ಪ್ರಭಾಸ್-ರಾಜಮೌಳಿ, ಬಾಲಕೃಷ್ಣ-ಬೊಯಪಾಟಿ ಶ್ರೀನು, ಪವನ್ ಕಲ್ಯಾಣ್-ತ್ರಿವಿಕ್ರಮ್ ಹೀಗೆ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಿರ್ದೇಶಕ-ನಟರ ಜೋಡಿಯ ಸಾಲಿನಲ್ಲಿ ಮೊದಲಿಗೆ ನಿಲ್ಲುವುದು ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಅವರ ಜೋಡಿ. ಅಲ್ಲು ಅರ್ಜುನ್ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ನೆಲೆ ನಿಲ್ಲಲು ಮೂಲ ಕಾರಣ ಸುಕುಮಾರ್. ‘ಆರ್ಯ’ ಸಿನಿಮಾ ಅಲ್ಲು ಅರ್ಜುನ್ ಅನ್ನು ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಆಗುವಂತೆ ಮಾಡಿತು. ಆ ಸಿನಿಮಾ ನಿರ್ದೇಶಿಸಿದ್ದು ಸುಕುಮಾರ್. ಆದರೆ ‘ಆರ್ಯ’ ಸಿನಿಮಾದ ಬಳಿಕ ಅಲ್ಲು ಅರ್ಜುನ್ ಹಾಗೂ ಸುಕುಮಾರ್ ನಡುವೆ ಮುನಿಸು ಏರ್ಪಟ್ಟಿತ್ತಂತೆ.
‘ಆರ್ಯ’ ಸಿನಿಮಾ ಭಾರಿ ದೊಡ್ಡ ಯಶಸ್ಸು ಕಂಡ ಸಿನಿಮಾ. ಆಗಿನ ಕಾಲಕ್ಕೆ ಚಿರಂಜೀವಿ, ಬಾಲಕೃಷ್ಣ, ಜೂ ಎನ್ಟಿಆರ್ ಅವರ ಸಿನಿಮಾಗಳನ್ನು ಸಹ ಹಿಂದಿಕ್ಕಿ ಭಾರಿ ಯಶಸ್ಸುಗಳಿಸಿತ್ತು. ಈಗದು ತೆಲುಗಿನ ಕಲ್ಟ್ ಸಿನಿಮಾ. ‘ಗಂಗೊತ್ರಿ’ ಸಿನಿಮಾ ಮೂಲಕ ಅಲ್ಲು ಅರ್ಜುನ್ ಗೆದ್ದಿದ್ದರಾದರೂ ನಾಯಕನಾಗಿ ಅವರಿಗೆ ಯಾವುದೇ ಗುರುತು ಇರಲಿಲ್ಲ. ಆ ಗುರುತು ತಂದುಕೊಟ್ಟ ಸಿನಿಮಾ ‘ಆರ್ಯ’. ಸುಕುಮಾರ್ಗೆ ‘ಆರ್ಯ’ ಮೊದಲ ಸಿನಿಮಾ ಆಗಿತ್ತು. ಆ ಸಿನಿಮಾ ಭಾರಿ ಯಶಸ್ಸು ಗಳಿಸಿದ ನಂತರ ಅಲ್ಲು ಅರ್ಜುನ್ ಹಾಗೂ ಸುಕುಮಾರ್ ನಡುವೆ ದೊಡ್ಡ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು.
‘ಆರ್ಯ’ ಸಿನಿಮಾದ ಬಳಿಕ ಸುಕುಮಾರ್, ‘ಜಗಡಂ’ ಹೆಸರಿನ ಸಿನಿಮಾ ಮಾಡಲು ಮುಂದಾದರು. ಅಲ್ಲು ಅರ್ಜುನ್ ಅವರೇ ‘ಜಗಡಂ’ ಸಿನಿಮಾಕ್ಕೂ ನಾಯಕನಾಗಬೇಕು ಎಂಬುದು ಸುಕುಮಾರ್ ಆಸೆಯಾಗಿತ್ತು. ಆದರೆ ಅಲ್ಲು ಅರ್ಜುನ್ಗೆ ‘ಜಗಡಂ’ ಸಿನಿಮಾದ ಕತೆ ಇಷ್ಟವಾಗಲಿಲ್ಲ. ಕತೆಯನ್ನು ಬದಲಾವಣೆ ಮಾಡುವಂತೆ ಸೂಚಿಸಿದರು. ಇದು ಸುಕುಮಾರ್ಗೆ ಇಷ್ಟವಾಗಲಿಲ್ಲ. ‘ನಟಿಸುವುದಿದ್ದರೆ ನಟಿಸು ಇಲ್ಲವಾದರೆ ನಾನು ಬೇರೊಬ್ಬರನ್ನು ಹಾಕಿಕೊಳ್ಳುತ್ತೇನೆ’ ಎಂದರು. ‘ಆರ್ಯ’ ಸಿನಿಮಾ ನಿರ್ಮಾಣ ಮಾಡಿದ್ದ ದಿಲ್ ರಾಜು ಸಹ ‘ಜಗಡಂ’ ಸಿನಿಮಾವನ್ನು ನಿರ್ಮಿಸುವುದಿಲ್ಲ ಎಂದುಬಿಟ್ಟರು.
ಇದನ್ನೂ ಓದಿ:ಪ್ರತಿ ಭಾನುವಾರ ಪೊಲೀಸ್ ಠಾಣೆಗೆ ಹಾಜರಿ: ಅಲ್ಲು ಅರ್ಜುನ್ಗೆ ವಿನಾಯಿತಿ
ಇದು ಸುಕುಮಾರ್ಗೆ ಇನ್ನಷ್ಟು ಸಿಟ್ಟು ತರಿಸಿತು. ಕೂಡಲೇ ಸುಕುಮಾರ್, ಆಗಷ್ಟೆ ‘ದೇವದಾಸು’ ಸಿನಿಮಾ ಮೂಲಕ ಸೂಪರ್ ಹಿಟ್ ಸಿನಿಮಾ ನೀಡಿದ್ದ ನಟ ರಾಮ್ ಪೋತಿನೇನಿಯನ್ನು ಹಾಕಿಕೊಂಡು ‘ಜಗಡಂ’ ಸಿನಿಮಾ ಮಾಡಿದರು. ಸಿನಿಮಾ ಮಾಡುವ ಸಮಯದಲ್ಲಿ ಅಲ್ಲು ಅರ್ಜುನ್ ಹಾಗೂ ಸುಕುಮಾರ್ ನಡುವೆ ಸ್ನೇಹ ಹಳಸಿತ್ತು. ಆದರೆ ನಿರ್ಮಾಪಕ ದಿಲ್ ರಾಜು, ಇಬ್ಬರ ಮಧ್ಯೆ ಸಂಧಾನಕಾರನಾಗಿ ಕೆಲಸ ಮಾಡಿ ಮತ್ತೆ ಗೆಳೆತನ ಮುಂದುವರೆಯುವಂತೆ ಮಾಡಿದರು. ‘ಜಗಡಂ’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಅಲ್ಲು ಅರ್ಜುನ್ ಅವರೇ ಅತಿಥಿಯಾಗಿ ಹೋಗಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ದಿಲ್ ರಾಜು ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು.
‘ಜಗಡಂ’ ಸಿನಿಮಾ ಏನೋ ಚೆನ್ನಾಗಿತ್ತು. ಒಳ್ಳೆಯ ಸಂದೇಶವೂ ಇತ್ತು, ಆದರೆ ಸಿನಿಮಾ ದೊಡ್ಡ ಯಶಸ್ಸನ್ನು ಆ ಸಿನಿಮಾ ಗಳಿಸಲಿಲ್ಲ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಸ್ವತಃ ದಿಲ್ ರಾಜು ಹೇಳಿಕೊಂಡರು. ಒಂದೊಮ್ಮೆ ಆಗ ಸುಕುಮಾರ್ ಹಾಗೂ ಅಲ್ಲು ಅರ್ಜುನ್ ನಡುವೆ ಸಂಧಾನ ಮಾಡದೇ ಇದ್ದಿದ್ದರೆ ಇಂದು ‘ಪುಷ್ಪ’ ಸಿನಿಮಾ ಆಗುತ್ತಿರಲಿಲ್ಲ ಎಂದಿದ್ದಾರೆ ದಿಲ್ ರಾಜು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ