ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾದ ಬಿಡುಗಡೆ ಮುಂದೂಡಲಾಗಿರುವ ಸುದ್ದಿ ಕೆಲವು ದಿನಗಳ ಹಿಂದಷ್ಟೆ ಹೊರಬಿತ್ತು. ಇದು ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿತ್ತು. ಆದರೆ ತಾವು ಸಂಕ್ರಾಂತಿಗೆ ಒಳ್ಳೆಯ ಅಪ್ಡೇಟ್ ನೀಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಪ್ರಭಾಸ್ ಅಭಿಮಾನಿಗಳು ಸಹ ಇದಕ್ಕಾಗಿ ಕಾಯುತ್ತಿದ್ದರು. ಕೊಟ್ಟ ಮಾತಿನಂತೆ ಸಂಕ್ರಾಂತಿಗೆ ಸಿನಿಮಾದ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆಯಾದರೂ ಇದು ಅಭಿಮಾನಿಗಳಿಗೆ ನಿರಾಸೆಯನ್ನೇ ಮೂಡಿಸಿದೆ.
‘ದಿ ರಾಜಾ ಸಾಬ್’ ಪೋಸ್ಟರ್ ಹೆಸರಲ್ಲಿ ಪ್ರಭಾಸ್ರ ಒಂದು ಫೋಟೊ ಅನ್ನಷ್ಟೆ ನೀಡಲಾಗಿದೆ. ಪೋಸ್ಟರ್ ನಲ್ಲಿ ಯಾವುದೇ ವಿಶೇಷತೆ ಇಲ್ಲ. ಪ್ರಭಾಸ್ ನಗುತ್ತಿರುವ ಒಂದು ಪೋಟ್ರೆಟ್ ಮಾದರಿಯ ಫೋಟೊ ಇದಾಗಿದೆ. ಪ್ರಭಾಸ್ ಅಭಿಮಾನಿಗಳು ಇನ್ನೂ ವಿಶೇಷವಾದುದು ಏನನ್ನೋ ನಿರೀಕ್ಷಿಸುತ್ತಿದ್ದರು. ಆದರೆ ಈಗ ಬಿಡುಗಡೆ ಮಾಡಲಾಗಿರುವ ಪೋಸ್ಟರ್ ಪ್ರಭಾಸ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಇದನ್ನೂ ಓದಿ:ಪ್ರಭಾಸ್ ಅಭಿಮಾನಿಗಳಿಗೆ ನಿರಾಸೆ, ‘ರಾಜಾ ಸಾಬ್’ ಬಿಡುಗಡೆ ಮುಂದೂಡಿಕೆ
ಪೋಸ್ಟರ್ ನೋಡಿದ ಕೆಲವರು ‘ಕೂಲ್ ಲುಕ್’ ಎಂದು ಕಮೆಂಟ್ ಮಾಡಿದ್ದರೆ, ಅಪ್ಡೇಟ್ ಕೊಡಿ, ಪೋಸ್ಟರ್ ರಿಲೀಸ್ ಮಾಡಿ ಎಂದರೆ ಬರೀ ಪಾಸ್ಪೋರ್ಟ್ ಸೈಜ್ ಫೋಟೊ ರಿಲೀಸ್ ಮಾಡಿದ್ದೀರಿ ಎಂದು ಕೆಲವರು ಟೀಕಿಸಿದ್ದಾರೆ. ಇನ್ನು ಕೆಲವರು, ಈ ಪೋಸ್ಟರ್ನಲ್ಲಿ ಪ್ರಭಾಸ್, ಅಕ್ಕಿನೇನಿ ನಾಗಾರ್ಜುನ ರೀತಿ ಕಾಣುತ್ತಿದ್ದಾರೆ ಎಂದು ಟೀಕೆ ಮಾಡಿದ್ದಾರೆ. ಪೋಸ್ಟರ್ ಮೂಲಕ ಎಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳನ್ನು ಚಿತ್ರತಂಡ ಕೋರಿದೆ.
‘ದಿ ರಾಜಾ ಸಾಬ್’ ಪ್ರಭಾಸ್ ನಟಿಸುತ್ತಿರುವ ಮೊದಲ ಹಾರರ್ ಕಾಮಿಡಿ ಸಿನಿಮಾ ಆಗಿದೆ. ಸಿನಿಮಾದಲ್ಲಿ ಪ್ರಭಾಸ್ ದೆವ್ವವಾಗಿ ನಟಿಸುತ್ತಿದ್ದಾರಂತೆ. ಸಿನಿಮಾದಲ್ಲಿ ಹಾರರ್ ಜೊತೆಗೆ ರೊಮ್ಯಾಂಟಿಕ್ ಲವ್ ಸ್ಟೋರಿ ಹಾಗೂ ಭರಪೂರ ಹಾಸ್ಯ ದೃಶ್ಯಗಳು ಸಹ ಇರಲಿವೆಯಂತೆ. ಸಿನಿಮಾವನ್ನು ಮಾರುತಿ ನಿರ್ದೇಶನ ಮಾಡುತ್ತಿದ್ದಾರೆ. ನಾಯಕಿಯಾಗಿ ಮಾಳವಿಕಾ ಮೋಹನನ್ ನಟಿಸುತ್ತಿದ್ದಾರೆ. ಸಿನಿಮಾ ಏಪ್ರಿಲ್ನಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಬಿಡುಗಡೆ ಮತ್ತೆ ಮುಂದೂಡಲ್ಪಟ್ಟಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:32 am, Tue, 14 January 25