
ಕೋಲ್ಕತ್ತಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಭಾರತ ಸರ್ಕಾರದ ಸಾರ್ವಜನಿಕ ವಲಯದ ಉದ್ದಿಮೆಯಾದ ಕೋಲ್ ಇಂಡಿಯಾ ಲಿಮಿಟೆಡ್ (CIL), ಗಣಿ ಇಲಾಖೆಯಲ್ಲಿ ಖಾಲಿ ಇರುವ ಮ್ಯಾನೇಜ್ಮೆಂಟ್ ಟ್ರೈನಿ (Management Trainee) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 276 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ವಿಶೇಷವೆಂದರೆ ಈ ಹುದ್ದೆಗಳಿಗೆ ಯಾವುದೇ ಪ್ರತ್ಯೇಕ ಲಿಖಿತ ಪರೀಕ್ಷೆ ಇರುವುದಿಲ್ಲ.
ಮ್ಯಾನೇಜ್ಮೆಂಟ್ ಟ್ರೈನಿ (ಗಣಿ) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೈನಿಂಗ್ ಎಂಜಿನಿಯರಿಂಗ್‌ನಲ್ಲಿ ಬಿಇ ಅಥವಾ ಬಿಟೆಕ್ (BE/B.Tech) ಪದವಿ ಪೂರ್ಣಗೊಳಿಸಿರಬೇಕು. ಅಂಕಗಳ ವಿಷಯಕ್ಕೆ ಬಂದರೆ, ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳು ಕನಿಷ್ಠ ಶೇ. 60 ಅಂಕಗಳನ್ನು ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಶೇ. 55 ಅಂಕಗಳನ್ನು ಪಡೆದಿರಬೇಕು. ವಯೋಮಿತಿಗೆ ಸಂಬಂಧಿಸಿದಂತೆ, ಏಪ್ರಿಲ್ 30, 2026 ಕ್ಕೆ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ ವಯಸ್ಸಾಗಿರಬೇಕು. ಸರ್ಕಾರದ ನಿಯಮದಂತೆ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
ಇದನ್ನೂ ಓದಿ: ಇನ್ಫೋಸಿಸ್‌ನಿಂದ ಭರ್ಜರಿ ಉದ್ಯೋಗಾವಕಾಶ; 20,000 ಫ್ರೆಶರ್ಸ್ ನೇಮಕಾತಿ ಘೋಷಣೆ
ಈ ನೇಮಕಾತಿಯ ಪ್ರಮುಖ ಮಾನದಂಡವೆಂದರೆ ಗೇಟ್ (GATE) 2025 ಪರೀಕ್ಷೆಯ ಅಂಕಗಳು. ಅಭ್ಯರ್ಥಿಗಳು ಗೇಟ್ 2025 ರಲ್ಲಿ ಅರ್ಹತೆ ಪಡೆದಿರುವುದು ಕಡ್ಡಾಯವಾಗಿದ್ದು, ಆ ಅಂಕಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ಅಂತಿಮವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಶುಲ್ಕದ ವಿಷಯದಲ್ಲಿ, ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು 1,180 ರೂ. ಪಾವತಿಸಬೇಕಾಗುತ್ತದೆ. ಆದರೆ, ಎಸ್‌ಸಿ, ಎಸ್‌ಟಿ ಮತ್ತು ಕೋಲ್ ಇಂಡಿಯಾದ ಹಾಲಿ ಉದ್ಯೋಗಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು 60,000 ರೂ. ವೇತನ ನೀಡಲಾಗುತ್ತದೆ. ಯಶಸ್ವಿಯಾಗಿ ತರಬೇತಿ ಪೂರ್ಣಗೊಂಡ ನಂತರ, ಹುದ್ದೆಯ ಜವಾಬ್ದಾರಿಗೆ ಅನುಗುಣವಾಗಿ ಮಾಸಿಕ ವೇತನವು ಗರಿಷ್ಠ 1,80,000 ರೂ. ಗಳವರೆಗೆ ಇರಲಿದೆ. ನಿನ್ನೆಯಿಂದ(ಮೇ 08) ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕೋಲ್ ಇಂಡಿಯಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:08 pm, Sat, 9 May 26