UP Election Voting 2022 Live Streaming ಮೊದಲ ಹಂತದ ಚುನಾವಣೆ ನಾಳೆ, ಮತದಾನಕ್ಕೆ ಸಜ್ಜಾದ ಉತ್ತರ ಪ್ರದೇಶ

TV9kannada Web Team

TV9kannada Web Team | Edited By: Rashmi Kallakatta

Updated on: Feb 09, 2022 | 6:33 PM

ಕೊವಿಡ್-ಸುರಕ್ಷಿತ ಮತದಾನವನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಈ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಲಿದೆ. ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಲಿದೆ

UP Election Voting 2022 Live Streaming ಮೊದಲ ಹಂತದ ಚುನಾವಣೆ ನಾಳೆ, ಮತದಾನಕ್ಕೆ ಸಜ್ಜಾದ ಉತ್ತರ ಪ್ರದೇಶ
ಮತಗಟ್ಟೆಯಲ್ಲಿ ಸಿದ್ಧತೆ ನಡೆಸುತ್ತಿರುವ ಸಿಬ್ಬಂದಿ

ಲಖನೌ: ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ (UP Assembly Elections)ಗುರುವಾರ ಆರಂಭವಾಗಲಿದ್ದು, ರಾಜ್ಯದ ಪಶ್ಚಿಮ ಭಾಗದ 11 ಜಿಲ್ಲೆಗಳಲ್ಲಿ 58 ವಿಧಾನಸಭಾ ಸ್ಥಾನಗಳಿಗೆ ನಾಳೆ ಮತದಾನ(Voting) ನಡೆಯಲಿದೆ. ರಾಜಕೀಯವಾಗಿ ನಿರ್ಣಾಯಕವಾಗಿರುವ ರಾಜ್ಯದಲ್ಲಿ ಏಳು ಹಂತದ ಚುನಾವಣೆಯ ಮೊದಲ ಸುತ್ತಿನ ಮತದಾನದ ಕ್ಷೇತ್ರಗಳಲ್ಲಿ ಪ್ರಚಾರ ಮಂಗಳವಾರ ಸಂಜೆ ಕೊನೆಗೊಂಡಿದೆ. ಕೊವಿಡ್-ಸುರಕ್ಷಿತ ಮತದಾನವನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಈ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಲಿದೆ. ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಲಿದೆ.  ಶ್ರೀಕಾಂತ್ ಶರ್ಮಾ, ಸುರೇಶ್ ರಾಣಾ, ಸಂದೀಪ್ ಸಿಂಗ್, ಕಪಿಲ್ ದೇವ್ ಅಗರ್ವಾಲ್, ಅತುಲ್ ಗಾರ್ಗ್ ಮತ್ತು ಚೌಧುರಿ ಲಕ್ಷ್ಮಿ ನಾರಾಯಣ್ ಸೇರಿದಂತೆ ಹಲವಾರು ಪ್ರಮುಖರ ಭವಿಷ್ಯ ಮೊದಲ ಹಂತದ ಚುನಾವಣೆಯಲ್ಲಿ ನಿರ್ಧಾರವಾಗಲಿದೆ.  ಕೊರೊನಾವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ರೋಡ್ ಶೋಗಳು ಮತ್ತು ಭೌತಿಕ ರ್ಯಾಲಿಗಳ ನಿಷೇಧದಿಂದಾಗಿ ಮೊದಲ ಹಂತದ ಪ್ರಚಾರ ವರ್ಚುವಲ್ ಆಗಿತ್ತು. ಬಿಜೆಪಿಯ ಪ್ರಚಾರವನ್ನು ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಮಾಜವಾದಿ ಪಕ್ಷ-ರಾಷ್ಟ್ರೀಯ ಲೋಕದಳ (RLD) ಮೈತ್ರಿ ವಿರುದ್ಧ ದಾಳಿ ಮಾಡುವಾಗ ವೇಗದ ಅಭಿವೃದ್ಧಿಗಾಗಿ ಯೋಗಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರವನ್ನು ಹೊಗಳುತ್ತಿರುತ್ತಾರೆ. ಅದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು 2017 ರ ಮೊದಲು ಕೈರಾನಾದಿಂದ ಹಿಂದೂಗಳ ನಿರ್ಗಮನದ ಬಗ್ಗೆ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.

ಇತ್ತ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಜನರು ಬಿಜೆಪಿಯನ್ನು ಅಧಿಕಾರದಿಂದ ಹೊರಹಾಕಲು ಮನಸ್ಸು ಮಾಡಿದ್ದಾರೆ ಎಂದು ಹೇಳಿದ್ದಾರೆ.  ಎಸ್‌ಪಿ-ಆರ್‌ಎಲ್‌ಡಿ ಮೈತ್ರಿಯು ತಮ್ಮ ಚುನಾವಣಾ ಪ್ರಚಾರವನ್ನು ರೈತರ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿದೆ ಮತ್ತು ಚುನಾವಣಾ ಭರವಸೆಗಳ ಮೇಲೆ ಆದಿತ್ಯನಾಥ ವಿರುದ್ಧ ವಾಗ್ದಾಳಿ ನಡೆಸಿದೆ. ತಡವಾಗಿ ಪ್ರಚಾರ ಆರಂಭಿಸಿದ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಕಾನೂನು ಮತ್ತು ಸುವ್ಯವಸ್ಥೆ ಕುರಿತು ತಮ್ಮ ಸರ್ಕಾರದ ದಾಖಲೆಯನ್ನು ಜನರಿಗೆ ನೆನಪಿಸಿದರು. ಕಾಂಗ್ರೆಸ್ ತನ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ಮನೆ-ಮನೆ ಪ್ರಚಾರದಲ್ಲಿ ಹೆಚ್ಚು ಆಸಕ್ತಿ ವಹಿಸಿದೆ.

ಶಾಮ್ಲಿ, ಹಾಪುರ್, ಗೌತಮ್ ಬುದ್ಧ ನಗರ, ಮುಜಾಫರ್‌ನಗರ, ಮೀರತ್, ಬಾಗ್‌ಪತ್, ಘಾಜಿಯಾಬಾದ್, ಬುಲಂದ್‌ಶಹರ್, ಅಲಿಘರ್, ಮಥುರಾ ಮತ್ತು ಆಗ್ರಾ ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದೆ.

ಮೊದಲ ಹಂತವು ಪಶ್ಚಿಮ ಉತ್ತರ ಪ್ರದೇಶ ಜಾಟ್ ಪ್ರಾಬಲ್ಯದ ಬೆಲ್ಟ್ ಅನ್ನು ಒಳಗೊಳ್ಳುತ್ತದೆ. ಜಾಟ್ ಸಮುದಾಯ ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಮೊದಲ ಹಂತದಲ್ಲಿ 623 ಅಭ್ಯರ್ಥಿಗಳು ಕಣದಲ್ಲಿದ್ದು, ಈ ಹಂತದಲ್ಲಿ ಸುಮಾರು 2.27 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ. 2017ರಲ್ಲಿ 58 ಸ್ಥಾನಗಳಲ್ಲಿ ಬಿಜೆಪಿ 53 ಸ್ಥಾನಗಳನ್ನು ಗಳಿಸಿದರೆ, ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿ ತಲಾ ಎರಡು ಸ್ಥಾನಗಳನ್ನು ಪಡೆದಿದ್ದವು. ರಾಷ್ಟ್ರೀಯ ಲೋಕದಳ ಒಂದು ಸ್ಥಾನ ಪಡೆದಿತ್ತು.

ಇದನ್ನೂ ಓದಿ: ನಿಮ್ಮ ಅಮೂಲ್ಯ ಮತವನ್ನು ಬಿಜೆಪಿಗೆ ಹಾಕಿ ಹಾಳು ಮಾಡಬೇಡಿ; ಉತ್ತರ ಪ್ರದೇಶ ಜನರಿಗೆ ಸಿಎಂ ಮಮತಾ ಬ್ಯಾನರ್ಜಿ ಸಲಹೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada