ಮಹಾಕುಂಭ ಮೇಳದಲ್ಲಿ ಶುರುವಾಯ್ತು, ಬಾಲಕೃಷ್ಣರ ಪವರ್ಫುಲ್ ಸಿನಿಮಾ ಶೂಟಿಂಗ್144 ವರ್ಷಗಳಲ್ಲಿ ಒಮ್ಮೆ ಮಾತ್ರ ನಡೆಯುವ ಮಹಾಕುಂಭ ಮೇಳ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿದೆ. ಈ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳಲು ವಿಶ್ವದಾದ್ಯಂತದಿಂದ ಭಕ್ತಾಧಿಗಳು ಆಗಮಿಸಿದ್ದರು. ಕೋಟ್ಯಂತರ ಜನ ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಾಧುಗಳು, ಸಂತರು, ಅಘೋರಿಗಳು, ನಾಗಾ ಸಾಧುಗಳು ಅನೇಕಾನೇಕರು ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾರೆ. ಈ ಅಪರೂಪದ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಹಲವು ಅಂತರಾಷ್ಟ್ರೀಯ ಮಾಧ್ಯಮಗಳು, ದೇಸೀಯ ಮಾಧ್ಯಮಗಳು ಧಾವಿಸಿವೆ. ಕೆಲವರು ಡಾಕ್ಯುಮೆಂಟರಿ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ತೆಲುಗಿನ ಸ್ಟಾರ್ ನಟ ಬಾಲಕೃಷ್ಣ ಅವರ ಪವರ್ಫುಲ್ ಸಿನಿಮಾ ಒಂದರ ಚಿತ್ರೀಕರಣ ಇದೇ ಮಹಾಕುಂಭ ಮೇಳದಲ್ಲಿ ಪ್ರಾರಂಭ ಆಗಿದೆ.
ಬಾಲಕೃಷ್ಣ ನಟನೆಯ ‘ಅಖಂಡ’ ಸಿನಿಮಾ 2021 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ಬಾಲಕೃಷ್ಣ ಶಕ್ತಿಶಾಲಿ ಅಘೋರಿಯ ಪಾತ್ರದಲ್ಲಿ ನಟಿಸಿದ್ದರು. ಅಘೋರಿಯ ಪಾತ್ರದಲ್ಲಿ ಸಖತ್ ಆಗಿ ಮಿಂಚಿದ್ದರು ಬಾಲಕೃಷ್ಣ. ಇದೀಗ ಅದೇ ಸಿನಿಮಾದ ಎರಡನೇ ಭಾಗ ತೆರೆಗೆ ಬರಲು ಸಿದ್ಧವಾಗಿದ್ದು, ಸಿನಿಮಾದ ಚಿತ್ರೀಕರಣವನ್ನು ಮಹಾಕುಂಭ ಮೇಳದಲ್ಲಿ ಪ್ರಾರಂಭ ಮಾಡಲಾಗಿದೆ.
ಕುಂಭ ಮೇಳಕ್ಕೆ ಆಗಮಿಸಿರುವ ನಿಜ ಅಘೋರಿಗಳ ದೃಶ್ಯಗಳನ್ನು, ಅಲ್ಲಿ ನಡೆಯುತ್ತಿರುವ ಆಚರಣೆಗಳ ದೃಶ್ಯಗಳನ್ನು ಚಿತ್ರೀಕರೀಸಿಕೊಳ್ಳಲಾಗುತ್ತಿದೆ. ಸಿನಿಮಾದ ಕತೆಯ ಕೆಲವು ದೃಶ್ಯಗಳು ಕುಂಭ ಮೇಳದಲ್ಲಿ ನಡೆಯಲಿವೆಯಂತೆ. ಹಾಗಾಗಿ ಮಹಾಕುಂಭ ಮೇಳದ ದೃಶ್ಯಗಳನ್ನು ಚಿತ್ರೀಕರಣ ಮಾಡಿಕೊಳ್ಳಲಾಗುತ್ತಿದೆ. ಆ ನಂತರ ಕತೆಗೆ ಅಗತ್ಯವಾದ ಕಡೆಗಳಲ್ಲಿ ಈ ದೃಶ್ಯಗಳನ್ನು ಬಳಸಿಕೊಳ್ಳಲಾಗುತ್ತದೆ. ಮಹಾಕುಂಭ ಮೇಳದ ಚಿತ್ರೀಕರಣಕ್ಕೆ ಬಾಲಕೃಷ್ಣ ಹೋಗಿಲ್ಲ. ಆದರೆ ಚಿತ್ರತಂಡ ಹೋಗಿ ಅಲ್ಲಿಯೇ ಇದ್ದು ಚಿತ್ರೀಕರಣ ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ:ನಂದಮೂರಿ ಬಾಲಕೃಷ್ಣಗೆ ಇಲ್ಲ ಸಚಿವ ಸ್ಥಾನ, ಅಭಿಮಾನಿಗಳ ಬೇಸರ
‘ಅಖಂಡ’ ಸಿನಿಮಾ ನಿರ್ದೇಶನ ಮಾಡಿದ್ದ ಬೊಯಪಾಟಿ ಶ್ರೀನು ಅವರೇ ‘ಅಖಂಡ 2’ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ‘ಅಖಂಡ 2’ ಸಿನಿಮಾದಲ್ಲಿಯೂ ಬಾಲಕೃಷ್ಣ ದ್ವಿಪಾತ್ರದಲ್ಲಿ ನಟಿಸಲಿದ್ದಾರಂತೆ. ಕಳೆದ ಬಾರಿಗಿಂತಲೂ ಹೆಚ್ಚಿನ ಆಕ್ಷನ್ ಈ ಸಿನಿಮಾದಲ್ಲಿ ಇರಲಿದೆ ಎನ್ನಲಾಗುತ್ತಿದೆ. ಬಾಲಕೃಷ್ಣ ಅವರನ್ನು ಭಾರಿ ಅದ್ಧೂರಿಯಾಗಿ, ಮಹಾ ಅಘೋರಿಯ ರೂಪದಲ್ಲಿ ತೋರಿಸಲು ತಯಾರಾಗಿದ್ದಾರಂತೆ ಬೊಯಪಾಟಿ ಶ್ರೀನು.
ಬೊಯಪಾಟಿ ಶ್ರೀನು ಹಾಗೂ ಬಾಲಕೃಷ್ಣ ಕಾಂಬಿನೇಷನ್ನ ನಾಲ್ಕನೇ ಸಿನಿಮಾ ಇದಾಗಿದೆ. ಈ ಹಿಂದೆ ಬಂದಿದ್ದ ‘ಸಿಂಹ’, ‘ಲಿಜೆಂಡ್’ ಹಾಗೂ 2021 ರಲ್ಲಿ ಬಿಡುಗಡೆ ಆಗಿದ್ದ ‘ಅಖಂಡ’ ಸಿನಿಮಾಗಳು ಭಾರಿ ಯಶಸ್ಸುಗಳಿಸಿವೆ. ಇದೀಗ ‘ಅಖಂಡ 2’ ನಿರ್ದೇಶನದಲ್ಲಿ ಬೊಯಪಾಟಿ ತೊಡಗಿದ್ದಾರೆ. ಈ ಸಿನಿಮಾದ ಬಳಿಕ ಮೆಗಾಸ್ಟಾರ್ ಚಿರಂಜೀವಿಗಾಗಿ ಒಂದು ಪಕ್ಕಾ ಆಕ್ಷನ್ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಬೊಯಪಾಟಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ