ನವದೆಹಲಿ: ಭಾರತದಲ್ಲಿ ಈಗ ಪಂಚ ರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಪಂಚ ರಾಜ್ಯಗಳ ಪೈಕಿ ಅತಿ ದೊಡ್ಡ ರಾಜ್ಯವೇ ಉತ್ತರ ಪ್ರದೇಶ (Uttar Pradesh Election). ಉತ್ತರ ಪ್ರದೇಶ ರಾಜ್ಯದಲ್ಲಿ ಯಾವ ಪಕ್ಷ ಈ ಬಾರಿ ಅಧಿಕಾರದ ಗದ್ದುಗೆ ಹಿಡಿಯುತ್ತದೆ ಎಂಬ ಬಗ್ಗೆ ಕುತೂಹಲ ಇದೆ. ಜನರ ಕುತೂಹಲವನ್ನು ತಣಿಸುವ ಪ್ರಯತ್ನವನ್ನು ಟಿವಿ9 ಭಾರತ್ ವರ್ಷ್- ಪೋಲ್ ಸ್ಟ್ರಾಟ್ ಚುನಾವಣಾ ಪೂರ್ವ ಸಮೀಕ್ಷೆ ಮಾಡಿದೆ. ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ, ಯಾವ ಪಕ್ಷಕ್ಕೆ ಎಷ್ಟು ಸೀಟು ಸಿಗಲಿದೆ? ಯಾವ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಇಡೀ ದೇಶಕ್ಕೆ ಕುತೂಹಲ ಇದೆ. ಉತ್ತರಪ್ರದೇಶ ಚುನಾವಣೆಯ ಬಗ್ಗೆ ಟಿವಿ9 ಭಾರತ್ ವರ್ಷ್-ಪೋಲ್ ಸ್ಟ್ರಾಟ್ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯನ್ನು ಈಗ ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ. ಈ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತಿರುವುದರ ಲಾಭ ಬಿಜೆಪಿಗೆ ಸಿಗುತ್ತೆ ಎಂದು ಶೇ.48ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿಗೆ ಲಾಭವಾಗುವುದಿಲ್ಲ ಎಂದು ಶೇ.33ರಷ್ಟು ಜನರು ಸಮೀಕ್ಷೆಯಲ್ಲಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ವಾಪಾಸ್ ಪಡೆದಿದ್ದರಿಂದ ಬಿಜೆಪಿಗೆ ಲಾಭವಾಗುತ್ತದೆ ಎಂದು ಶೇ.34 ರಷ್ಟು ಜನರು ಹೇಳಿದ್ದಾರೆ. ಶೇ.43 ರಷ್ಟು ಜನರು ಬಿಜೆಪಿಗೆ ಲಾಭವಾಗಲ್ಲ ಎಂದಿದ್ದಾರೆ. ಶೇ.23 ರಷ್ಟು ಜನರು ಏನನ್ನೂ ಹೇಳಲಾಗುವುದಿಲ್ಲ ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ಎಲ್ಲ ಪಕ್ಷಗಳು ಓಬಿಸಿ ಮತದಾರರನ್ನ ಸೆಳೆಯಲು ಪ್ರಯತ್ನ ನಡೆಸಿವೆ. ಓಬಿಸಿ ಮತದಾರರೇ ಯುಪಿ ಚುನಾವಣೆಯಲ್ಲಿ ನಿರ್ಣಾಯಕ. ಆದರೇ, ಉತ್ತರ ಪ್ರದೇಶದ ಓಬಿಸಿ ಮತದಾರರ ಪೈಕಿ ಶೇ.48ರಷ್ಟು ಮತದಾರರು ಬಿಜೆಪಿ ಪರ ಒಲವು ವ್ಯಕ್ತಪಡಿಸಿದ್ದಾರೆ. ಶೇ.41.7ರಷ್ಟು ಓಬಿಸಿ ಮತದಾರರು ಎಸ್ಪಿ ಪಕ್ಷದತ್ತ ಒಲವು ವ್ಯಕ್ತಪಡಿಸಿದ್ದಾರೆ. ಬಿಎಸ್ಪಿ ಪರ ಶೇ.11ರಷ್ಟು, ಕಾಂಗ್ರೆಸ್ ಪರ ಶೇ.10ರಷ್ಟು ಮತದಾರರು ಒಲವು ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಿಯಾಂಕಾ ಗಾಂಧಿ ಮಹಿಳಾ ಮತದಾರರನ್ನು ಗುರಿಯಾಗಿಸಿಕೊಂಡು ಪಕ್ಷ ಸಂಘಟಿಸುತ್ತಿದ್ದಾರೆ. ಮಹಿಳಾ ಅಭ್ಯರ್ಥಿಗಳಿಗೆ ಶೇ.40 ರಷ್ಟು ಟಿಕೆಟ್ ಗಳನ್ನು ನೀಡುತ್ತಿದ್ದಾರೆ. ನನ್ನ ಜೊತೆಗೆ ಯುಪಿ ಸೋದರಿಯರಿದ್ದಾರೆ ಎಂದು ಕೂಡ ಪ್ರಿಯಾಂಕಾ ಗಾಂಧಿ ಹೇಳಿದ್ದರು. ಆದರೂ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ವರ್ಚಸ್ಸು, ಶಕ್ತಿ ವೃದ್ದಿಸುವ ಲಕ್ಷಣ ಸಮೀಕ್ಷೆಯಲ್ಲಿ ಕಾಣಿಸುತ್ತಿಲ್ಲ. ಯುಪಿ ಮಹಿಳಾ ಮತದಾರರ ಪೈಕಿ ಶೇ.46 ರಷ್ಟು ಮಹಿಳೆಯರು ಬಿಜೆಪಿ ಪರ ಒಲವು ತೋರಿದ್ದಾರೆ. ಮಹಿಳೆಯರ ಪೈಕಿ ಶೇ.28 ರಷ್ಟು ಮತದಾರರು ಎಸ್ಪಿ ಪಕ್ಷದತ್ತ ಒಲವು ತೋರಿದ್ದಾರೆ. ಮಹಿಳೆಯರ ಪೈಕಿ ಬಿಎಸ್ಪಿ ಪರ ಶೇ.17 ರಷ್ಟು ಮತದಾರರು ಒಲವು ತೋರಿದ್ದರೇ, ಕಾಂಗ್ರೆಸ್ ಪರ ಶೇ.5.6 ರಷ್ಟು ಮಹಿಳಾ ಮತದಾರರು ಮಾತ್ರ ಒಲವು ತೋರಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷದ ಮಹಿಳಾ ಕೇಂದ್ರೀತ ಪ್ರಚಾರ, ಕಾರ್ಯಕ್ರಮ, ಟಿಕೆಟ್ ನೀಡಿಕೆ ಯಾವುದೂ ಪರಿಣಾಮ ಬೀರಿಲ್ಲ ಎಂಬುದು ಸ್ಪಷ್ಟ.
ಉತ್ತರ ಪ್ರದೇಶದಲ್ಲಿ ಈ ಬಾರಿಯೂ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಟಿವಿ9 ಭಾರತ್ ವರ್ಷ್-ಪೋಲ್ ಸ್ಟ್ರಾಟ್ ಸಮೀಕ್ಷೆ ಸ್ಪಷ್ಟವಾಗಿ ಹೇಳಿದೆ. 403 ಕ್ಷೇತ್ರಗಳಿರುವ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 202 ಕ್ಷೇತ್ರಗಳಲ್ಲಿ ಗೆಲುವು ಅಗತ್ಯ. ಬಿಜೆಪಿ ಪಕ್ಷಕ್ಕೆ 205 ರಿಂದ 221 ಕ್ಷೇತ್ರಗಳಲ್ಲಿ ಗೆಲುವು ಸಿಗುತ್ತೆ ಎಂದು ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ. ಸಮಾಜವಾದಿ ಪಕ್ಷವು 144-158 ಕ್ಷೇತ್ರಗಳಲ್ಲಿ ಗೆಲುವು ಸಿಗಲಿದೆ ಎಂದು ಟಿವಿ9 ಭಾರತ್ ವರ್ಷ್- ಪೋಲ್ ಸ್ಟ್ರಾಟ್ ಸಮೀಕ್ಷೆ ಹೇಳಿದೆ.
ಬಿಎಸ್ಪಿ ಪಕ್ಷಕ್ಕೆ 21ರಿಂದ 31 ಕ್ಷೇತ್ರಗಳಲ್ಲಿ ಗೆಲುವು ಸಿಕ್ಕರೆ ಕಾಂಗ್ರೆಸ್ ಪಕ್ಷವು 2ರಿಂದ 7 ಕ್ಷೇತ್ರಗಳಿಗೆ ಸೀಮಿತವಾಗಲಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿಯೂ ಗರಿಷ್ಠ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂದು ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ.
ಉತ್ತರ ಪ್ರದೇಶದಲ್ಲಿ ಯಾರ ಕೆಲಸ ಉತ್ತಮವಾಗಿತ್ತು ಎಂಬ ಪ್ರಶ್ನೆಗೆ ಶೇ.44.3ರಷ್ಟು ಜನರು ಸಿಎಂ ಯೋಗಿ ಆದಿತ್ಯನಾಥ್ ಆಳ್ವಿಕೆ ಉತ್ತಮ ಎಂದಿದ್ದಾರೆ. ಶೇ.37ರಷ್ಟು ಜನರು ಅಖಿಲೇಶ್ ಯಾದವ್ ಆಳ್ವಿಕೆ ಉತ್ತಮವಾಗಿತ್ತು ಎಂದಿದ್ದಾರೆ. ಶೇ.13.9ರಷ್ಟು ಜನರು ಬಿಎಸ್ಪಿ ಪಕ್ಷದ ಮಾಯಾವತಿ ಆಳ್ವಿಕೆ ಉತ್ತಮವಾಗಿತ್ತು ಎಂದಿದ್ದಾರೆ. ಇದು ಯಾರು ಉತ್ತಮ ಎಂಬ ಪ್ರಶ್ನೆಗೂ ಜನರು ನೀಡಿದ ಉತ್ತರವೇ ಆಗಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೊಮ್ಮೆ ಸ್ಪಷ್ಟ ಬಹುಮತ ಸಿಕ್ಕರೆ, ಹಾಲಿ ಸಿಎಂ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಸಿಎಂ ಗಾದಿಗೇರಬಹುದು. ಈಗಾಗಲೇ ಪ್ರಧಾನಿ ಮೋದಿ ಯೋಗಿ ಆದಿತ್ಯನಾಥ್ ಅವರೇ ಬಿಜೆಪಿಯ ಸಿಎಂ ಅಭ್ಯರ್ಥಿ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಇದನ್ನೂ ಓದಿ: Uttar Pradesh Polls 2022: ಉತ್ತರ ಪ್ರದೇಶ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಕರ್ಹಾಲ್‌ನಿಂದ ಸ್ಪರ್ಧಿಸುವುದು ಖಚಿತ
ಬ್ರಾಹ್ಮಣ ಎಂಬುದು ಜಾತಿಯಲ್ಲ, ಶ್ರೇಷ್ಠ ವಿಧಾನದಲ್ಲಿ ಜೀವಿಸುವುದಷ್ಟೇ: ಉತ್ತರ ಪ್ರದೇಶ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ
Published On - 7:20 pm, Mon, 7 February 22