UP Assembly Election 2022; ಚುನಾವಣೆಯಲ್ಲಿ ಗೋರಖ್​ಪುರದಿಂದಲೇ ಸ್ಪರ್ಧಿಸಲಿದ್ದಾರೆ ಸಿಎಂ ಯೋಗಿ ಆದಿತ್ಯನಾಥ್​; ಅಯೋಧ್ಯೆಯಿಂದ ಯಾರು?

| Updated By: Lakshmi Hegde

Updated on: Jan 15, 2022 | 1:38 PM

ಫೆಬ್ರವರಿ 10ರಿಂದ ಪ್ರಾರಂಭವಾಗಲಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ, ಉತ್ತರಪ್ರದೇಶದಲ್ಲಿ ಏಳು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 58 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಅದರಲ್ಲಿ 57 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಧರ್ಮೇಂದ್ರ ಪ್ರಧಾನ್​ ಬಿಡುಗಡೆ ಮಾಡಿದ್ದಾರೆ.

UP Assembly Election 2022; ಚುನಾವಣೆಯಲ್ಲಿ ಗೋರಖ್​ಪುರದಿಂದಲೇ ಸ್ಪರ್ಧಿಸಲಿದ್ದಾರೆ ಸಿಎಂ ಯೋಗಿ ಆದಿತ್ಯನಾಥ್​; ಅಯೋಧ್ಯೆಯಿಂದ ಯಾರು?
ಯೋಗಿ ಆದಿತ್ಯನಾಥ್​
Follow us on

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ(Uttar Pradesh Assembly Election 2022)ಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi Adityanath)​ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಬಹುದೊಡ್ಡ ಕುತೂಹಲ ಸೃಷ್ಟಿಸಿದ ವಿಚಾರವಾಗಿತ್ತು. ಈ ಬಾರಿ ಯೋಗಿ ಆದಿತ್ಯನಾಥ್​ ಅಯೋಧ್ಯೆಯಿಂದ ಸ್ಪರ್ಧಿಸಲಿದ್ದಾರೆ ಎಂದು ಬಲವಾದ ಮೂಲಗಳಿಂದ ತಿಳಿದುಬಂದ ಮಾಹಿತಿ ಎಂದೇ ಹೇಳಲಾಗಿತ್ತು. ಆದರೆ ಕುತೂಹಲಕ್ಕೀಗ ತೆರೆಬಿದ್ದಿದೆ. ಸಿಎಂ ಯೋಗಿ ಆದಿತ್ಯನಾಥ್ ಅಯೋಧ್ಯೆಯಿಂದ ಸ್ಪರ್ಧಿಸುತ್ತಿಲ್ಲ. ಬದಲಿಗೆ ಅವರು ಗೋರಖ್​ಪುರ ನಗರ ವಿಧಾನಸಭೆ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ ಎಂಬುದು ಪಕ್ಕಾ ಆಗಿದೆ. ಈ ಗೋರಖ್​ಪುರ ಯೋಗಿ ಆದಿತ್ಯನಾಥ್​ರ ಸ್ವಕ್ಷೇತ್ರ. ಆದರೆ ಈ ಬಾರಿ ಅಯೋಧ್ಯೆ ಅಭಿವೃದ್ಧಿ ಬೆನ್ನಲ್ಲೇ, ಅವರು ಗೋರಖ್​ಪುರ ತೊರೆದು ಅಯೋಧ್ಯೆಯಿಂದ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ಬಿಜೆಪಿಯ ಉತ್ತರಪ್ರದೇಶ ಉಸ್ತುವಾರಿ, ಸಚಿವ ಧರ್ಮೇಂದ್ರ ಪ್ರಧಾನ್​ ಅವರೇ ಇದನ್ನು ತಿಳಿಸಿದ್ದಾರೆ.

ಫೆಬ್ರವರಿ 10ರಿಂದ ಪ್ರಾರಂಭವಾಗಲಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ, ಉತ್ತರಪ್ರದೇಶದಲ್ಲಿ ಏಳು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 58 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಅದರಲ್ಲಿ 57 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಧರ್ಮೇಂದ್ರ ಪ್ರಧಾನ್​ ಬಿಡುಗಡೆ ಮಾಡಿದ್ದಾರೆ. ಹಾಗೇ, ಎರಡನೇ ಹಂತದಲ್ಲಿ 55 ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಅದರ 38 ಅಭ್ಯರ್ಥಿಗಳ ಹೆಸರನ್ನೂ ಇಂದು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯ ಪ್ರಕಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ತಮ್ಮ ಸ್ವಕ್ಷೇತ್ರ ಗೋರಖ್​​ಪುರದಿಂದಲೇ ಕಣಕ್ಕೆ ಇಳಿಯಲಿದ್ದಾರೆ. ಆದರೆ ಅಯೋಧ್ಯೆಯಿಂದ ಯಾರು ಸ್ಪರ್ಧಿಸಲಿದ್ದಾರೆ ಎಂಬುದಿನ್ನೂ ಬಹಿರಂಗವಾಗಿಲ್ಲ.

ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರಪ್ರದೇಶದ ಬಿಜೆಪಿ ಸರ್ಕಾರದಲ್ಲಿ ಅಸ್ಥಿರತೆಯೂ ಹೆಚ್ಚುತ್ತಿದೆ. ಯೋಗಿ ಸರ್ಕಾರದ ಒಟ್ಟು 10 ಶಾಸಕರು (3 ಸಚಿವರು)ಈಗಾಗಲೇ ಪಕ್ಷವನ್ನು ತೊರೆದಿದ್ದಾರೆ. ಅದರಲ್ಲಿ ಬಹುಪಾಲು ಜನರು ಅಖಿಲೇಶ್​ ಯಾದವ್​​ರ ಸಮಾಜವಾದಿ ಪಕ್ಷ ಸೇರ್ಪಡೆಯಾಗಿದ್ದಾರೆ. ಹೀಗೆ ಪಕ್ಷ ತೊರೆದವರೆಲ್ಲ ಹಿಂದುಳಿದ ವರ್ಗಗಳಿಗೆ ಸೇರಿದವರೇ ಆಗಿದ್ದು, ಬಿಜೆಪಿ ಸರ್ಕಾರ ಹಿಂದುಳಿದ ವರ್ಗ, ದಲಿತರ ನಿರ್ಲಕ್ಷ್ಯ ಮಾಡುತ್ತಿದೆ. ಇದರಿಂದ ಬೇಸರವಾಗಿ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಗೋರಖ್​​ಪುರದಲ್ಲಿ ದಲಿತರೊಂದಿಗೆ ಊಟ : 
ಹೀಗೆ ಒಬ್ಬರಾದ ಬಳಿಕ ಇನ್ನೊಬ್ಬರು ಬಿಜೆಪಿ ತೊರೆದ ಬೆನ್ನಲ್ಲೇ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಶುಕ್ರವಾರ ಗೋರಖ್​ಪುರಕ್ಕೆ ಭೇಟಿ ನೀಡಿದ್ದರು. ಅಷ್ಟೇ ಅಲ್ಲ, ಅಲ್ಲಿನ ದಲಿತರ ಮನೆಯಲ್ಲಿ ಊಟ ಮಾಡಿದ್ದರು. ನಮ್ಮ ಸರ್ಕಾರ ಯಾವುದೇ ತಾರತಮ್ಯವನ್ನೂ ಮಾಡದೆ, ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ ಎಂದೂ ಹೇಳಿದ್ದರು. ಜುಂಗಿಯಾ ಎಂಬಲ್ಲಿರುವ ಅಮೃತ್​ಲಾಲ್​ ಭಾರ್ತಿ ಎಂಬ ದಲಿತ ಬಿಜೆಪಿ ಕಾರ್ಯಕರ್ತನ ಮನೆಗೆ ಭೇಟಿ ನೀಡಿದ್ದ ಅವರು, ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು. ಅದೇ ಹೊತ್ತಲ್ಲಿ, ಬಿಜೆಪಿಯನ್ನು ತೊರೆದು ಹೋಗಿರುವ ಮಾಜಿ ಸಚಿವರಾದ ಸ್ವಾಮಿ ಪ್ರಸಾದ್ ಮೌರ್ಯ, ದಾರಾ ಸಿಂಗ್​ ಚೌಹಾಣ್​ ಮತ್ತು ಧರ್ಮ ಸಿಂಗ್ ಸೈನಿ ಅತ್ತ ಲಖನೌದಲ್ಲಿ ಸಮಾಜವಾದಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಇನ್ನು ದಲಿತ ಬಿಜೆಪಿ ಕಾರ್ಯಕರ್ತನ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಬಿಜೆಪಿ ಸರ್ಕಾರದ ಪೂರ್ವ ಆಡಳಿತ ನಡೆಸಿದ್ದ ಅಖಿಲೇಶ್ ಯಾದವ್​ ಪಕ್ಷ ಏನು ಮಾಡಿತ್ತು? ಸಮಾಜವಾದಿ ಪಕ್ಷದ ಸರ್ಕಾರವಿದ್ದ ಐದು ವರ್ಷದಲ್ಲಿ ಪಿಎಂ ಆವಾಸ್​ ಯೋಜನೆಯಡಿಯಲ್ಲಿ 18 ಸಾವಿರ ಮನೆಗಳನ್ನು ಮಾತ್ರ ಫಲಾನುಭವಿಗಳಿಗೆ ನೀಡಲಾಗಿತ್ತು. ಆದರೆ ಈಗ ನಮ್ಮ ಸರ್ಕಾರ 45 ಲಕ್ಷ ಮಂದಿಗೆ ಮನೆ ನೀಡಿದೆ ಎಂದು ಹೇಳಿದರು.

ಇದನ್ನೂ ಓದಿ: BSP Candidate List UP: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ; ಬಿಎಸ್​ಪಿಯಿಂದ 53 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Published On - 1:15 pm, Sat, 15 January 22