PM Narendra Modi: ಎಲ್ಲ 5 ರಾಜ್ಯಗಳಲ್ಲಿ ಬಿಜೆಪಿ ಗೆಲುವು, ಕುಟುಂಬ ರಾಜಕಾರಣ ಮೆರೆಸುವ ನಕಲಿ ಸಮಾಜವಾದಿಗಳಿಗೆ ತಕ್ಕ ಪಾಠ: ನರೇಂದ್ರ ಮೋದಿ
ಆಡಳಿತ ವಿರೋಧಿ ಅಲೆಯ ಮಾತುಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದರು. ಆಡಳಿತಕ್ಕೆ ಪೂರಕವಾದ ಅಲೆಯೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.
ದೆಹಲಿ: ಚುನಾವಣೆ ಘೋಷಣೆಯಾಗಿರುವ ಎಲ್ಲ ಐದು ರಾಜ್ಯಗಳಲ್ಲಿ ಬಿಜೆಪಿ ನಿಚ್ಚಳ ಬಹುಮತ ಗಳಿಸಲಿದೆ. ಉತ್ತರ ಪ್ರದೇಶದಲ್ಲಿ ಆಡಳಿತ ವಿರೋಧ ಅಲೆ ಇಲ್ಲ. ಅಲ್ಲಿರುವುದು ಆಡಳಿತಕ್ಕೆ ಪೂರಕವಾದ ಅಲೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದರು. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ (Uttar Pradesh Elections) ಮೊದಲ ಹಂತದ ಮತದಾನದ ಮುನ್ನಾ ದಿನ ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಮೋದಿ ಪ್ರಸ್ತಾಪಿಸಿದರು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವ ಬಿಜೆಪಿಯ ಮಂತ್ರವನ್ನು ಪುನರುಚ್ಚರಿಸಿದ ಪ್ರಧಾನಿ, ನಾವು ಅಧಿಕಾರದಲ್ಲಿದ್ದಾಗ ಸದಾ ಈ ಆಶಯವನ್ನು ಗಮನದಲ್ಲಿರಿಸಿಕೊಂಡೇ ಕೆಲಸ ಮಾಡುತ್ತೇವೆ ಎಂದರು. ರಾಜಕಾರಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆಡಳಿತ ವಿರೋಧಿ ಅಲೆಯ ಮಾತುಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದರು. ಆಡಳಿತಕ್ಕೆ ಪೂರಕವಾದ ಅಲೆಯೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.
ಸಮಾಜವಾದವನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ ಅವರು, ಸಮಾಜವಾದಿ ಪಕ್ಷವನ್ನು ಕುಟುಂಬ ರಾಜಕಾರಣ ಮಾಡುವ ಪಕ್ಷ ಎಂದು ಕಟುವಾಗಿ ಟೀಕಿಸಿದರು. ಉತ್ತರ ಪ್ರದೇಶದ ಸಮಾಜವಾದಿ ಪಕ್ಷವು ಒಂದೇ ಕುಟುಂಬದ 45 ಜನರಿಗೆ ವಿವಿಧ ಜವಾಬ್ದಾರಿ ನೀಡಿದೆ. 25 ವರ್ಷ ವಯಸ್ಸಿನವರಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿದೆ. ಇಂಥ ಕುಟುಂಬ ರಾಜಕಾರಣ ಪದ್ಧತಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಿಜವಾದ ತೊಡಕು ಎಂದು ಹೇಳಿದರು.
ಚೀನಾ ಗಡಿ ವಿವಾದ ಮತ್ತು ನಿರುದ್ಯೋಗ ಸಮಸ್ಯೆಗಳನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರವನ್ನು ರಾಹುಲ್ ಗಾಂಧಿ ಕಟುವಾಗಿ ಟೀಕಿಸುತ್ತಿದ್ದಾರೆ. ಈ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಧಾನಿ, ‘ಕೇಳಿಸಿಕೊಳ್ಳುವ ವ್ಯವಧಾನವಿಲ್ಲದ ವ್ಯಕ್ತಿ ರಾಹುಲ್ ಗಾಂಧಿ. ಅವರಿಗೆ ನಾನು ಏನೆಂದು ಉತ್ತರ ಹೇಳಲು ಸಾಧ್ಯ’ ಎಂದು ವ್ಯಂಗ್ಯವಾಡಿದರು.
ಸಂಸತ್ತಿನಲ್ಲಿ ರಾಹುಲ್ ಗಾಂಧಿ ಮಾಡಿರುವ ಟೀಕೆ ಕುರಿತು ಪ್ರಸ್ತಾಪಿಸಿದ ನರೇಂದ್ರ ಮೋದಿ, ‘ನಾನು ಯಾರ ತಾತ, ಅಜ್ಜಿ, ಅಪ್ಪನ ಬಗ್ಗೆ ಏನೂ ಮಾತಾಡಲಿಲ್ಲ. ನಾನು ಈ ದೇಶದ ಪ್ರಧಾನಿ ಸ್ಥಾನದಲ್ಲಿದ್ದವರ ವರ್ತನೆಯನ್ನು ವಿಮರ್ಶೆ ಮಾಡಿದ್ದೆ. ದೇಶದ ಇಂದಿನ ಪರಿಸ್ಥಿತಿಗೆ ಮುಖ್ಯ ಕಾರಣ ಕಾಂಗ್ರೆಸ್ ಪಕ್ಷ. ಅಟಲ್ ಜಿ ಮತ್ತು ನನ್ನನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಕಾಂಗ್ರೆಸ್ನವರೇ ಅಥವಾ ಕಾಂಗ್ರೆಸ್ ಪರವಾಗಿದ್ದವರೇ ಆಗಿದ್ದರು. ಹೀಗಾಗಿ ರಾಜಕಾರಣದ ಪ್ರಧಾನ ಧಾರೆಯಲ್ಲಿ ಕಾಂಗ್ರೆಸ್ ಪ್ರಭಾವ ವ್ಯಾಪಕವಾಗಿದೆ. ನಾನು ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಮಾತನಾಡಿದರೆ ಅದರ ಅಪಾಯಗಳ ಬಗ್ಗೆ ಹೇಳುತ್ತಿದ್ದೇನೆ ಅಷ್ಟೇ. ಹೀಗಾಗಿ ಸಂಖ್ಯೆಯ ಬಗ್ಗೆ ನಾನು ಹೇಳುವುದಿಲ್ಲ. ನನಗೆ ತಕರಾರು ಇರುವುದು ಅವರ ಆಲೋಚನಾ ಶೈಲಿಯ ಬಗ್ಗೆ’ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆಗಳ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡರು. ಈ ಸಂಸ್ಥೆಗಳು ತಮ್ಮದೇ ಆದ ಸ್ವತಂತ್ರ ಕಾರ್ಯನಿಧಾನವನ್ನು ಅನುಸರಿಸುತ್ತವೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಅಲ್ಲ ಎಂದು ಹೇಳಿದರು.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಗೆ ಇಂಥ ಭಾಷಣ ಶೋಭೆಯಲ್ಲ; ಅರವಿಂದ್ ಕೇಜ್ರಿವಾಲ್, ಪ್ರಿಯಾಂಕಾ ಗಾಂಧಿ ವಾಗ್ದಾಳಿ
ಇದನ್ನೂ ಓದಿ: ನಮ್ಮನ್ನು ಟೀಕಿಸಿ ಪರವಾಗಿಲ್ಲ, ನಿಮ್ಮ ಕೆಲಸ ಏನೆಂದು ಮರೆಯಬೇಡಿ; ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ತಿರುಗೇಟು