ದೆಹಲಿ: ಉತ್ತರ ಪ್ರದೇಶದಲ್ಲಿ ಫೆ.20ರಂದು ಮೂರನೇ ಹಂತದ ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ನಿನ್ನೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕರ್ಹಾಲ್ನಲ್ಲಿ (Karhal) ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಎಸ್.ಪಿ.ಬಾಘೇಲ್ ಪರ ಪ್ರಚಾರ ನಡೆಸಿದ್ದಾರೆ. ಕರ್ಹಾಲ್ನಲ್ಲಿ ನಾಳೆ ಮತದಾನ ನಡೆಯಲಿದ್ದು, ಸಮಾಜವಾದಿ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸ್ಪರ್ಧಿಸಿರುವ ಕ್ಷೇತ್ರ. ಇನ್ನು ಕರ್ಹಾಲ್ ಕ್ಷೇತ್ರವಿರುವ ಮೇನ್ಪುರಿ ಜಿಲ್ಲೆ ಸಮಾಜವಾದಿ ಪಕ್ಷದ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿದೆ. ಹೀಗಾಗಿ ಕರ್ಹಾಲ್ ಸೇರಿ ಮೇನ್ಪುರಿಯಲ್ಲಿರು ನಾಲ್ಕೂ ವಿಧಾನಸಭಾ ಕ್ಷೇತ್ರಗಳೂ ಬಹುಮುಖ್ಯ ಎನ್ನಿಸಿವೆ.
ನಿನ್ನೆ ಕರ್ಹಾಲ್ನಲ್ಲಿ ಚುನಾವಣಾ ಪ್ರಚಾರ ನಡೆಸಿದ ಸಿಎಂ ಯೋಗಿ ಆದಿತ್ಯನಾಥ್, ಕರ್ಹಾಲ್ನಲ್ಲಿ ಸಮಾಜವಾದಿ ಪಕ್ಷ ಖಂಡಿತ ಸೋಲನುಭವಿಸುತ್ತದೆ. ಅದು ಅವರಿಗೂ ಈಗ ಗೊತ್ತಾಗಿದೆ. ತಾವು ಸೋಲುತ್ತೇವೆ ಎಂಬ ಹತಾಶೆಯಿಂದಲೇ ಬಿಜೆಪಿ ಅಭ್ಯರ್ಥಿ ಎಸ್ಪಿ ಸಿಂಗ್ ಬಾಘೇಲ್ ಮೇಲೆ ಹಲ್ಲೆಯನ್ನೂ ನಡೆಸಿದ್ದಾರೆ. ಇದು ಸಮಾಜವಾದಿ ಪಕ್ಷದವರ ಹೇಡಿತನಕ್ಕೆ ಒಂದು ಉದಾಹರಣೆ ಎಂದು ಹೇಳಿದರು. ಹಾಗೇ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆಗುತ್ತಿರುವ ಬಗ್ಗೆ ಮಾತನಾಡಿದ ಸಿಎಂ ಯೋಗಿ, ಅಯೋಧ್ಯೆಯ ಶ್ರೀರಾಮ ದೇಗುಲ ಭಾರತದ ರಾಷ್ಟ್ರೀಯ ದೇವಸ್ಥಾನವಾಗಲಿದೆ. 2023ರ ಹೊತ್ತಿಗೆ ಭವ್ಯ ಮಂದಿರ ನಿರ್ಮಾಣ ಆಗಲಿದ್ದು, ಸಾರ್ವಜನಿಕರಿಗೆ ದರ್ಶನಕ್ಕೆ ಮುಕ್ತವಾಗುತ್ತದೆ ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಆಡಳಿತ ಹಿಡಿಯಲು ಬಿಜೆಪಿ ಎಲ್ಲ ಸಿದ್ಧತೆಗಳನ್ನೂ ನಡೆಸಿದೆ. ವಿಧಾನಸಭೆ ಚುನಾವಣೆ ತಿಂಗಳು ಇರುವಾಗ, ಇಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಅಯೋಧ್ಯಾ ರಾಮಮಂದಿರವಷ್ಟೇ ಅಲ್ಲ, ಕಾಶಿ ವಿಶ್ವನಾಥ ಕಾರಿಡಾರ್, ಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿ ಹತ್ತು-ಹಲವು ಅಭಿವೃದ್ಧಿ ಕಾರ್ಯಗಳೊಂದಿಗೆ ಬಿಜೆಪಿಗರು ಜನರ ಮತ ಕೇಳುತ್ತಿದ್ದಾರೆ. ಇತ್ತ ಸಮಾಜವಾದಿ ಪಕ್ಷ ಕೂಡ ಈ ಬಾರಿ ಹೇಗಾದರೂ ಉತ್ತರ ಪ್ರದೇಶದ ಆಡಳಿತ ಹಿಡಿಯಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದೆ. ಈಗಾಗಲೇ 2 ಹಂತದ ಮತದಾನ ಮುಕ್ತಾಯಗೊಂಡಿದ್ದು, ಫೆ.20ರಂದು ಮೂರನೇ ಹಂತದಲ್ಲಿ ಮತದಾನ ಇದೆ. ಅಂದು 16 ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳ ಮತದಾರರು ಮತ ಚಲಾಯಿಸಲಿದ್ದಾರೆ. ಅದಾದ ಬಳಿಕ ಫೆ.23ರಂದು ನಾಲ್ಕನೇ, ಫೆ.27ಕ್ಕೆ 5, ಮಾರ್ಚ್ 3ರಂದು ಆರು ಮತ್ತು ಮಾರ್ಚ್ 7ರಂದು ಏಳನೇ ಹಂತದ ಮತದಾನ ನಡೆಯಲಿದ್ದು, ಮಾರ್ಚ್ 10ಕ್ಕೆ ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: 1000 ಕೋಟಿ ಬೆಳೆ ನಷ್ಟಕ್ಕೆ ಸರ್ಕಾರದಿಂದ ಬಂದಿದ್ದು ಬರೀ 36 ಕೋಟಿ ಪರಿಹಾರ; ಕಂಗಾಲಾದ ಮೆಣಸಿನಕಾಯಿ ಬೆಳೆಗಾರರು
Published On - 2:21 pm, Sat, 19 February 22