BSF Recruitment 2025: ಗಡಿ ಭದ್ರತಾ ಪಡೆಯಲ್ಲಿ 391 ಕಾನ್‌ಸ್ಟೆಬಲ್ ಹುದ್ದೆಗೆ ನೇಮಕಾತಿ; ಕ್ರೀಡಾಪಟುಗಳಿಗೆ ಸೇನೆ ಸೇರಲು ಸುವರ್ಣವಕಾಶ
ಗಡಿ ಭದ್ರತಾ ಪಡೆ (BSF) ಕ್ರೀಡಾ ಕೋಟಾದಡಿ 391 ಕಾನ್‌ಸ್ಟೆಬಲ್ ಗ್ರೂಪ್ 'C' ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಮೆಟ್ರಿಕ್ಯುಲೇಷನ್ ವಿದ್ಯಾರ್ಹತೆ ಹೊಂದಿರುವ 18-23 ವರ್ಷದ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದು. ರಾಷ್ಟ್ರೀಯ/ಅಂತರರಾಷ್ಟ್ರೀಯ ಪದಕ ವಿಜೇತರು/ಭಾಗವಹಿಸಿದವರು ಅರ್ಹರು. ಆನ್‌ಲೈನ್ ಅರ್ಜಿ ಸಲ್ಲಿಕೆ ನವೆಂಬರ್ 4ರವರೆಗೆ. ಲಿಖಿತ ಪರೀಕ್ಷೆ ಇಲ್ಲ; ದೈಹಿಕ ಮತ್ತು ಕ್ರೀಡಾ ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಗಡಿ ಭದ್ರತಾ ಪಡೆ (BSF), ಕ್ರೀಡಾ ಕೋಟಾದಡಿಯಲ್ಲಿ ಗ್ರೂಪ್ ‘C’ ಅಡಿಯಲ್ಲಿ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯಡಿಯಲ್ಲಿ ಒಟ್ಟು 391 ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದು. ಕ್ರೀಡಾ ಕೋಟಾದ ಕಾನ್ಸ್‌ಟೇಬಲ್ ಹುದ್ದೆಗಳಲ್ಲಿ ಪುರುಷ ಅಭ್ಯರ್ಥಿಗಳಿಗೆ 197 ಹುದ್ದೆಗಳನ್ನು ಮತ್ತು ಮಹಿಳಾ ಅಭ್ಯರ್ಥಿಗಳಿಗೆ 194 ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಆನ್‌ಲೈನ್ ಅರ್ಜಿಗಳನ್ನು ನವೆಂಬರ್ 4ರವರೆಗೆ ಸ್ವೀಕರಿಸಲಾಗುತ್ತದೆ.
ಅಥ್ಲೆಟಿಕ್ಸ್, ಬಾಕ್ಸಿಂಗ್, ಬಾಸ್ಕೆಟ್‌ಬಾಲ್, ಹಾಕಿ, ಫುಟ್‌ಬಾಲ್, ಈಜು, ಶೂಟಿಂಗ್, ಜೂಡೋ, ಕರಾಟೆ, ಕುಸ್ತಿ, ವೇಟ್‌ಲಿಫ್ಟಿಂಗ್, ವಾಲಿಬಾಲ್, ಹ್ಯಾಂಡ್‌ಬಾಲ್, ಟೇಬಲ್ ಟೆನಿಸ್, ಬಿಲ್ಲುಗಾರಿಕೆ, ಬ್ಯಾಡ್ಮಿಂಟನ್, ಸೈಕ್ಲಿಂಗ್ ಮುಂತಾದ ಕ್ರೀಡಾ ವಿಭಾಗಗಳಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಅವರು ಮೆಟ್ರಿಕ್ಯುಲೇಷನ್ (ಹತ್ತನೇ ತರಗತಿ)ಯಲ್ಲಿ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು. ನವೆಂಬರ್ 4, 2023 ರಿಂದ ನವೆಂಬರ್ 4, 2025 ರವರೆಗೆ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದವರು ಮತ್ತು ಭಾಗವಹಿಸಿದವರು ಸಹ ಅರ್ಹರು. ಅರ್ಜಿದಾರರ ವಯಸ್ಸು ಆಗಸ್ಟ್ 01, 2025 ರಂತೆ 18 ರಿಂದ 23 ವರ್ಷಗಳ ನಡುವೆ ಇರಬೇಕು. ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷಗಳು ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷಗಳು ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
ಇದನ್ನೂ ಓದಿ: ಸರ್ಕಾರಿ ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಲು ಸುವರ್ಣವಕಾಶ; ಡಿಗ್ರಿ ಪಾಸಾಗಿದ್ರೆ ಸಾಕು
ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 16ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಯುಆರ್, ಒಬಿಸಿ ಮತ್ತು ಒಬಿಸಿ ಅಭ್ಯರ್ಥಿಗಳು ತಲಾ 159 ರೂ. ನೋಂದಣಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಎಸ್‌ಸಿ, ಎಸ್‌ಟಿ ಮತ್ತು ಮಹಿಳಾ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ದೈಹಿಕ ಗುಣಮಟ್ಟ ಪರೀಕ್ಷೆ (ಪಿಎಸ್‌ಟಿ), ಕ್ರೀಡಾ ಮೆರಿಟ್ ಪಟ್ಟಿ, ವೈದ್ಯಕೀಯ ಪರೀಕ್ಷೆ ಇತ್ಯಾದಿಗಳ ಆಧಾರದ ಮೇಲೆ ಅಂತಿಮ ಆಯ್ಕೆಯನ್ನು ಮಾಡಲಾಗುತ್ತದೆ. ಆಯ್ಕೆಯಾದವರಿಗೆ ತಿಂಗಳಿಗೆ ರೂ. 21,700 ರಿಂದ ರೂ. 69,100 ರವರೆಗೆ ವೇತನವನ್ನು ನೀಡಲಾಗುತ್ತದೆ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




