PM Modi: ವಾರಣಾಸಿಯಲ್ಲಿ ಮೋದಿ ‘ಚಾಯ್ ಪೇ ಚರ್ಚಾ’, ವಿಶ್ವನಾಥ ದೇವಾಲಯದಲ್ಲಿ ಡಮರು ವಾದನ; ವಿಡಿಯೋ ಇಲ್ಲಿದೆ

| Updated By: shivaprasad.hs

Updated on: Mar 05, 2022 | 11:27 AM

Varanasi | Chai Pe Charcha: ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶ ವಿಧಾನಸಭೆಯ ಏಳನೇ ಹಂತದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಅವರು ‘ಚಾಯ್ ಪೆ ಚರ್ಚಾ’ ನಡೆಸಿದ್ದಾರೆ. ಕಾಶಿ ವಿಶ್ವನಾಥ ದೇವಾಲಯದ ಆವರಣದಲ್ಲಿ ಡಮರು ನುಡಿಸಿದ್ದಾರೆ.

PM Modi: ವಾರಣಾಸಿಯಲ್ಲಿ ಮೋದಿ ‘ಚಾಯ್ ಪೇ ಚರ್ಚಾ’, ವಿಶ್ವನಾಥ ದೇವಾಲಯದಲ್ಲಿ ಡಮರು ವಾದನ; ವಿಡಿಯೋ ಇಲ್ಲಿದೆ
ಡಮರು ನುಡಿಸುತ್ತಿರುವ ಪ್ರಧಾನಿ ಮೋದಿ (ಎಡ ಚಿತ್ರ), ‘ಚಾಯ್ ಪೇ ಚರ್ಚಾ’ದಲ್ಲಿ ಪ್ರಧಾನಿ (ಬಲ ಚಿತ್ರ)
Follow us on

ಪ್ರಧಾನಿ ನರೇಂದ್ರ ಮೋದಿ (PM Narendra Modi) ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ವಿಧಾನಗಳ ಮೇಲ್ವಿಚಾರಣೆಯಲ್ಲಿ ನಿರತರಾಗಿದ್ದಾರೆ. ಇದರ ನಡುವೆಯೇ ಅವರು ಉತ್ತರ ಪ್ರದೇಶ ಚುನಾವಣಾ ಪ್ರಚಾರದಲ್ಲೂ ಭಾಗಿಯಾಗಿದ್ದಾರೆ. ಶುಕ್ರವಾರದಂದು ತಮ್ಮ ಸ್ವಕ್ಷೇತ್ರ ವಾರಣಾಸಿಯಲ್ಲಿ (Varanasi) ವಿಧಾನ ಸಭಾ ಚುನಾವಣೆಯ ಅಂಗವಾಗಿ ಅವರು ಪ್ರಚಾರ ನಡೆಸಿದರು. ಈ ವೇಳೆ ಸ್ಥಳೀಯರೊಂದಿಗೆ ಸಹಜವಾಗಿ ಬೆರೆತ ಮೋದಿ ಸ್ಥಳೀಯ ಟೀಯನ್ನು ಸವಿದರು. ಅಲ್ಲದೇ ಕಾಶಿಯ ವಿಶ್ವನಾಥ ದೇವಸ್ಥಾನದ ಆವರಣದಲ್ಲಿ ಡಮರು ನುಡಿಸಿದರು. ಸ್ಥಳೀಯ ರೈಲ್ವೆ ನಿಲ್ದಾಣಕ್ಕೂ ಭೇಟಿ ನೀಡಿದ ಮೋದಿ, ವ್ಯಾಪಾರಸ್ಥರೊಂದಿಗೆ ಮಾತುಕತೆ ನಡೆಸಿದರು. ಸೋಮವಾರ ಉತ್ತರ ಪ್ರದೇಶದಲ್ಲಿ 7ನೇ ಹಂತದ ಮತದಾನ ನಡೆಯಲಿದ್ದು, ಇದರಲ್ಲಿ ವಾರಣಾಸಿ ಕ್ಷೇತ್ರವೂ ಸೇರಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಅವರು ಸ್ಥಳೀಯರೊಂದಿಗೆ ಬೆರೆತ ಕ್ಷಣಗಳ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪ್ರಧಾನಿ ನರೇಂದ್ರ ಮೋದಿ ಅಧಿಕೃತ ಯುಟ್ಯೂಬ್ ಚಾನಲ್​ನಲ್ಲಿ ಕ್ಯಾಂಟ್ ರೈಲ್ವೆ ನಿಲ್ದಾಣದಲ್ಲಿ ಟೀ ಕುಡಿಯುತ್ತಿರುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಬಿಜೆಪಿ ಹಂಚಿಕೊಂಡಿರುವ ಟ್ವೀಟ್​ನಲ್ಲಿ ಸ್ಥಳೀಯರೊಂದಿಗೆ ಪ್ರಧಾನಿ ‘ಚಾಯ್ ಪೇ ಚರ್ಚಾ’ ನಡೆಸುವ ಫೋಟೋಗಳಿವೆ.

ಪ್ರಧಾನಿ ‘ಚಾಯ್ ಪೇ ಚರ್ಚಾ’ ಫೋಟೋ ಹಾಗೂ ವಿಡಿಯೋ ಇಲ್ಲಿದೆ:

ಕಾಶಿ ವಿಶ್ವನಾಥ ದೇವಸ್ಥಾನದ ಆವರಣದಲ್ಲಿ ಪ್ರಧಾನಿ ಮೋದಿ ಡಮರು ನುಡಿಸುತ್ತಿರುವ ವಿಡಿಯೋವನ್ನು ಕೂಡ ಹಂಚಿಕೊಳ್ಳಲಾಗಿದೆ. ಇದಕ್ಕೂ ಮುನ್ನ ಪ್ರಧಾನಿ ವಾರಣಾಸಿಯಲ್ಲಿ ರೋಡ್​ ಶೋ ನಡೆಸಿದ್ದರು. ಅದಕ್ಕೂ ಮುನ್ನ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಪ್ರತಿಮೆಗೆ ಮೋದಿ ಮಾಲಾರ್ಪಣೆ ಮಾಡಿದರು.

ಪ್ರಧಾನಿ ಡಮರು ನುಡಿಸುತ್ತಿರುವ ವಿಡಿಯೋ ಇಲ್ಲಿದೆ:

ವಾರಣಾಸಿ ಲೋಕಸಭಾ ಸ್ಥಾನದ ಅಡಿಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿವೆ. ರೊಹಾನಿಯಾ, ಉತ್ತರ ವಾರಣಾಸಿ, ದಕ್ಷಿಣ ವಾರಣಾಸಿ, ವಾರಣಾಸಿ ಕ್ಯಾಂಟ್ ಮತ್ತು ಸೇವಾಪುರಿ ಕ್ಷೇತ್ರಗಳಿಗೆ ಸೋಮವಾರ ಮತದಾನ ನಡೆಯಲಿದೆ. 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ವಾರಣಾಸಿ ಕ್ಯಾಂಟ್ ಕ್ಷೇತ್ರದಲ್ಲಿ 4,12,297 ಮತದಾರರಿದ್ದರು. ಈ ಕ್ಷೇತ್ರದಲ್ಲಿ ಕಳೆದ ಬಾರಿ 24 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅಂತಿಮವಾಗಿ ಬಿಜೆಪಿ ಜಯಗಳಿಸಿತ್ತು.

ಯುಪಿಯ ವಿಧಾನ ಸಭಾ ಚುನಾವಣೆಯ ಆರನೇ ಹಂತದಲ್ಲಿ ಈಗಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ ಚಲಾಯಿಸಿದ್ದರು. ಗೋರಖ್​ಪುರದಿಂದ ಅವರು ಸ್ಪರ್ಧಿಸುತ್ತಿದ್ದಾರೆ. 403 ಕ್ಷೇತ್ರಗಳ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮಾರ್ಚ್ 10ರಂದು ನಡೆಯಲಿದೆ.

ಇದನ್ನೂ ಓದಿ:

US vs Russia: ಅಮೆರಿಕ ಸೆನೆಟ್​ನಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡ್ಮಿರ್ ಝೆಲೆನ್​ಸ್ಕಿ ಭಾಷಣ

ಸೋಷಿಯಲ್​ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ ಒಂದು ಫೋಟೋ ಮತ್ತು ಕಮೆಂಟ್​; ಸಹಪಾಠಿ ಯುವತಿಯನ್ನು ಗುಂಡಿಕ್ಕಿ ಕೊಂದ ಯುವಕ