ಮಧ್ಯಪ್ರದೇಶದ ದೃಷ್ಟಿಮಾಂದ್ಯ ಬಿ ಟೆಕ್ ಪದವೀಧರನಿಗೆ ಮೈಕ್ರೊಸಾಫ್ಟ್ ಕಂಪನಿಯು ವಾರ್ಷಿಕ 47 ಲಕ್ಷ ರೂ. ಗಳ ಸಂಭಾವನೆ ಆಫರ್ ಮಾಡಿದೆ!!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 31, 2022 | 3:46 PM

ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತಾಡಿರುವ ಸೊನಾಕಿಯಾ, ತಾನು ಆಫರನ್ನು ಅಂಗೀಕರಿಸಿದ್ದು ಕಂಪನಿಯ ಬೆಂಗಳೂರು ಕಚೇರಿಯನ್ನು ಸಾಫ್ಟ್ ವೇರ್ ಇಂಜಿನೀಯರ್ ಸಾಮರ್ಥ್ಯದಲ್ಲಿ ಇಷ್ಟರಲ್ಲೇ ಸೇರುವುದಾಗಿ ಹೇಳಿದ್ದಾರೆ.

ಮಧ್ಯಪ್ರದೇಶದ ದೃಷ್ಟಿಮಾಂದ್ಯ ಬಿ ಟೆಕ್ ಪದವೀಧರನಿಗೆ ಮೈಕ್ರೊಸಾಫ್ಟ್ ಕಂಪನಿಯು ವಾರ್ಷಿಕ 47 ಲಕ್ಷ ರೂ. ಗಳ ಸಂಭಾವನೆ ಆಫರ್ ಮಾಡಿದೆ!!
ಮೈಕ್ರೊಸಾಫ್ಟ್ ಸಂಸ್ಥೆ
Follow us on

ಇಂದೋರ್: ನಿಮ್ಮಲ್ಲಿ ಯಾವುದೇ ಊನವಿದ್ದರೂ, ಪ್ರತಿಭೆಯೊಂದು ಇದ್ದರೆ ಅದಕ್ಕೆ ಪುರಸ್ಕಾರ, ಮನ್ನಣೆ ಸಿಕ್ಕೇ ಸಿಗುತ್ತದೆ ಅನ್ನೋದಿಕ್ಕೆ ಮಧ್ಯಪ್ರದೇಶದ ಈ ದೃಷ್ಟಿಮಾಂದ್ಯ ಯುವಕನೇ ಸಾಕ್ಷಿ ಮಾರಾಯ್ರೇ. ವಿಷಯ ಏನು ಗೊತ್ತಾ? ಐಟಿ ಕಂಪನಿಗಳಲ್ಲಿ ದೈತ್ಯ ಎನಿಸಿಕೊಂಡಿರುವ ಮೈಕ್ರೊಸಾಫ್ಟ್ (Microsoft) ಈ ದೃಷ್ಟಿಮಾಂದ್ಯ ಸಾಫ್ಟ್ ವೇರ್ ಇಂಜಿನೀಯರ್ ಗೆ (Software Engineer) ವಾರ್ಷಿಕ ರೂ. 47 ಲಕ್ಷ ಸಂಭಾವನೆಯ ನೌಕರಿ ನೀಡಿದೆ. ಅವರು ಶಿಕ್ಷಣ ಪೂರೈಸಿದ ಸಂಸ್ಥೆಯ ಅಧಿಕಾರಿಯೊಬ್ಬರು ಸದರಿ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇಂದೋರಿನ ಸರ್ಕಾರೀ ಅನುದಾನಿತ ಶ್ರೀ ಗೋವಿಂದರಾಮ್ ಸೆಕ್ಸಾರಿಯಾ ತಾಂತ್ರಿಕ ಮತ್ತು ವಿಜ್ಞಾನ ಶಿಕ್ಷಣ ಸಂಸ್ಥೆಯಿಂದ (ಎಸ್ ಜಿ ಎಸ್ ಐಟಿ ಎಸ್) ಬಿ ಟೆಕ್ ಪದವೀಧರನಾಗಿರುವ 25-ವರ್ಷ-ವಯಸ್ಸಿನ ಯಶ್ ಸೊನಾಕಿಯಾ ಈ ಕತೆಯ ಕಥಾನಾಯಕರಾಗಿದ್ದಾರೆ. ಸೊನಾಕಿಯಾಗೆ ಮೈಕ್ರೊಸಾಫ್ಟ್ ಕಂಪನಿಯು 47 ಲಕ್ಷ ರೂ. ಸಂಬಳ ಪ್ಯಾಕೇಜ್ ಆಫರ್ ಮಾಡಿದೆ ಎಂದು ಸಂಸ್ಥೆಯ ಅಧಿಕಾರಿ ಹೇಳಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತಾಡಿರುವ ಸೊನಾಕಿಯಾ, ತಾನು ಆಫರನ್ನು ಅಂಗೀಕರಿಸಿದ್ದು ಕಂಪನಿಯ ಬೆಂಗಳೂರು ಕಚೇರಿಯನ್ನು ಸಾಫ್ಟ್ ವೇರ್ ಇಂಜಿನೀಯರ್ ಸಾಮರ್ಥ್ಯದಲ್ಲಿ ಇಷ್ಟರಲ್ಲೇ ಸೇರುವುದಾಗಿ ಹೇಳಿದ್ದಾರೆ. ಹಾಗೆ ನೋಡಿದರೆ ಆರಂಭದಲ್ಲಿ ಮನೆಯಿಂದಲೇ ಕೆಲಸ ಮಾಡುವಂತೆ ಕಂಪನಿಯು ಸೊನಾಕಿಯಾಗೆ ಹೇಳಿದೆ.

ಸೊನಾಕಿಯಾ ಕೇವಲ 8ರ ಪ್ರಾಯದವರಾಗಿದ್ದಾಗ ಗ್ಲುಕೋಮಾದಿಂದ ಕಣ್ಣಿನ ದೃಷ್ಟಿ ಕಳೆದುಕೊಂಡರಂತೆ.

‘ಸ್ಕ್ರೀನ್-ರೀಡರ್ ಸಾಫ್ಟ್ ವೇರ್ ಮೂಲಕ ನನ್ನ ವ್ಯಾಸಂಗವನ್ನು ಪೂರ್ತಿಗೊಳಿಸಿದ ಬಳಿಕ ನೌಕರಿ ಹುಡುಕಲಾರಂಭಿಸಿದೆ ಮತ್ತು ಈ ಅವಧಿಯಲ್ಲೇ ಕೋಡಿಂಗ್ ಕಲಿತು ಮೈಕ್ರೊಸಾಫ್ಟ್ ಕಂಪನಿಗೆ ಅರ್ಜಿ ಗುಜರಾಯಿಸಿದೆ. ಆನ್ಲೈನ್ ಸಂದರ್ಶನ ನಡೆಸಿದ ಬಳಿಕ ಕಂಪನಿಯು ನನ್ನನ್ನು ಸಾಫ್ಟ್ ವೇರ್ ಹುದ್ದೆಗೆ ಆಯ್ಕೆ ಮಾಡಿಕೊಂಡಿತು,’ ಎಂದು ಸೊನಾಕಿಯಾ ಹೇಳಿದ್ದಾರೆ.

ಇಂದೋರ್ ನಗರದಲ್ಲಿ ಕ್ಯಾಂಟೀನೊಂದನ್ನು ನಡೆಸುವ ಸೊನಾಕಿಯಾ ಅವರ ತಂದೆ ಯಶ್ಪಾಲ್, ತಮ್ಮ ಮಗ ಹುಟ್ಟಿದ ಮರುದಿನವೇ ಅವನಲ್ಲಿ ಗ್ಲುಕೋಮಾ ಪತ್ತೆಯಾಗಿದ್ದರಿಂದ ಅವನು ದೃಷ್ಟಿಹೀನತೆಯಿಂದ ಬಳಲುತ್ತಿದ್ದ ಮತ್ತು ವಸ್ತುಗಳು ಅವನಿಗೆ ಬ್ಲರ್ ಆಗಿ ಕಾಣಿಸುತ್ತಿದ್ದವು ಅಂತ ಹೇಳಿದ್ದಾರೆ.

‘ಅವನು 8 ವರ್ಷದವನಾದಾಗ ಸಂಪೂರ್ಣವಾಗಿ ದೃಷ್ಟಿಯನ್ನು ಕಳೆದುಕೊಂಡ. ಸಾಫ್ಟ್ ವೇರ್ ಇಂಜಿನೀಯರ್ ಆಗಬೇಕೆಂಬ ಅದಮ್ಯ ಹಂಬಲ ಅವನಲ್ಲಿದ್ದಿದ್ದುರಿಂದ ನಾವು ಎದೆಗುಂದಲಿಲ್ಲ,’ ಎಂದು ಯಶ್ಪಾಲ್ ಹೇಳಿದರು.

ಯಶ್ಪಾಲ್ ತಮ್ಮ ಮಗನಿಗೆ 5ನೇ ತರಗತಿಯವರೆಗೆ ವಿಶೇಷ ಚೇತನರ ಶಾಲೆಯಲ್ಲಿ ಓದಿಸಿದ ಬಳಿಕ ನಿಯಮಿತ ಶಾಲೆಗಳಲ್ಲಿ ಶಿಕ್ಷಣ ಕೊಡಿಸಿದರು. ಈ ಹಂತದಲ್ಲಿ ಅದರಲ್ಲೂ ವಿಶೇಷವಾಗಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಸೊನಾಕಿಯಾ ಸಹೋದರಿಯರಲ್ಲಿ ಒಬ್ಬರು ಅವರಿಗೆ ನೆರವಾದರು.

‘ಯಶ್ ನನ್ನ ಹಿರಿಮಗನಾಗಿರುವುದರಿಂದ ಅವನ ಮೇಲೆ ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆ. ಸಾಫ್ಟ್ ವೇರ್ ಇಂಜಿನೀಯರ್ ಅಗಬೇಕೆಂಬ ಅವನ ಗುರಿ ಬಹಳಷ್ಟು ಪರಿಶ್ರಮದ ನಂತರ ಈಡೇರಿದೆ,’ ಎಂದು ಯಶ್ಪಾಲ್ ಭಾವುಕರಾಗಿ ಹೇಳಿದ್ದಾರೆ.