
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಅವರ ಜೀವನದಲ್ಲಿ ಹೊಸ ಸಂಚಲನ ಶುರುವಾಗಿದೆ. ಗೌರಿ ಸ್ಪ್ರಾಟ್ ಅವರೊಂದಿಗಿನ ಮೂರನೇ ಮದುವೆಯ ಬೆನ್ನಲ್ಲೇ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಕರೆಗಳು ಬಂದಿವೆ ಎನ್ನಲಾಗಿದೆ. ಈ ಘಟನೆಯು ಸಂಪೂರ್ಣ ಸಿನಿರಂಗದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.
ಅರ್ಜು ಬಿಷ್ಣೋಯ್ ಮತ್ತು ಟೈಸನ್ ಬಿಷ್ಣೋಯ್ ಹೆಸರಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಆಡಿಯೋ ಮೆಸೇಜ್ ಹರಿದಾಡುತ್ತಿದೆ. ಆಮಿರ್ ಖಾನ್ ‘ಲವ್ ಜಿಹಾದ್’ ಉತ್ತೇಜಿಸುತ್ತಿದ್ದಾರೆ ಎಂದು ಈ ಸಂದೇಶದಲ್ಲಿ ಆರೋಪಿಸಲಾಗಿದೆ. ಆದಾಗ್ಯೂ ಈ ಆಡಿಯೋ ಕರೆ ನಿಜವೋ ಅಥವಾ ಸುಳ್ಳೋ ಎಂಬುದು ಇನ್ನು ದೃಢಪಟ್ಟಿಲ್ಲ. ಸದ್ಯ ಈ ಸುದ್ದಿ ಸಂಚಲನ ಸೃಷ್ಟಿಸಿದೆ.
ಇದೀಗ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯೊಂದು ಹೊಸ ಆಘಾತಕಾರಿ ಸತ್ಯವನ್ನು ಹೊರಹಾಕಿದೆ. ಬಿಷ್ಣೋಯ್ ಗ್ಯಾಂಗ್‌ಗೆ ಸೇರಿದ ಕೆಲ ವ್ಯಕ್ತಿಗಳು ಆಮಿರ್ ಮನೆ ಸುತ್ತಮುತ್ತ ಓಡಾಡಿದ್ದಾರೆ ಎನ್ನಲಾಗಿದೆ. ಹಲವು ವಾರಗಳ ಕಾಲ ನಟನ ನಿವಾಸದ ಸುತ್ತ ತೀವ್ರ ಕಣ್ಣಾವಲು ಇಡಲಾಗಿತ್ತು. ಈ ಸಂಗತಿಯು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ ಶಂಕಿತರು ನಟನ ಚಲನವಲನಗಳ ಮೇಲೆ ನಿಗಾ ವಹಿಸಿದ್ದರು. ಆದರೆ ಕೊನೆಗೆ ಅವರು ತಮ್ಮ ಯೋಜನೆಯನ್ನು ಕೈಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇತ್ತೀಚೆಗೆ ನಟ ಟೈಗರ್ ಶ್ರಾಫ್ ಅವರ ನಿವಾಸದ ಬಳಿ ನಡೆದ ಗುಂಡಿನ ದಾಳಿ ಪ್ರಕರಣದ ತನಿಖೆ ವೇಳೆ ಈ ವಿಷಯ ಬಯಲಾಗಿದೆ. ತನಿಖೆ ವೇಳೆ ಹಲವು ಪ್ರಮುಖ ಸುಳಿವುಗಳು ಸಿಕ್ಕಿವೆ.
ಇದನ್ನೂ ಓದಿ: ಮಾಡಿದ ತಪ್ಪಿಗೆ ವೇದಿಕೆ ಮೇಲೆಯೇ ಕಣ್ಣೀರಿಟ್ಟ ಆಮಿರ್ ಖಾನ್; 60ನೇ ವಯಸ್ಸಿಗೆ ಜ್ಞಾನೋದಯ
ಈ ಹೊಸ ಬೆಳವಣಿಗೆಗಳು ಬಾಲಿವುಡ್ ನಟರ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ಮೂಡಿಸಿವೆ. ಸಿನಿಮಾ ತಾರೆಯರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹ ಕೇಳಿಬರುತ್ತಿದೆ. ಆದರೆ ಆಮಿರ್ ಖಾನ್ ಅವರೇ ಶೂಟರ್‌ಗಳ ನೇರ ಗುರಿಯಾಗಿದ್ದರೆ ಎಂಬ ಬಗ್ಗೆ ಇನ್ನು ಯಾವುದೇ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.