
ಹುಟ್ಟಿನಿಂದಲೇ ಎರಡು ಕೈಗಳನ್ನು ಕಳೆದುಕೊಂಡಿದ್ದರೂ ಕೂಡ ಛಲ ಬಿಡದೇ ತನ್ನ ಕಾಲನ್ನೇ ಕೈಯಾಗಿಸಿಕೊಂಡು ಪರೀಕ್ಷೆ ಬರೆದು ಎರಡನೇ ರ‍್ಯಾಂಕ್ ಪಡೆಯುವ ಇಡೀ ದೇಶಕ್ಕೆ ಮಾದರಿಯಾಗಿದ್ದಾಳೆ ಅಂಕಿತಾ ತೋಪಾಲ್. ಉತ್ತರಾಖಂಡದ ಚಮೋಲಿಯ ದಿಡೋಲಿ ಗ್ರಾಮದ ನಿವಾಸಿ ಅಂಕಿತಾ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅಂದರೆ NTA ಆಯೋಜಿಸಿದ್ದ JRF (ಜೂನಿಯರ್ ರಿಸರ್ಚ್ ಫೆಲೋಶಿಪ್) ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ವರದಿಗಳ ಪ್ರಕಾರ, ಹುಟ್ಟಿನಿಂದಲೇ ಅಂಕಿತಾಗೆ ಎರಡೂ ಕೈಗಳಿಲ್ಲ. ಬಾಲ್ಯದಿಂದಲೂ ತನ್ನ ಕಾಲನ್ನೇ ಕೈಗಳ ರೀತಿಯಲ್ಲಿ ಬಳಸುತ್ತಿದ್ದಳು. ಕಲಿಕೆಯಲ್ಲಿ ಟಾಪರ್ ಆಗಿದ್ದ ಅಂಕಿತಾ ಕಳೆದ ಎರಡು ವರ್ಷಗಳಿಂದ JRF ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದಳು. ತನ್ನ ಅಂಗವೈಕಲ್ಯವನ್ನು ಮೆಟ್ಟಿನಿಂತು JRF ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಮಾತ್ರವಲ್ಲದೆ, ಅಖಿಲ ಭಾರತ ಮಟ್ಟದಲ್ಲಿ ಎರಡನೇ ರ‍್ಯಾಂಕ್ ಪಡೆಯುವ ಮೂಲಕ ಲಕ್ಷಾಂತರ ಯುವಪೀಳಿಗೆಗೆ ಮಾದರಿಯಾಗಿದ್ದಾಳೆ.
ಅಂಕಿತಾ ಅವರ ತಂದೆ ಪ್ರೇಮ್ ಸಿಂಗ್ ತೋಪಾಲ್ ತೆಹ್ರಿ ಜಿಲ್ಲೆಯ ಐಟಿಐನಲ್ಲಿ ಬೋಧಕರಾಗಿ ಕೆಲಸ ಮಾಡುತ್ತಿದ್ದಾರೆ. ಅಂಕಿತಾಳ ಶಿಕ್ಷಣದ ಬಗ್ಗೆ ಹೇಳುವುದಾದರೆ, ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ (ಪಿಜಿ) ಪಡೆದಿದ್ದಾರೆ ಮತ್ತು ಈಗ ಜೆಆರ್‌ಎಫ್ ಪರೀಕ್ಷೆಯಲ್ಲಿ ಈ ಸಾಧನೆ ಮಾಡುವ ಮೂಲಕ ಇಡೀ ಉತ್ತರಾಖಂಡಕ್ಕೆ ಕೀರ್ತಿ ತಂದಿದ್ದಾರೆ. ಅಂಕಿತಾಳ ಸಾಧನೆಯಿಂದ ಆಕೆಯ ಕುಟುಂಬ ಮಾತ್ರವಲ್ಲದೇ ಇಡೀ ಗ್ರಾಮವೇ ಸಂತೋಷದಿಂದ ಮಿಂದೆದ್ದಿದೆ.
ಇದನ್ನೂ ಓದಿ: ಬಡತನವನ್ನು ಮೆಟ್ಟಿನಿಂತು ಸಹೋದರಿಯರ ಸಾಧನೆ; ಅಕ್ಕ IAS, ತಂಗಿ IPS ಅಧಿಕಾರಿ
JRF (ಜೂನಿಯರ್ ರಿಸರ್ಚ್ ಫೆಲೋಶಿಪ್) ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅಂದರೆ NTA ಆಯೋಜಿಸುತ್ತದೆ. ಈ ಪರೀಕ್ಷೆಯು ವರ್ಷಕ್ಕೆ ಎರಡು ಬಾರಿ ಜೂನ್ ಮತ್ತು ಡಿಸೆಂಬರ್/ಜನವರಿಯಲ್ಲಿ ನಡೆಯುತ್ತದೆ. ಇದು ರಾಷ್ಟ್ರೀಯ ಅರ್ಹತಾ ಪರೀಕ್ಷೆಯಾಗಿದ್ದು, ಇದರಲ್ಲಿ ಉತ್ತೀರ್ಣರಾದ ನಂತರ, ಅಭ್ಯರ್ಥಿಗಳು ಯಾವುದೇ ಕೇಂದ್ರೀಯ ವಿಶ್ವವಿದ್ಯಾಲಯ ಅಥವಾ ಅದರ ಅಡಿಯಲ್ಲಿರುವ ಶಿಕ್ಷಣ ಸಂಸ್ಥೆಗಳಿಂದ ತಮ್ಮ ಆಯ್ಕೆಯ ವಿಷಯದ ಕುರಿತು ಸಂಶೋಧನೆ ಪಿಎಚ್‌ಡಿ ಮಾಡಲು ಅವಕಾಶವನ್ನು ಪಡೆಯುತ್ತಾರೆ. ಈ ಸಂಶೋಧನೆಗೆ ಭಾರತ ಸರ್ಕಾರವು ಹಣವನ್ನು ಸಹ ಒದಗಿಸುತ್ತದೆ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ