ಬಿಜೆಪಿಗೆ ಇರುವ ಬೆಂಬಲ ಕಣ್ಣಾರೆ ಕಂಡಮೇಲೆ ಕನಸಲ್ಲಿ ಶ್ರೀಕೃಷ್ಣ ಬರುತ್ತಿರಬೇಕು; ವ್ಯಂಗ್ಯವಾಡಿದ ಪ್ರಧಾನಿ ಮೋದಿ
ಬಿಜೆಪಿ ಸರ್ಕಾರದ ಆಡಳಿತದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಯೋಜನೆ ಮೂಲಕ ಅನುಕೂಲ ಮಾಡಿಕೊಡಲಾಗಿದೆ. ಹಾಗಾಗಿಯೇ ಉತ್ತರ ಪ್ರದೇಶ ಮತ್ತೊಮ್ಮೆ ಇಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವನ್ನೇ ಬಯಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಲಖನೌ: ಉತ್ತರ ಪ್ರದೇಶದಲ್ಲಿ ಕೆಲವೇ ದಿನಗಳಲ್ಲಿ ಮತದಾನ ನಡೆಯಲಿದ್ದು (Uttar Pradesh Assembly Election 2022), ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವರ್ಚ್ಯುವಲ್ ಆಗಿ ಮಥುರಾ, ಆಗ್ರಾ ಮತ್ತು ಬುಲಾಂದ್ಶಹರ್ ಗಳಲ್ಲಿ ಜನ್ ಚೌಪಾಲ್ (ಸಾರ್ವಜನಿಕ ಸಂಪರ್ಕದ ಒಂದು ಕಾರ್ಯಕ್ರಮ) ರ್ಯಾಲಿ ನಡೆಸಿದರು. ಈ ವೇಳೆ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸಿದ ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರ ಬರುವುದಕ್ಕೆ ಮೊದಲು ಇಲ್ಲಿ ಆಡಳಿತ ನಡೆಸಿದ ಪಕ್ಷಗಳಿಗೆ ಇಲ್ಲಿನ ಜನರ ಅಗತ್ಯಗಳು ಅರ್ಥವಾಗಲೇ ಇಲ್ಲ. ಜನರ ನಂಬಿಕೆಯನ್ನು ಉಳಿಸಿಕೊಳ್ಳಲೂ ಇಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಲತಾ ಮಂಗೇಶ್ಕರ್ ನಿಧನಕ್ಕೂ ಅವರು ಸಂತಾಪ ಸೂಚಿಸಿದ್ದಾರೆ.
ದಲಿತರೇ ಇರಲಿ, ಶೋಷಿತರೇ ಇರಲಿ, ಹಿಂದುಳಿದವರು, ಬಡವರು, ಮಹಿಳೆಯರೇ ಇರಲಿ ಅಥವಾ ಉದ್ಯಮಿಯೇ ಇರಲಿ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಯೋಜನೆ ಮೂಲಕ ಅನುಕೂಲ ಮಾಡಿಕೊಡಲಾಗಿದೆ. ಹಾಗಾಗಿಯೇ ಉತ್ತರ ಪ್ರದೇಶ ಮತ್ತೊಮ್ಮೆ ಇಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವನ್ನೇ ಬಯಸುತ್ತಿದೆ ಎಂದು ಹೇಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿಗೆ ಜನರು ನೀಡುತ್ತಿರುವ ಅಪಾರ ಪ್ರಮಾಣದ ಬೆಂಬಲವನ್ನು ನೋಡಿ ಕೆಲವರು ಹೆದರಿದ್ದಾರೆ. ಹಾಗಾಗಿಯೇ ಕನಸಲ್ಲಿ ಅವರಿಗೆ ಭಗವಾನ್ ಶ್ರೀಕೃಷ್ಣ ಕಾಣುತ್ತಿದ್ದಾನೆ ಎಂದು ಟೀಕಿಸಿದ್ದಾರೆ. ಇತ್ತೀಚೆಗೆ ಅಖಿಲೇಶ್ ಯಾದವ್ ಹೀಗೊಂದು ಹೇಳಿಕೆ ನೀಡಿದ್ದರು. ನನ್ನ ಕನಸಲ್ಲಿ ಪ್ರತಿರಾತ್ರಿ ಶ್ರೀಕೃಷ್ಣ ಬಂದು, ರಾಮರಾಜ್ಯ ಸ್ಥಾಪಿಸುವಂತೆ ಕೇಳುತ್ತಿದ್ದಾನೆ ಎಂದು ಹೇಳಿದ್ದರು. ಅದನ್ನೇ ಈಗ ಪ್ರಧಾನಿ ಮೋದಿ ಟೀಕಿಸಿದ್ದಾರೆ.
ಲಂತಾ ಮಂಗೇಶ್ಕರ್ ನಿಧನದ ಬಗ್ಗೆ ಮಾತನಾಡಿದ ಅವರು, ಲತಾ ದೀದಿ ಇಂದು ಸ್ವರ್ಗಕ್ಕೆ ಹೋಗಿದ್ದಾರೆ. ನನ್ನಂತ ಹಲವರು ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಆಶಿರ್ವಾದ ಪಡೆದಿದ್ದಾರೆ. ನೀವು ಅವರನ್ನು ಭೇಟಿ ಮಾಡಲು ಯಾವತ್ತೇ ಹೋದರೂ ಸರಿ ಪ್ರೀತಿಯಿಂದ ಆದರಿಸುತ್ತಿದ್ದರು. ಭಾರವಾದ ಹೃದಯದಿಂದ ನಾನು ಅವರಿಗೆ ಇಂದು ಶ್ರದ್ಧಾಂಜಲಿ ಸಲ್ಲಿಸಿದ್ದೇನೆ. ಅವರ ಇಂಪಾದ ಸ್ವರ ಎಂದಿಗೂ ನಮ್ಮೊಂದಿಗೆ ಇದ್ದೇ ಇರುತ್ತದೆ ಎಂದು ಹೇಳಿದರು. ಲತಾ ಮಂಗೇಶ್ಕರ್ ನಿಧನದ ಹಿನ್ನೆಲೆಯಲ್ಲಿ ಬಿಜೆಪಿ ಇಂದು ಹಲವು ಚುನಾವಣಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಣಾಳಿಕೆ ಇಂದು ಬಿಡುಗಡೆ ಮಾಡುವುದಾಗಿ ಹೇಳಿದ್ದ ಬಿಜೆಪಿ, ಲತಾ ಮಂಗೇಶ್ಕರ್ ನಿಧನದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಿಲ್ಲ. ಗೋವಾದಲ್ಲೂ ಕೂಡ ಎರಡು ದಿನ ಶೋಕಾಚರಣೆ ಘೋಷಿಸಲಾಗಿದ್ದು, ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.
ಇದನ್ನೂ ಓದಿ: ಬ್ಯೂಟಿಪುಲ್ ಮಹಿಳೆಯರು ಚಳಿಗಾಲದಲ್ಲಿ ಈ ಬಟ್ಟೆಗಳನ್ನು ಧರಿಸಿ! ಇನ್ನೂ ಅದ್ಭುತವಾಗಿ ಕಾಣಲು ಪಫರ್ ಜಾಕೆಟ್ ಉತ್ತಮ