AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಾಹದ ಬಳಿಕ ಚೆನ್ನೈಗೆ ಮರಳಿದ ಅನಿರುದ್ಧ್ ರವಿಚಂದರ್, ಕಾವ್ಯಾ ಮಾರನ್; ನ.21ಕ್ಕೆ ಆರತಕ್ಷತೆ

ಕೇವಲ ಆಪ್ತರ ಸಮ್ಮುಖದಲ್ಲಿ ಅನಿರುದ್ಧ್ ರವಿಚಂದರ್ ಮತ್ತು ಕಾವ್ಯಾ ಮಾರನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನವೆಂಬರ್ 11ರಂದು ಗ್ರೀಸ್‌ನಲ್ಲಿ ವಿವಾಹ ನೆರವೇರಿತು. ಮದುವೆ ಬಳಿಕ ಅವರು ಈಗ ಚೆನ್ನೈಗೆ ಮರಳಿದ್ದಾರೆ. ಅವರಿಗೆ ಅದ್ದೂರಿಯಾಗಿ ಸ್ವಾಗತ ಕೋರಲಾಗಿದೆ. ನವೆಂಬರ್ 21ರಂದು ಚೆನ್ನೈನಲ್ಲಿ ಆರತಕ್ಷತೆ ನಡೆಯಲಿದೆ.

ವಿವಾಹದ ಬಳಿಕ ಚೆನ್ನೈಗೆ ಮರಳಿದ ಅನಿರುದ್ಧ್ ರವಿಚಂದರ್, ಕಾವ್ಯಾ ಮಾರನ್; ನ.21ಕ್ಕೆ ಆರತಕ್ಷತೆ
Anirudh Ravichander, Kavya Maran
ಮದನ್​ ಕುಮಾರ್​
|

Updated on: Nov 15, 2026 | 8:44 AM

Share

ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಹ-ಮಾಲಕಿ ಕಾವ್ಯಾ ಮಾರನ್ ಅವರು ಗ್ರೀಸ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಇದೀಗ ತವರಿಗೆ ಮರಳಿದ್ದಾರೆ. ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನವದಂಪತಿ ಬಂದಿಳಿಯುತ್ತಿದ್ದಂತೆ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ನವೆಂಬರ್ 11ರಂದು ಗ್ರೀಸ್‌ನಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಅನಿರುದ್ಧ್ ಮತ್ತು ಕಾವ್ಯಾ ಸರಳ ಹಾಗೂ ಸುಂದರವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು..

ಈ ವಿವಾಹ ಸಮಾರಂಭದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಹಲವು ಗಣ್ಯರು ಹಾಗೂ ಚಿತ್ರರಂಗದ ತಾರೆಯರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದ್ದರು. ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ವಧು-ವರರ ಪೋಷಕರಾದ ಸನ್ ಗ್ರೂಪ್ ಅಧ್ಯಕ್ಷ ಕಲಾನಿಧಿ ಮಾರನ್, ಕಾವೇರಿ ಮಾರನ್, ರವಿ ರಾಘವೇಂದ್ರ ಹಾಗೂ ಲಕ್ಷ್ಮಿ ರವಿಚಂದರ್ ಅವರು ಸಂಭ್ರಮದಲ್ಲಿ ಪಾಲ್ಗೊಂಡಿರುವುದು ಕಂಡುಬಂದಿದೆ.

ವಿವಾಹದ ಬಳಿಕ ಅನಿರುದ್ಧ್ ರವಿಚಂದರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪತ್ನಿ ಕಾವ್ಯಾ ಅವರೊಂದಿಗಿನ ಮೊದಲ ಫೋಟೋ ಹಂಚಿಕೊಂಡು, ‘ನನ್ನ ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಅಪೂರ್ವ ಕ್ಷಣ, ಜೀವನಪರ್ಯಂತಕ್ಕಾಗಿ 11.11’ ಎಂದು ಪ್ರೀತಿಯ ಸಾಲುಗಳನ್ನು ಬರೆದುಕೊಂಡಿದ್ದರು. ಮದುವೆಯ ವಿಶೇಷ ದಿನದಂದು ಈ ಜೋಡಿಯು ಖ್ಯಾತ ವಸ್ತ್ರವಿನ್ಯಾಸಕ ತರುಣ್ ತಹಿಲಿಯಾನಿ ವಿನ್ಯಾಸಗೊಳಿಸಿದ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದರು.

ಗ್ರೀಸ್‌ನಲ್ಲಿ ಮದುವೆ ಮುಗಿಸಿ ಚೆನ್ನೈಗೆ ವಾಪಸಾಗಿರುವ ಈ ಜೋಡಿಯ ವಿವಾಹ ಸಂಭ್ರಮ ಇನ್ನೂ ಮುಗಿದಿಲ್ಲ. ಎರಡೂ ಕುಟುಂಬಗಳು ನವೆಂಬರ್ 21ರಂದು ಚೆನ್ನೈನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಿವೆ. ಈ ಸಮಾರಂಭಕ್ಕೆ ಚಿತ್ರರಂಗ, ಕ್ರೀಡಾ ಲೋಕ ಮತ್ತು ರಾಜಕೀಯ ಕ್ಷೇತ್ರದ ಹಲವು ಗಣ್ಯರು ಆಗಮಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: ಪುರೋಹಿತರಿಲ್ಲದೆ ಮದುವೆಯಾದ ಅನಿರುದ್ಧ್ – ಕಾವ್ಯಾ; ಏನಿದು ಸ್ವಾಭಿಮಾನಿ ವಿವಾಹ?

ಭಾರತೀಯ ಚಿತ್ರರಂಗದ ಅತ್ಯಂತ ಬೇಡಿಕೆಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿರುವ ಅನಿರುದ್ಧ್ ಅವರು 2012ರಲ್ಲಿ ‘3’ ಚಿತ್ರದ ‘ವೈ ದಿಸ್ ಕೊಲವೆರಿ ಡಿ’ ಹಾಡಿನ ಮೂಲಕ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದ್ದರು. ಇತ್ತೀಚಿನ ದಿನಗಳಲ್ಲಿ ‘ಜವಾನ್’, ‘ಲಿಯೋ’, ‘ಜೈಲರ್’, ‘ವಿಕ್ರಮ್’, ‘ಕೂಲಿ’, ‘ಡಿಸಿ’ ಮುಂತಾದ ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More