ಬೆಂಗಳೂರು: ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ (Power Man) ಹುದ್ದೆಗೆ ಆಯ್ಕೆಗೊಂಡ 1,385 ಅಭ್ಯರ್ಥಿಗಳಿಗೆ ಇಂದು (ಜೂನ್ 30) ನೇಮಕಾತಿ ಆದೇಶ ಪತ್ರ ಹಸ್ತಾಂತರ ಮಾಡಲಾಗುವುದು. ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಇಂಧನ ಸಚಿವ ವಿ. ಸುನೀಲ್ ಕುಮಾರ್ ಆದೇಶ ಪತ್ರ ಹಸ್ತಾಂತರಿಸಲಿದ್ದಾರೆ.
ಕೆಪಿಟಿಸಿಎಲ್ ಹಾಗೂ ವಿವಿಧ ಎಸ್ಕಾಂ ವ್ಯಾಪ್ತಿಯಲ್ಲಿ ಖಾಲಿ ಇದ್ದ ಹುದ್ದೆಗಳಾಗಿದ್ದು, ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ನಡೆಯುತ್ತಿರುವ ಮೊದಲ ಸರ್ಕಾರಿ ನೇಮಕಾತಿ ಆದೇಶ ವಿತರಣೆಯಾಗಿದೆ. ಅತ್ಯಂತ ಪಾರದರ್ಶಕವಾಗಿ ಈ ನೇಮಕ ಪ್ರಕ್ರಿಯೆ ನಡೆಸಲಾಗಿದ್ದು, ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡದ ರೀತಿಯಲ್ಲಿ ನೇಮಕ ಪ್ರಕ್ರಿಯೆ ನಡೆಸಿದ್ದೇವೆ. 1,385 ಅಭ್ಯರ್ಥಿಗಳಿಗೆ ಏಕಕಾಲಕ್ಕೆ ನೇಮಕ ಆದೇಶ ನೀಡಲಾಗುತ್ತಿದೆ ಎಂದು ಇಂಧನ ಸಚಿವ ವಿ. ಸುನೀಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.