
ತೆಲುಗು-ತಮಿಳು ಚಿತ್ರರಂಗದಲ್ಲಿ ಸುಮಾರು ದಶಕದ ಕಾಲ ನಂಬರ್ 1 ಆಗಿ ಮೆರೆದ ಅನುಷ್ಕಾ ಶೆಟ್ಟಿ (Anushka Shetty) ‘ಬಾಹುಬಲಿ’ ಸಿನಿಮಾದ ಬಳಿಕ ಚಿತ್ರರಂಗದಿಂದ ನಿಧಾನಕ್ಕೆ ದೂರಾದರು. 2018ರ ಬಳಿಕ ಅನುಷ್ಕಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದು ಕೇವಲ ಎರಡೇ ಸಿನಿಮಾಗಳಲ್ಲಿ. ಆದರೆ ಇದೀಗ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗುತ್ತಿರುವ ಅನುಷ್ಕಾ ಶೆಟ್ಟಿ ಇದೀಗ ‘ಘಾಟಿ’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಅವರದ್ದು ಬಲು ಪವರ್ಫುಲ್ ಪಾತ್ರ. ಸಿನಿಮಾದ ಟೀಸರ್ ಈ ಮೊದಲು ಬಿಡುಗಡೆ ಆಗಿ ಸಾಕಷ್ಟು ಕುತೂಹಲ ಕೆರಳಿಸಿತ್ತು. ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಸಿನಿಮಾದ ಕತೆಯ ಬಗ್ಗೆ ಪ್ರೇಕ್ಷಕರಿಗೆ ಸುಳಿವು ನೀಡಿದೆ.
‘ಘಾಟಿ’ ಸಿನಿಮಾ ಒಂದು ಸಮುದಾಯದವರ ಕತೆ. ಬ್ರಿಟೀಷರ ಕಾಲದಲ್ಲಿ ಬೆಟ್ಟಗಳನ್ನು ಒಡೆದು ರಸ್ತೆಗಳನ್ನು ಮಾಡಿದವರು ಈಗ ಗಾಂಜಾ ಸ್ಮಗ್ಲಿಂಗ್ ಮಾಡುತ್ತಿದ್ದಾರೆ. ಅವರನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ ಮಾಫಿಯಾ ಡಾನ್ಗಳು. ಅದೇ ಸಮುದಾಯದ ಅನುಷ್ಕಾ ಶೆಟ್ಟಿ ಹೇಗೆ ಮಾಫಿಯಾಗಳ ವಿರುದ್ಧ ತಿರುಗಿ ತನ್ನವರನ್ನು ಕಾಪಾಡಿಕೊಳ್ಳುತ್ತಾಳೆ ಎಂಬುದು ಸಿನಿಮಾದ ಕತೆ ಎಂದು ಟ್ರೈಲರ್ ಸೂಚ್ಯವಾಗಿ ಹೇಳುತ್ತಿದೆ.
ಈಗ ಬಿಡುಗಡೆ ಆಗಿರುವ ಟ್ರೈಲರ್ ಪ್ರಕಾರ, ಸಿನಿಮಾದಲ್ಲಿ ಅದ್ಭುತ ಆಕ್ಷನ್ ದೃಶ್ಯಗಳ ಜೊತೆಗೆ ಒಂದು ಪ್ರೇಮಕತೆಯೂ ಇದೆ. ಅನುಷ್ಕಾ ಶೆಟ್ಟಿ ಗಾಂಜಾ ಸಾಗಾಟ ಮಾಡುವ ಮಹಿಳೆಯ ಜೊತೆಗೆ ಬಸ್ ಕಂಡಕ್ಟರ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಅವರು ಎರಡು ಶೇಡ್ನ ಪಾತ್ರ. ಸಾಕಷ್ಟು ಆಕ್ಷನ್ ದೃಶ್ಯಗಳು ಸಹ ಟ್ರೈಲರ್ನಲ್ಲಿದ್ದು ಖುದ್ದು ಅನುಷ್ಕಾ ಶೆಟ್ಟಿ ವಿವಿಧ ಆಯುಧಗಳನ್ನು ಕೈಯಲ್ಲಿ ಹಿಡಿದು ಶತ್ರುಗಳ ಧ್ವಂಸ ಮಾಡುತ್ತಿದ್ದಾರೆ. ಬೈಕ್ ಚೇಸ್ ಸಹ ಮಾಡಿದ್ದಾರೆ ಅನುಷ್ಕಾ.
ಇದನ್ನೂ ಓದಿ:ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾರನ್ನೇ ಮರೆತರೆ ರಾಜಮೌಳಿ
‘ಘಾಟಿ’ ಸಿನಿಮಾವನ್ನು ಕ್ರಿಶ್ ನಿರ್ದೇಶನ ಮಾಡಿದ್ದಾರೆ. ತೆಲುಗಿನ ಕ್ಲಾಸಿಕ್ ಸಿನಿಮಾಗಳು ಎನಿಸಿಕೊಂಡಿರುವ ‘ಗಮ್ಯಂ’, ‘ವೇದಂ’ ಸಿನಿಮಾಗಳ ಜೊತೆಗೆ ‘ಕೃಷ್ಣಂ ವಂದೇ ಜಗದ್ಗುರು’, ‘ಎನ್ಟಿಆರ್:ಕಥಾನಾಯಕುಡು’, ‘ಗೌತಮಿಪುತ್ರ ಶಾತಕರ್ಣಿ’, ಕಂಗನಾ ನಟಿಸಿರುವ ‘ಮಣಿಕರ್ಣಿಕಾ’ ಇನ್ನೂ ಕೆಲ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ‘ಹರಿ ಹರ ವೀರ ಮಲ್ಲು’ ಸಿನಿಮಾವನ್ನು ಪ್ರಾರಂಭ ಮಾಡಿದ್ದು ಇದೇ ಕ್ರಿಶ್ ಆ ನಂತರ ಅದನ್ನು ಬೇರೆ ನಿರ್ದೇಶಕರು ಪೂರ್ಣಗೊಳಿಸಿದರು.
‘ಘಾಟಿ’ ಸಿನಿಮಾನಲ್ಲಿ ಅನುಷ್ಕಾ ಶೆಟ್ಟಿ ಜೊತೆಗೆ ವಿಕ್ರಂ ಕೃಷ್ಣ, ರಮ್ಯಾ ಕೃಷ್ಣ, ಜಗಪತಿ ಬಾಬು ಇನ್ನೂ ಕೆಲವು ಪ್ರತಿಭಾವಂತ ನಟರು ನಟಿಸಿದ್ದಾರೆ. ಸಿನಿಮಾ ಸೆಪ್ಟೆಂಬರ್ 05 ರಂದು ಬಿಡುಗಡೆ ಆಗಲಿದೆ. ಅಸಲಿಗೆ ಈ ಸಿನಿಮಾ ಏಪ್ರಿಲ್ ತಿಂಗಳಲ್ಲೇ ಬಿಡುಗಡೆ ಆಗಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಸಿನಿಮಾದ ಬಿಡುಗಡೆ ಸಾಕಷ್ಟು ತಡವಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ