲ್ಲಿ ಮಾರ್ಚ್ 7ರಂದು ಮತದಾನ ನಡೆಯಲಿದೆ. ಮಾರ್ಚ್ 10 ರಂದು ಎಲ್ಲಾ ವಿಧಾನಸಭಾ ಚುನಾವಣಾ ಮತಗಳ ಎಣಿಕೆ ನಡೆಯಲಿದೆ.

ಇದನ್ನೂ ಓದಿ: UP Assembly Elections 2022: ಲಕ್ಷ್ಮಿ ದೇವತೆ ಆನೆ, ಸೈಕಲ್ ಮೇಲೆ ಯಾರ ಮನೆಗೂ ಬರುವುದಿಲ್ಲ; ರಾಜನಾಥ್ ಸಿಂಗ್ ಟೀಕೆ

UP Assembly Polls: ಯೋಗಿ ಆದಿತ್ಯನಾಥ್ ನನ್ನನ್ನು ಕೊಲ್ಲಲು ಪ್ಲಾನ್ ಮಾಡಿದ್ದಾರೆ; ಓಂ ಪ್ರಕಾಶ್ ರಾಜಭಾರ್ ಗಂಭೀರ ಆರೋಪ

Published On - 2:23 pm, Thu, 24 February 22