UP Assembly Poll 2022: ಇಂದು ದೆಹಲಿಯಲ್ಲಿ ಮಹತ್ವದ ಸಭೆ ಕರೆದಿರುವ ಬಿಜೆಪಿ ಹೈಕಮಾಂಡ್​; ಸಿಎಂ ಯೋಗಿ ಆದಿತ್ಯನಾಥ್​ ಭಾಗಿ

| Updated By: Lakshmi Hegde

Updated on: Jan 17, 2022 | 8:37 AM

ಉತ್ತರಪ್ರದೇಶದಲ್ಲಿ ಒಟ್ಟು ಏಳು ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಎರಡು ಹಂತದ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದರೂ, ಇನ್ನೂ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಮಾಡಬೇಕಿದೆ

UP Assembly Poll 2022: ಇಂದು ದೆಹಲಿಯಲ್ಲಿ ಮಹತ್ವದ ಸಭೆ ಕರೆದಿರುವ ಬಿಜೆಪಿ ಹೈಕಮಾಂಡ್​; ಸಿಎಂ ಯೋಗಿ ಆದಿತ್ಯನಾಥ್​ ಭಾಗಿ
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್
Follow us on

ಉತ್ತರಪ್ರದೇಶದ ವಿಧಾನಸಭೆ ಚುನಾವಣೆ (Uttar Pradesh Assembly Election 2022) ಸಮೀಪಿಸುತ್ತಿರುವ ಬೆನ್ನಲ್ಲೇ, ಚುನಾವಣಾ ಕಾರ್ಯತಂತ್ರ ಮತ್ತು ಪ್ರಣಾಳಿಕೆ ಸಂಬಂಧ ಚರ್ಚಿಸಲು ಇಂದು ಬಿಜೆಪಿ ನಾಯಕರು ಬಹುಮುಖ್ಯ ಸಭೆ ನಡೆಸಲಿದ್ದಾರೆ.  ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಮತ್ತು ಇತರ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ. ಎರಡು ದಿನಗಳ ಹಿಂದೆ ಉತ್ತರಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ 58 ವಿಧಾನಸಭಾ ಕ್ಷೇತ್ರಗಳಲ್ಲಿ 57 ಅಭ್ಯರ್ಥಿಗಳು ಮತ್ತು ಎರಡನೇ ಹಂತದಲ್ಲಿ ಇಲೆಕ್ಷನ್​ ನಡೆಯಲಿರುವ 55 ಕ್ಷೇತ್ರಗಳ ಪೈಕಿ 48 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದೆ.  ಈ ಮಧ್ಯೆ ಉತ್ತರಪ್ರದೇಶದಲ್ಲಿ ಬಿಜೆಪಿ ಬಿಟ್ಟು ಹೋಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಅದೆಲ್ಲದರ ಬೆನ್ನಲ್ಲೇ ಇಂದು ಬಹುಮುಖ್ಯ ಸಭೆ ಕರೆದಿದೆ.  

ಉತ್ತರಪ್ರದೇಶದಲ್ಲಿ ಒಟ್ಟು ಏಳು ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಎರಡು ಹಂತದ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದರೂ, ಇನ್ನೂ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಮಾಡಬೇಕಿದೆ. ಉಳಿದ 5 ಹಂತದಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡುವ ಕೆಲಸ ಬಾಕಿ ಇದೆ. ಈ ಎಲ್ಲದರ ಬಗ್ಗೆ ಚರ್ಚಿಸಲು ಇಂದು ಬಿಜೆಪಿ ಸಭೆ ಕರೆದಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಕಳೆದ ವಾರ ಗೃಹ ಸಚಿವ ಅಮಿತ್​ ಶಾ ನೇತೃತ್ವದಲ್ಲಿ ಮೂರು ಮ್ಯಾರಥಾನ್​ ಸಭೆಗಳು ನಡೆದಿದ್ದವು. ಅದೂ ಕೂಡ ವಿಧಾನಸಭೆ ಚುನಾವಣೆ ಸಂಬಂಧ ನಡೆದ ಮೀಟಿಂಗ್​ಗಳೇ ಆಗಿದ್ದವು. ಆ ಸಭೆಯಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​, ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಉತ್ತರಪ್ರದೇಶ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್​ ಇತರರು ಪಾಲ್ಗೊಂಡಿದ್ದರು.

ಉತ್ತರಪ್ರದೇಶ ಚುನಾವಣೆಯಲ್ಲಿ ಗೆದ್ದು, ಎರಡನೇ ಬಾರಿಗೆ ಆಡಳಿತ ಹಿಡಿಯಲು ಬಿಜೆಪಿ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಸಾಲುಸಾಲು ಅಭಿವೃದ್ಧಿ ಕಾರ್ಯಕಗಳಿಗೆ ಅಲ್ಲಿ ಚಾಲನೆ/ಉದ್ಘಾಟನೆ ಮಾಡಿದ್ದಾರೆ. ಆದರೆ ಈ ಮಧ್ಯೆ ಬಿಜೆಪಿಯ ಮೂರು ಸಚಿವರು ಸೇರಿ ಒಂದಷ್ಟು ಶಾಸಕರು ಪಕ್ಷ ಬಿಟ್ಟು, ಅಖಿಲೇಶ್​ ಯಾದವ್​ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಹೋಗಿದ್ದಾರೆ. ಅದೂ ಕೂಡ ಎಲ್ಲರೂ ಹಿಂದುಳಿದ ವರ್ಗಗಳಿಗೆ ಸೇರಿದವರೇ ಆಗಿದ್ದಾರೆ.  ಉತ್ತರಪ್ರದೇಶದಲ್ಲಿ ಒಟ್ಟು 403 ವಿಧಾನಸಭಾ ಕ್ಷೇತ್ರಗಳಿದ್ದು, ಫೆ.10, 14, 20, 23, 27 ಮತ್ತು ಮಾರ್ಚ್​ 3ರಂದು ಮತದಾನ ನಡೆಯಲಿದೆ. ಮತ ಎಣಿಕೆ ಮಾರ್ಚ್​ 10ರಂದು ನಡೆಯಲಿದೆ.

ಇದನ್ನೂ ಓದಿ: Virat Kohli: ಕೊಹ್ಲಿ ನಾಯಕತ್ವದಡಿಯಲ್ಲಿ ಏಕದಿನ, ಟಿ20, ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದವರು ಯಾರೆಲ್ಲ ಗೊತ್ತೇ?

Published On - 8:27 am, Mon, 17 January 22