ನವದೆಹಲಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಇದೇ ಮೊದಲ ಬಾರಿಗೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಎಸ್‌ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮಗೋಪಾಲ್ ಯಾದವ್ ಇಂದು ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡಿದ್ದಾರೆ. ಅಖಿಲೇಶ್ ಯಾದವ್ ಸಂಸದರಾಗಿದ್ದು, ಅವರು ಇದುವರೆಗೆ ವಿಧಾನಸಭೆ ಚುನಾವಣೆಯಲ್ಲಿ (UP Assembly Election) ಸ್ಪರ್ಧಿಸಿರಲಿಲ್ಲ. ಇದೀಗ ಅವರು ಕರ್ಹಾಲ್ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಲಿದ್ದಾರೆ. ಕರ್ಹಾಲ್ 1993ರಿಂದ ಸಮಾಜವಾದಿ ಪಕ್ಷದ ಭದ್ರಕೋಟೆಯಾಗಿದೆ.
ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳಿಗೆ ಸಮಾಜವಾದಿ ಪಕ್ಷ (ಎಸ್‌ಪಿ) ತೆರೆ ಎಳೆದಿದ್ದು, ಅವರು ಮೈನ್‌ಪುರಿಯಲ್ಲಿ ಕರ್ಹಾಲ್‌ನಿಂದ ಕಣಕ್ಕಿಳಿಯಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಮೈನ್‌ಪುರಿ ಕರ್ಹಾಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಅವರು ಭಾರೀ ಅಂತರದಿಂದ ಗೆಲ್ಲುತ್ತಾರೆ ಎಂದು ರಾಮ್‌ಗೋಪಾಲ್ ಯಾದವ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ, ಎಸ್‌ಪಿ ರಾಷ್ಟ್ರೀಯ ವಕ್ತಾರ ಅಶುತೋಷ್ ವರ್ಮಾ ಅವರು ಅಖಿಲೇಶ್ ಯಾದವ್ ಉತ್ತರ ಪ್ರದೇಶದಲ್ಲಿ ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಕರ್ಹಾಲ್‌ನಿಂದ ಸ್ಪರ್ಧಿಸುವ ಬಗ್ಗೆ ಮಾತನಾಡಿದ್ದರು. ಆದರೆ ಆ ಬಗ್ಗೆ ಅಧಿಕೃತ ಘೋಷಣೆಯನ್ನು ಮಾಡಿರಲಿಲ್ಲ. ಇದೀಗ ಅಧಿಕೃತವಾಗಿಯೇ ಈ ಬಗ್ಗೆ ಘೋಷಿಸಲಾಗಿದೆ.
ಇದೇ ವೇಳೆ ಅಖಿಲೇಶ್ ಯಾದವ್ ಅವರು ಪತ್ರಿಕಾಗೋಷ್ಠಿಯಲ್ಲಿ ಉತ್ತರ ಪ್ರದೇಶದಲ್ಲಿ ಎಸ್‌ಪಿ ಅಧಿಕಾರಕ್ಕೆ ಬಂದರೆ ಏನೆಲ್ಲ ಮಾಡುತ್ತೇವೆ ಎಂಬ ಬಗ್ಗೆ ಭರವಸೆಗಳನ್ನು ನೀಡಿದರು. 2022ರಲ್ಲಿ ಎಸ್‌ಪಿ ಸರ್ಕಾರ ರಚಿಸಿದರೆ ಸಮಾಜವಾದಿ ಪಕ್ಷದ ರೋಜ್‌ಗಾರ್ ಸಂಕಲ್ಪ್‌ನಲ್ಲಿ ಎಸ್‌ಪಿ ಉತ್ತರ ಪ್ರದೇಶದ ಐಟಿ ವಲಯದಲ್ಲಿ 22 ಲಕ್ಷ ನೇರ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದ್ದಾರೆ.
ಬರೇಲಿಯ ಮಾಜಿ ಸಂಸದ ಪ್ರವೀಣ್ ಸಿಂಗ್ ಆರೋನ್ ಮತ್ತು ಅದರ ಮಾಜಿ ಮೇಯರ್ ಸುಪ್ರಿಯಾ ಅರೋನ್ ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ ಎಂದು ಈ ವೇಳೆ ಅವರು ಘೋಷಿಸಿದ್ದಾರೆ. ಕಳೆದ ತಿಂಗಳು ಭಾರತೀಯ ಜನತಾ ಪಕ್ಷವನ್ನು ತೊರೆದಿದ್ದ ರೀಟಾ ಸಿಂಗ್ ಕೂಡ ಇಂದು ಎಸ್‌ಪಿ ಸೇರಿದ್ದಾರೆ. ನಮ್ಮ ಪಕ್ಷಕ್ಕೆ ಸೇರುವವರು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಅಖಿಲೇಶ್ ಹೇಳಿದ್ದಾರೆ.
ವಿಧಾನಸಭೆ ಚುನಾವಣೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸ್ಪರ್ಧೆಯ ಕುರಿತು ಊಹಾಪೋಹಗಳು ಹೊರಹೊಮ್ಮಿದಾಗಿನಿಂದ ಅಖಿಲೇಶ್ ಯಾದವ್ ಕೂಡ 2022ರ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಮಾತುಕತೆಗಳು ನಡೆದಿತ್ತು. ಯೋಗಿ ಆದಿತ್ಯನಾಥ್ ಮತ್ತು ಅಖಿಲೇಶ್ ಯಾದವ್ ಈ ಹಿಂದೆ ಸಂಸದರಾಗಿದ್ದರು. ಆದರೆ ಅವರು ಎಂದಿಗೂ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಇಬ್ಬರೂ ಮುಖ್ಯಮಂತ್ರಿಯಾದಾಗ ವಿಧಾನ ಪರಿಷತ್ ಮಾರ್ಗದ ಮೂಲಕ ಮುಖ್ಯಮಂತ್ರಿಯಾಗಿದ್ದರು. ಅಖಿಲೇಶ್ ಪ್ರಸ್ತುತ ಅಜಂಗಢ ಸಂಸದರಾಗಿದ್ದಾರೆ.
ಇದನ್ನೂ ಓದಿ: ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ ಎಂದ ಪ್ರಿಯಾಂಕಾ ಗಾಂಧಿ; ಉಲ್ಟಾ ಹೊಡೆದಿದ್ದು ಯಾಕೆ?