ಉತ್ತರ ಪ್ರದೇಶ ರಾಜ್ಯದಲ್ಲಿ ಗೋರಖ್ ಪುರ ಈಗ ಪ್ರತಿಷ್ಠಿತ ಜಿಲ್ಲೆ. ಸಿಎಂ ಯೋಗಿ ಆದಿತ್ಯನಾಥ್ (CM Yogi Adityanath) ತವರು ಜಿಲ್ಲೆಯೇ ಈ ಗೋರಖ್ ಪುರ (Ghorakpur). ಈಗ ಗೋರಖ್ ಪುರ ಜಿಲ್ಲೆಯಲ್ಲಿ ರಾಜಕೀಯ ಹಣಾಹಣಿ ಜೋರಾಗಿ ನಡೆಯುತ್ತಿದೆ. ಗೋರಖ್ ಪುರದಲ್ಲಿ ಯೋಗಿ ಆದಿತ್ಯನಾಥ್ ಹವಾ ಹೇಗಿದೆ? ಜಿಲ್ಲೆಯ ಅಭಿವೃದ್ದಿಗೆ ಯೋಗಿ ಮಾಡಿದ್ದೇನು? ಯೋಗಿ ವಿಧಾನಸಭೆಗೆ (UP Asembly Election 2022) ಆಯ್ಕೆಯಾಗ್ತಾರಾ? ಗೋರಖ್ ಪುರದ ಜನರು ಟಿವಿ9ಗೆ ಹೇಳಿದ್ದೇನು? ಈ ಬಗ್ಗೆ ಟಿವಿ9 ಗ್ರೌಂಡ್ ರಿಪೋರ್ಟ್ ಇಲ್ಲಿದೆ (TV9 Ground Report) ನೋಡಿ.
ಗೋರಖ್ ಪುರದಲ್ಲಿ ರಂಗೇರಿದ ಚುನಾವಣಾ ಅಖಾಡ. ಗೋರಖನಾಥ, ಜನರ ಆಶೀರ್ವಾದ ಯಾರಿಗೆ?
ಉತ್ತರ ಪ್ರದೇಶದ ಧಾರ್ಮಿಕ, ರಾಜಕೀಯ ಕ್ಷೇತ್ರದಲ್ಲಿ ಗೋರಖಪುರಕ್ಕೆ ತನ್ನದೇ ಆದ ಮಹತ್ವ ಇದೆ. ಗೋರಖ್ ಪುರ.. ಇದು ಗೋರಕನಾಥ ಮಂದಿರ ಇರುವ ಸ್ಥಳ. ಗೋರಖನಾಥ್ ಮಂದಿರವೇ ಈ ಭಾಗದಲ್ಲಿ ರಾಜಕೀಯ ಪ್ರಭಾವವನ್ನು ಹೊಂದಿರುವ ವಿಶಿಷ್ಟ ಮಂದಿರ. ಈ ಮಂದಿರದ ಪ್ರಧಾನ ಅರ್ಚಕರೇ ರಾಜಕೀಯ ಪ್ರವೇಶಿಸಿ ಉತ್ತರ ಪ್ರದೇಶ ರಾಜ್ಯದಲ್ಲಿ ಶಾಸಕರು, ಸಂಸದರು, ಮುಖ್ಯಮಂತ್ರಿ ಹುದ್ದೆ ಆಲಂಕರಿಸಿದ್ದು ಈಗ ಇತಿಹಾಸ. ಗೋರಕನಾಥ್ ಹಾಗೂ ಜನರ ಆಶೀರ್ವಾದ ಇದ್ದರೇ ಅಧಿಕಾರ, ಹುದ್ದೆ, ಗದ್ದುಗೆಗಳೆಲ್ಲವೂ ಹುಡುಕಿಕೊಂಡು ಬರುತ್ತವೆ ಎಂಬುದು ಈಗಾಗಲೇ ಈ ಕ್ಷೇತ್ರದಲ್ಲಿ ಸಾಬೀತಾಗಿದೆ. ಈಗ ಮತ್ತೆ ಉತ್ತರ ಪ್ರದೇಶದ ಈ ವಿಧಾನಸಭಾ ಚುನಾವಣೆಯಲ್ಲಿ ಗೋರಖನಾಥ್ ಹಾಗೂ ಜಿಲ್ಲೆಯ ಜನರ ಆಶೀರ್ವಾದ ಯಾರಿಗಿದೆ ಎಂಬ ಕುತೂಹಲ ಸಹಜ (Uttar Pradesh Assembly election 2022).
ಗೋರಖ್ ನಾಥ ಮಂದಿರದ ಪ್ರಧಾನ ಅರ್ಚಕರಾಗಿದ್ದ ಮಹಂತ ಅವೈದ್ಯನಾಥರು ಹಿಂದೂ ಮಹಾಸಭಾದ ಅಭ್ಯರ್ಥಿಯಾಗಿ ಮಣಿರಾಮ್ ವಿಧಾನಸಭಾ ಕ್ಷೇತ್ರದಿಂದ 5 ಬಾರಿ ಆಯ್ಕೆಯಾಗಿದ್ದರು. 1962 ರಿಂದ 1977ರವರೆಗೆ 5 ಬಾರಿ ವಿಧಾನಸಭೆಗೆ ಮಹಂತ ಅವೈದ್ಯನಾಥ್ ಆಯ್ಕೆಯಾಗಿದ್ದರು. 1989ರಲ್ಲಿ ಹಿಂದೂ ಮಹಾಸಭಾ ಅಭ್ಯರ್ಥಿಯಾಗಿ ಗೋರಖ್ ಪುರ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಬಳಿಕ 1991 ಹಾಗೂ 1996ರಲ್ಲಿ ಬಿಜೆಪಿ ಪಕ್ಷದಿಂದ ಲೋಕಸಭೆಗೆ ಮಹಂತ ಅವೈದ್ಯನಾಥರು ಆಯ್ಕೆಯಾಗಿದ್ದರು.
ಮಹಂತ ಅವೈದ್ಯನಾಥರು ಅಯೋಧ್ಯೆಯ ರಾಮಮಂದಿರ ನಿರ್ಮಾಣ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಜೊತೆಗೆ ಈ ಭಾಗದ ಜನರನ್ನು ರಾಮಮಂದಿರ ನಿರ್ಮಾಣ ಚಳವಳಿಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದ್ದರು. ಮಹಂತ ಅವೈದ್ಯನಾಥರು ಈ ಭಾಗದಲ್ಲಿ ರಾಜಕೀಯ ಪ್ರಭಾವವನ್ನು ಹೊಂದಿದ್ದರು. ಮಹಂತ ಅವೈದ್ಯನಾಥರ ಶಿಷ್ಯರೇ ಯೋಗಿ ಆದಿತ್ಯನಾಥ್. ಮಹಂತ ಅವೈದ್ಯನಾಥ್ ಶಿವನ ಪಾದ ಸೇರಿದ ಬಳಿಕ ಯೋಗಿ ಆದಿತ್ಯನಾಥ್, ಗೋರಖ್ ನಾಥ ಪೀಠಾಧಿಪತಿಯಾಗಿ ಪಟ್ಟಕ್ಕೇರಿದ್ದಾರೆ. ಯೋಗಿ ಆದಿತ್ಯನಾಥ್ ಕೂಡ ಗುರುವಿನ ಹಾದಿಯಲ್ಲೇ ನಡೆದು 1998 ರಿಂದ 2017ರವರೆಗೆ 5 ಬಾರಿ ಗೋರಖ್ ಪುರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಈಗ ಯೋಗಿ ಆದಿತ್ಯನಾಥ್ ವಿಧಾನಸಭೆಯ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಯೋಗಿ ಸ್ಪರ್ಧೆಯಿಂದ ಗೋರಖ್ ಪುರದಲ್ಲಿ ಈಗಾಗಲೇ ವಿಧಾನಸಭೆ ಚುನಾವಣೆಯ ಅಖಾಡ ರಂಗೇರಿದೆ.
Also Read:
ಪಾಂಡವರ ರಾಜಧಾನಿ ಹಸ್ತಿನಾಪುರದಲ್ಲಿ ಜಯ ಸಾಧಿಸುವವರೇ ಉತ್ತರ ಪ್ರದೇಶದಲ್ಲಿ ಸದಾ ಅಧಿಕಾರಕ್ಕೆ ಬರುವುದು, ಇದು ನಿಜ!!
ಗೋರಖ್ ಪುರದಲ್ಲಿರುವ ಗೋರಕನಾಥ್ ಮಂದಿರಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಈ ಗೋರಖ್ ನಾಥ್ ಮಂದಿರವು ನಾಥ ಪರಂಪರೆಗೆ ಸೇರಿದ ಮಂದಿರ. ತ್ರೇತಾ ಯುಗದ ಕಾಲದಿಂದಲೂ ಈ ಮಂದಿರ ಇದೆ ಎಂಬ ಪ್ರತೀತಿ ಇದೆ. ಮತ್ತೊಂದು ಮೂಲದ ಮಾಹಿತಿ ಪ್ರಕಾರ 10ನೇ ಶತಮಾನದಲ್ಲಿ ಗೋರಕನಾಥ್ ಮಂದಿರವನ್ನು ಮತ್ಸೇಂದ್ರನಾಥ್ ಅವರು ಸ್ಥಾಪನೆ ಮಾಡಿದ್ದರು ಎಂಬ ಮಾಹಿತಿಯೂ ಇದೆ.
ಮೊದಲ ಬಾರಿಗೆ ವಿಧಾನಸಭಾ ಚುನಾವಣಾ ಅಖಾಡಕ್ಕಿಳಿದ ಯೋಗಿ
ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿರುವ ಯೋಗಿ ಆದಿತ್ಯನಾಥ್ ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣಾ ಅಖಾಡಕ್ಕಿಳಿದಿದ್ದಾರೆ. 2017ರಲ್ಲಿ ಉತ್ತರ ಪ್ರದೇಶ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಯೋಗಿ ಆದಿತ್ಯನಾಥ್, ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದರು. ಈಗ ನೇರವಾಗಿ ಜನರಿಂದಲೇ ಆಯ್ಕೆಯಾಗಲು ವಿಧಾನಸಭೆ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ಗೋರಕಪುರ ಸದರ್ ವಿಧಾನಸಭಾ ಕ್ಷೇತ್ರದಿಂದ ಯೋಗಿ ಆದಿತ್ಯನಾಥ್ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕೆ ಇಳಿದ್ದಾರೆ. ಈ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 30 ವರ್ಷಗಳಲ್ಲಿ ಬಿಜೆಪಿ ಪಕ್ಷವು ಚುನಾವಣೆಯಲ್ಲಿ ಒಮ್ಮೆಯೂ ಸೋತಿಲ್ಲ ಎನ್ನುವುದು ವಿಶೇಷ. ಬಿಜೆಪಿ ಅಭ್ಯರ್ಥಿ ಯೋಗಿ ಆದಿತ್ಯನಾಥ್ ಗೆ ಎದುರಾಳಿಯಾಗಿ ಸಮಾಜವಾದಿ ಪಕ್ಷದಿಂದ ಶುಭಾವತಿ ಶುಕ್ಲಾ ಕಣಕ್ಕಿಳಿದಿದ್ದಾರೆ.
ಶುಭಾವತಿ ಶುಕ್ಲಾ, ಬಿಜೆಪಿ ಉಪಾಧ್ಯಕ್ಷರಾಗಿದ್ದ ಉಪೇಂದ್ರ ಶುಕ್ಲಾ ಅವರ ಪತ್ನಿ. 2018ರ ಗೋರಕಪುರ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಉಪೇಂದ್ರ ಶುಕ್ಲಾ ಸ್ಪರ್ಧಿಸಿದ್ದರು. ಆದರೆ, ಗೆಲುವು ದಕ್ಕಿರಲಿಲ್ಲ. 2020ರಲ್ಲಿ ಉಪೇಂದ್ರ ಶುಕ್ಲಾ ವಿಧಿವಶರಾದಾಗ, ಸಿಎಂ ಯೋಗಿ ಆದಿತ್ಯನಾಥ್, ಉಪೇಂದ್ರ ಶುಕ್ಲಾ ಅಂತಿಮ ದರ್ಶನಕ್ಕೂ ಹೋಗಲಿಲ್ಲ. ಈ ನೋವಿನಿಂದಲೇ ಈಗ ನಾವು ಯೋಗಿ ಆದಿತ್ಯನಾಥ್ ವಿರುದ್ಧ ಗೌರವಕ್ಕಾಗಿ ಹೋರಾಡುತ್ತಿದ್ದೇವೆ ಎಂದು ಎಸ್ಪಿ ಅಭ್ಯರ್ಥಿ ಶುಭಾವತಿ ಶುಕ್ಲಾ ಹೇಳಿದ್ದಾರೆ.
ಗೋರಖ್ ಪುರ ಸದರ್ ವಿಧಾನಸಭಾ ಕ್ಷೇತ್ರದಲ್ಲೇ ಗೋರಕನಾಥ್ ಮಂದಿರವೂ ಇದೆ. ಗೋರಖ್ ಪುರ ನಗರದಲ್ಲಿ 50 ಎಕರೆ ವಿಶಾಲ ಪ್ರದೇಶದಲ್ಲಿ ಮಂದಿರ, ಆಶ್ರಮ, ಅನ್ನಶಾಲೆ, ಗೋ ಶಾಲೆ, ಮಂದಿರದ ಕಚೇರಿ, ವಾಸದ ಮನೆ, ಆಸ್ಪತ್ರೆ ಇದೆ. ಈ ಮಂದಿರದ ಮಹಂತ ಹಾಗೂ ಪ್ರಧಾನ ಅರ್ಚಕರೇ ಸಿಎಂ ಯೋಗಿ ಆದಿತ್ಯನಾಥ್. ಗೋರಖ್ ನಾಥ ಮಂದಿರವು ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ ಇರೋದು ವಿಶೇಷ.
ಸ್ಥಳೀಯ ಮುಸ್ಲಿಂ ಜನಾಂಗದೊಂದಿಗೂ ಯೋಗಿ ಆದಿತ್ಯನಾಥ್ ಗೆ ಉತ್ತಮ ಭಾಂಧವ್ಯ ಇದೆ. ಮಂದಿರ ಎದುರು ಹಾಗೂ ಸುತ್ತಮುತ್ತ ಮುಸ್ಲಿಂ ಸಮುದಾಯದ ಜನರ ಅಂಗಡಿ ಮುಂಗಟ್ಟುಗಳು ಇವೆ. ಯೋಗಿ ಆದಿತ್ಯನಾಥ್ ಕಟ್ಟರ್ ಹಿಂದೂವಾದಿ. ಬೆಂಕಿ ಉಗುಳುವ ನಾಯಕ. ಬಿಜೆಪಿಯ ಫೈರ್ ಬ್ರಾಂಡ್ ಹಿಂದೂ ಲೀಡರ್. ಆದರೇ ತಮ್ಮ ಗೋರಕನಾಥ್ ಮಂದಿರದ ಸುತ್ತ ಇರುವ ಮುಸ್ಲಿಂ ಸಮಾಜದೊಂದಿಗೆ ಉತ್ತಮ ಭಾಂಧವ್ಯ ಹೊಂದಿರುವುದು ಇಂಟರೆಸ್ಟಿಂಗ್.
ಖಾವಿಧಾರಿಗಳು ರಾಜಕೀಯ ಪ್ರವೇಶಿಸಿ ಯಶಸ್ಸು ಕಾಣಲು ಸಾಧ್ಯ ಎನ್ನುವುದನ್ನು ಗೋರಕನಾಥ್ ಮಂದಿರ ಮಹಂತ ಅವೈದ್ಯನಾಥ್ ಹಾಗೂ ಮಹಂತ ಆದಿತ್ಯನಾಥ ಸಾಬೀತುಪಡಿಸಿದ್ದಾರೆ. ಗೋರಖನಾಥ ಮಂದಿರದ ಪಕ್ಕದಲ್ಲೇ ಬಿಜೆಪಿ ಬಾವುಟ ಹಾರಾಡುತ್ತಿರುವ ಈ ಬಿಜೆಪಿ ಕಚೇರಿ ಇದೆ. ಈ ಕಚೇರಿಯಲ್ಲೇ ಗೋರಖ್ ಪುರ ಸದರ್ ಕ್ಷೇತ್ರದಲ್ಲಿ ಯೋಗಿ ಆದಿತ್ಯನಾಥ್ ಗೆಲುವಿಗೆ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಗೋರಖನಾಥ ದೇವಾಲಯದ ಮ್ಯಾನೇಜರ್ ದ್ವಾರಕಾ ತಿವಾರಿಯೇ ಈ ಬಿಜೆಪಿ ಕಚೇರಿಯಲ್ಲೂ ಯೋಗಿ ಚುನಾವಣಾ ಮ್ಯಾನೇಜರ್ ಇದ್ದಂತೆ.
ಯೋಗಿ ಸ್ಪರ್ಧೆಯಿಂದ ಜೋಶ್ ಜೋರು
ಗೋರಖ್ ಪುರ ನಗರ ಹಾಗೂ ಜಿಲ್ಲೆಯಲ್ಲಿ ಗೋರಕನಾಥ್ ಮಂದಿರದ ಪ್ರಭಾವ ಜನರ ಮೇಲೆ ಇದೆ. ಹೀಗಾಗಿಯೇ ಯೋಗಿ ಆದಿತ್ಯನಾಥ್ 5 ಬಾರಿ ಲೋಕಸಭೆಗೂ ಅನಾಯಾಸವಾಗಿ ಆಯ್ಕೆಯಾಗಿದ್ದರು. ಚುನಾವಣೆಯಿಂದ ಚುನಾವಣೆಗೆ ಯೋಗಿ ಆದಿತ್ಯನಾಥ್ ಗೆಲುವಿನ ಮತಗಳ ಅಂತರ ಹೆಚ್ಚಾಗುತ್ತಲೇ ಹೋಗಿದೆ. ಈಗ ಹಾಲಿ ಸಿಎಂ ಹುದ್ದೆಯಲ್ಲಿದ್ದುಕೊಂಡು ಗೋರಖ್ ಪುರ ಸದರ್ ಕ್ಷೇತ್ರದಿಂದ ವಿಧಾನಸಭಾ ಚುನಾವಣಾ ಅಖಾಡಕ್ಕಿಳಿದಿರುವುದರಿಂದ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಉತ್ಸಾಹ, ಜೋಶ್ ಡಬಲ್ ಆಗಿದೆ. ಯೋಗಿ ಬಿಜೆಪಿಯ ಪೋಸ್ಟರ್ ಬಾಯ್. ಈಗ ತಮ್ಮ ಕರ್ಮಭೂಮಿಯಿಂದಲೇ ವಿಧಾನಸಭಾ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಹೀಗಾಗಿ ಯೋಗಿ ಆದಿತ್ಯನಾಥ್ ಕನಿಷ್ಠ 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹಾಗೂ ಜನರು ಹೇಳ್ತಾರೆ.
ಮಕ್ಕಿ, ಮಾಫಿಯಾ ಖತಂ ಮಾಡಿದ ಯೋಗಿ
ಗೋರಖ್ ಪುರ ಜಿಲ್ಲೆಯಲ್ಲಿ ಈ ಮೊದಲು ಮಕ್ಕಿ, ಮಾಫಿಯಾ ಹಾವಳಿ ಜೋರಾಗಿತ್ತು. ಆದರೇ, ಕಳೆದ 5 ವರ್ಷದ ಅವಧಿಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮಕ್ಕಿ, ಮಾಫಿಯಾ ಎರಡನ್ನೂ ಮಟ್ಟ ಹಾಕಿದ್ದಾರೆ.
ಜಪಾನೀಸ್ ಎನ್ಸಿಪಿಲಿಟಿ ರೋಗದಿಂದ ಮಕ್ಕಳ ಸಾವಿನಿಂದ ಕುಖ್ಯಾತ:
ಗೋರಖ್ ಪುರ ಜಿಲ್ಲೆ 5 ವರ್ಷದ ಹಿಂದೆ ಮಕ್ಕಳ ಸಾವಿಗೆ ದೇಶದಲ್ಲೇ ಕುಖ್ಯಾತಿ ಪಡೆದಿತ್ತು. ಜಪಾನೀಸ್ ಎನ್ಸಿಪಿಲಿಟಿ ಅಂದರೇ, ಮೆದುಳು ಉರಿಯೂತದ ರೋಗದಿಂದ ಈ ಭಾಗದಲ್ಲಿ ಎಳೆಯ ಮಕ್ಕಳು ಸಾವನ್ನಪ್ಪುತ್ತಿದ್ದರು. ಪ್ರತಿ ವರ್ಷ ಒಂದು ಸಾವಿರದವರೆಗೂ ಮಕ್ಕಳು ಸಾವನ್ನಪ್ಪುತ್ತಿದ್ದರು. ಅಕ್ಯೂಟ್ ಎನ್ಸಿಪಿಲಿಟಿ ಸಿಂಡ್ರೋಮ್ ರೋಗದಿಂದಲೂ ಈ ಭಾಗದಲ್ಲಿ ಹೆಚ್ಚಿನ ಮಕ್ಕಳು ಸಾವನ್ನಪ್ಪುತ್ತಿದ್ದರು. 1978 ರಿಂದ 2017ರವರೆಗೆ ಗೋರಖ್ ಪುರ ಜಿಲ್ಲೆಯೊಂದರಲ್ಲೇ 25 ಸಾವಿರ ಮಕ್ಕಳು ಸಾವನ್ನಪ್ಪಿರುವ ದಾಖಲೆಗಳು ಇವೆ.
ಆದರೇ, ಕಳೆದ 5 ವರ್ಷದ ಅವಧಿಯಲ್ಲಿ ಪರಿಸ್ಥಿತಿ ಬದಲಾಗಿದೆ. ಜಪಾನೀಸ್ ಎನ್ಸಿಪಿಲಿಟಿ ರೋಗವು ಸೊಳ್ಳೆಯಿಂದ ಬರುವ ರೋಗ. ಯೋಗಿ ಆದಿತ್ಯನಾಥ್ ಗೋರಖ್ ಪುರ ಹಾಗೂ ಇಡೀ ಜಿಲ್ಲೆಯಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಸೊಳ್ಳೆಗಳ ಕಾಟಕ್ಕೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಪರಿಣಾಮವಾಗಿ ಈಗ ಜಪಾನೀಸ್ ಎನ್ಸಿಪಿಲಿಟಿ ಹಾಗೂ ಅಕ್ಯೂಟ್ ಎನ್ಸಿಪಿಲಿಟಿ ಸಿಂಡ್ರೋಮ್ ನಿಂದ ಸಾವನ್ನಪ್ಪುವ ಮಕ್ಕಳ ಸಂಖ್ಯೆಯಲ್ಲಿ ಬಾರಿ ಕುಸಿತವಾಗಿದೆ. 5 ವರ್ಷದ ಹಿಂದೆ ವರ್ಷಕ್ಕೆ ಒಂದು ಸಾವಿರ ಮಕ್ಕಳು ಸಾವನ್ನಪ್ಪುತ್ತಿದ್ದರೇ, ಈಗ ವರ್ಷಕ್ಕೆ ಹತ್ತು ಮಕ್ಕಳು ಮಾತ್ರ ಸಾವನ್ನಪ್ಪುತ್ತಿವೆ.
ಮೆಡಿಕಲ್ ಆಕ್ಸಿಜನ್ ಕೊರತೆಯಿಂದ ಮಕ್ಕಳ ಸಾವಿನ ಕುಖ್ಯಾತಿ
2017ರ ಆಗಸ್ಟ್ 10 ಹಾಗೂ 11 ರಂದು ಗೋರಖ್ ಪುರದ ಬಿಆರ್‌ಡಿ ಮೆಡಿಕಲ್ ಕಾಲೇಜಿನಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆಯಿಂದ ದೊಡ್ಡ ದುರಂತವೇ ನಡೆದು ಹೋಗಿತ್ತು. ಬಿಆರ್‌ಡಿ ಮೆಡಿಕಲ್ ಕಾಲೇಜಿನಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆಯಿಂದ 63 ಮಕ್ಕಳು ಸಾವನ್ನಪ್ಪಿದ್ದವು. ಆದರೇ, ಈಗ ಮೆಡಿಕಲ್ ಕಾಲೇಜಿನಲ್ಲಿ ಆಕ್ಸಿಜನ್ ಉತ್ಪಾದನೆಯ ಪ್ಲಾಂಟ್ ಆರಂಭಿಸಲಾಗಿದೆ. ಮೆಡಿಕಲ್ ಕಾಲೇಜುನ್ನು ಮೇಲ್ದರ್ಜೆಗೇರಿಸಿ ಎಲ್ಲ ಸೌಲಭ್ಯ ನೀಡಲಾಗಿದೆ.
ಗೋರಖ್ ಪುರದಲ್ಲಿ ಏಮ್ಸ್ ಆಸ್ಪತ್ರೆ ಆರಂಭ, ವೈದ್ಯಕೀಯ ಸೌಲಭ್ಯ ಮೇಲ್ದರ್ಜೆಗೆ:
ಗೋರಖ್ ಪುರದಲ್ಲಿ 5 ವರ್ಷದ ಹಿಂದೆ ಆರೋಗ್ಯ ಮೂಲಸೌಕರ್ಯ ಕಳಪೆಯಾಗಿದ್ದವು. ಬಿಆರ್‌ಡಿ ಮೆಡಿಕಲ್ ಕಾಲೇಜಿನಲ್ಲಿ ಸರಿಯಾದ ಆರೋಗ್ಯ ಮೂಲಸೌಕರ್ಯ ಇರಲಿಲ್ಲ. ಗೋರಖ್ ಪುರ ಜಿಲ್ಲೆಯ ಜನರು ಮಾತ್ರವಲ್ಲದೇ, ಬಸ್ತಿ, ಮಹಾರಾಜಗಂಜ್, ದಿವಾರಿಯಾ, ಬಿಹಾರ ಹಾಗೂ ನೇಪಾಳದ ಜನರು ಬಿಆರ್‌ಡಿ ಮೆಡಿಕಲ್ ಕಾಲೇಜಿನ ಮೇಲೆಯೇ ವೈದ್ಯಕೀಯ ಸೌಲಭ್ಯಗಳಿಗಾಗಿ ಅವಲಂಬಿತರಾಗಿದ್ದರು. ಬಿಆರ್‌ಡಿ ಮೆಡಿಕಲ್ ಕಾಲೇಜಿನ ಮೇಲೆ ಒತ್ತಡ ಹೆಚ್ಚಾಗಿತ್ತು.
ಹೀಗಾಗಿ ಜನರಿಗೆ ಸರಿಯಾದ ಚಿಕಿತ್ಸೆ, ವೈದ್ಯಕೀಯ ಸೌಲಭ್ಯ ಸಿಗುವುದು ಕಷ್ಟವಾಗಿತ್ತು. ಹೀಗಾಗಿ ಯೋಗಿ ಆದಿತ್ಯನಾಥ್ ಕೇಂದ್ರ ಸರ್ಕಾರದ ಜೊತೆಗೆ ಮಾತನಾಡಿ, ಗೋರಖ್ ಪುರದಲ್ಲೇ ಏಮ್ಸ್ ಆಸ್ಪತ್ರೆ ಆರಂಭಿಸಿದ್ದಾರೆ. 1,700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಏಮ್ಸ್ ಆಸ್ಪತ್ರೆಯನ್ನು ಈಗಾಗಲೇ ಉದ್ಘಾಟಿಸಲಾಗಿದೆ. ಏಮ್ಸ್ ಆಸ್ಪತ್ರೆಯಿಂದ ಜನರಿಗೆ ಈಗ ಉತ್ತಮ ವೈದ್ಯಕೀಯ ಸೌಲಭ್ಯ ಸಿಗುತ್ತಿದೆ.
8,300 ಕೋಟಿ ರೂಪಾಯಿ ವೆಚ್ಚದಲ್ಲಿ 1,300 ಅಭಿವೃದ್ದಿ ಯೋಜನೆ ಜಾರಿ
ಯೋಗಿ ಆದಿತ್ಯನಾಥ್ ಗೋರಖ್ ಪುರದ ರಾಮಘಡ ತಾಳ ಕೆರೆಯನ್ನು ಅಭಿವೃದ್ದಿಪಡಿಸಿದ್ದಾರೆ. ಈ ಕೆರೆಯಲ್ಲಿ ಬೋಟಿಂಗ್ ಸೌಲಭ್ಯ ಇದೆ. ಗೋರಖ್ ಪುರ ಜನರು ಕೆರೆಯಲ್ಲೇ ಬೋಟಿಂಗ್ ವಿಹಾರ ಮಾಡ್ತಿದ್ದಾರೆ.
ಗೋರಖ್ ಪುರ ಹಾಗೂ ಇಡೀ ಜಿಲ್ಲೆಯಲ್ಲಿ ಕಳೆದ 5 ವರ್ಷದಲ್ಲಿ ಆಗಿರುವ ಅಭಿವೃದ್ದಿ ಯೋಜನೆಗಳ ಪಟ್ಟಿ ದೊಡ್ಡದಿದೆ. ಬರೋಬ್ಬರಿ 8,300 ಕೋಟಿ ರೂಪಾಯಿ ಹಣವನ್ನು ಕಳೆದ 5 ವರ್ಷದ ಅವಧಿಯಲ್ಲಿ ಅಭಿವೃದ್ದಿ ಯೋಜನೆಗಳ ಜಾರಿಗೆ ಬಳಕೆ ಮಾಡಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಕರ್ಮಭೂಮಿ ಗೋರಖ್ ಪುರ ಅಭಿವೃದ್ದಿಗೆ ಉದಾರವಾಗಿ ಹಣ ನೀಡಿದ್ದಾರೆ. 1,300 ಅಭಿವೃದ್ದಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.
8 ಸಾವಿರ ಕೋಟಿ ರೂ ವೆಚ್ಚದಲ್ಲಿ ರಸಗೊಬ್ಬರ ಕಾರ್ಖಾನೆ ಪುನರ್ ಆರಂಭ
ಗೋರಖ್ ಪುರ ಜಿಲ್ಲೆಯಲ್ಲಿ ಇದ್ದ ರಸಗೊಬ್ಬರ ಕಾರ್ಖಾನೆ 20 ವರ್ಷದಿಂದ ಸ್ಥಗಿತವಾಗಿತ್ತು. ಯೋಗಿ ಆದಿತ್ಯನಾಥ್ ರಸಗೊಬ್ಬರು ಕಾರ್ಖಾನೆಯನ್ನು ಈಗ 8 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಪುನಶ್ಚೇತನಗೊಳಿಸಿ ಫುನರ್ ಆರಂಭಿಸುತ್ತಿದ್ದಾರೆ.
ಗೋರಖ್ ಪುರ ಜಿಲ್ಲೆಯಲ್ಲಿ ಹೊಸದಾಗಿ ಮೂರು ವಿಶ್ವವಿದ್ಯಾಲಯಗಳು ಆರಂಭವಾಗಿವೆ. ಆಯುಷ್ ವಿವಿ ಆರಂಭವಾಗುತ್ತಿದೆ. ಸೈನಿಕ್ ಸ್ಕೂಲ್ ಆರಂಭವಾಗುತ್ತಿದೆ. ಶೈಕ್ಷಣಿಕ ಮೂಲಸೌಕರ್ಯ ಅಭಿವೃದ್ದಿಪಡಿಸುವ ಮೂಲಕ ಗೋರಖ್ ಪುರವನ್ನು ಶೈಕ್ಷಣಿಕ ಹಬ್ ಆಗಿ ಅಭಿವೃದ್ದಿಪಡಿಸಲಾಗುತ್ತಿದೆ. ದಿನದ 24 ಗಂಟೆ ವಿದ್ಯುತ್ ಸೌಲಭ್ಯ ಇದೆ. ಗೂಂಡಾಗಿರಿ ಅಂತ್ಯ ಹಾಡುವ ಮೂಲಕ ಜನರಲ್ಲಿ ಭದ್ರತೆಯ ಭಾವನೆ ಮೂಡಿದೆ. ಗೋರಖ್ ಪುರದಲ್ಲಿ ಐ.ಟಿ.ಪಾರ್ಕ್ ಆರಂಭವಾಗುತ್ತಿದೆ. ರೆಡಿಮೇಡ್ ಗಾರ್ಮೆಂಟ್ಸ್ ಹಬ್ ಆಗಿ ಗೋರಖ್ ಪುರವನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಪ್ಲಾಸ್ಟಿಕ್ ಸಿಟಿ ಕೂಡ ಆರಂಭವಾಗಲಿದೆ. ಕೈಗಾರಿಕೆಗಳು ಆರಂಭವಾಗಿವೆ. ಯಾವುದೇ ಗಲಭೆಗಳಾಗಿಲ್ಲ. ಗೋರಖ್ ಪುರದಲ್ಲಿ ಉತ್ತಮ ರಸ್ತೆ, ಹೆದ್ದಾರಿಗಳು ನಿರ್ಮಾಣವಾಗಿವೆ.
ಆದರೆ, ಸ್ಥಳೀಯ ಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳಿಲ್ಲ. ಉದ್ಯೋಗಕ್ಕಾಗಿ ಜನರು ಪರದಾಡುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಹಿಂದೂ-ಮುಸ್ಲಿಂ ಘರ್ಷಣೆ ಮಾಡಿಸುತ್ತಾರೆ ಎಂದು ಮುಸ್ಲಿಂ ಸಮುದಾಯದ ಯುವಕನೊಬ್ಬ ಗೋರಖ್ ಪುರ ರೈಲ್ವೇ ನಿಲ್ದಾಣದ ಬಳಿ ಆರೋಪಿಸಿದ್ದರು. ಆದರೆ, ಕಳೆದ 5 ವರ್ಷದ ಅವಧಿಯಲ್ಲಿ ಯೋಗಿ ಸರ್ಕಾರ 5 ಲಕ್ಷ ಜನರಿಗೆ ಉದ್ಯೋಗ ನೀಡಿದೆ. ಒಂದು ಕೋಟಿಗೂ ಹೆಚ್ಚು ಜನರಿಗೆ ಸ್ವ ಉದ್ಯೋಗ ಮಾಡಲು ಬ್ಯಾಂಕ್ ಗಳಿಂದ ಸಾಲ ಸೌಲಭ್ಯ ನೀಡಲಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಆದರೆ, ಇನ್ನೂ ಕೆಲ ನಾಯಕರು ಪ್ರತಿ ನಿತ್ಯ 67 ಸಾವಿರ ಮಕ್ಕಳು ಹುಟ್ಟುತ್ತಾವೆ, ಎಲ್ಲರಿಗೂ ರಾಜ್ಯ ಸರ್ಕಾರವೇ ಉದ್ಯೋಗ ನೀಡಲು ಆಗಲ್ಲ ಎಂದು ಬಿಜೆಪಿ ಬೆಂಬಲಿಗರು ನಿರುದ್ಯೋಗ ಸಮಸ್ಯೆಗೆ ಉತ್ತರ ನೀಡ್ತಾರೆ.
ಯೋಗಿ ಆದಿತ್ಯನಾಥ್ ರನ್ನು ಗೋರಖ್ ಪುರದಲ್ಲಿ ಮಹಾರಾಜ್‌ಜೀ ಎಂದೇ ಜನರು ಕರೆಯುತ್ತಾರೆ. ಗೋರಖ್ ಪುರ ಸದರ್ ಕ್ಷೇತ್ರದಲ್ಲಿ 60 ರಿಂದ 70 ಸಾವಿರ ಬ್ರಾಹ್ಮಣ ಸಮುದಾಯದ ಮತದಾರರಿದ್ದಾರೆ. 55 ಸಾವಿರ ಕಾಯಸ್ಥ ಸಮುದಾಯದ ಮತದಾರರಿದ್ದಾರೆ. 50 ಸಾವಿರ ಬನಿಯಾ ಸಮುದಾಯದ ಮತದಾರರಿದ್ದಾರೆ. 50 ಸಾವಿರ ದಲಿತರು, 75 ಸಾವಿರ ಓಬಿಸಿ, 40 ಸಾವಿರ ಮುಸ್ಲಿಂ, 25 ಸಾವಿರ ರಜಪೂತ್ ಸಮುದಾಯದ ಮತಗಳಿವೆ. ಯೋಗಿ ಕರ್ಮಭೂಮಿಯಲ್ಲಿ ಯೋಗಿ ಆದಿತ್ಯನಾಥ್ ಹೆಚ್ಚು ಪ್ರಚಾರ ನಡೆಸುವ ಅವಶ್ಯಕತೆಯೂ ಇಲ್ಲ ಎಂದು ಸ್ಥಳೀಯ ಬಿಜೆಪಿ ಕಾರ್ಯಕರ್ತರು ವಿಶ್ವಾಸದಲ್ಲಿದ್ದಾರೆ.
Published On - 4:05 pm, Wed, 2 March 22