
ಆಮಿರ್ ಖಾನ್ (Aamir Khan) ಬಹಳ ಪ್ರೀತಿಯಿಂದ, ನಿರೀಕ್ಷೆಯಿಂದ ನಿರ್ಮಾಣ ಮಾಡಿದ್ದ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಫ್ಲಾಪ್ ಆಗಿದೆ. ಇದೀಗ ‘ಸಿತಾರೆ ಜಮೀನ್ ಪರ್’ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ವಿಶೇಷ ಚೇತನ ವ್ಯಕ್ತಿಗಳ ಬಾಸ್ಕೆಟ್ ಬಾಲ್ ತಂಡದ ಕೋಚ್ ಪಾತ್ರ ಆಮಿರ್ ಖಾನ್ ಅವರದ್ದು. ಈ ಸಿನಿಮಾದ ಬಳಿಕ ಭಾರಿ ದೊಡ್ಡ ಸಿನಿಮಾ ಒಂದನ್ನು ಆಮಿರ್ ಖಾನ್ ಮಾಡಲಿದ್ದಾರೆ. ಇದೇ ಮೊದಲ ಬಾರಿಗೆ ಅವರು ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.
ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶನದ ಸಿನಿಮಾನಲ್ಲಿ ಆಮಿರ್ ಖಾನ್ ನಟಿಸಲಿದ್ದಾರೆ. ತಮಿಳಿನ ಸ್ಟಾರ್ ನಟ ಸೂರ್ಯ ಅವರಿಗಾಗಿ ಲೋಕೇಶ್ ಮಾಡಿಕೊಂಡಿದ್ದ ‘ಇರುಂಬು ಕೈ ಮಾಯಾವಿ’ ಕತೆಯನ್ನೇ ಈಗ ಅವರು ಆಮಿರ್ ಖಾನ್ ಅವರಿಗಾಗಿ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಲೋಕೇಶ್ ಅವರಿಗೂ ಇದು ಮೊದಲ ಬಾಲಿವುಡ್ ಸಿನಿಮಾ.
‘ಇರುಂಬು ಕೈ ಮಾಯಾವಿ’ ಸಿನಿಮಾದ ಘೋಷಣೆ ಕೆಲ ವರ್ಷಗಳ ಹಿಂದೆಯೇ ಲೋಕೇಶ್ ಮಾಡಿದ್ದರು. ಆದರೆ ಆ ಸಿನಿಮಾ ಸೆಟ್ಟೇರಿರಲಿಲ್ಲ. ಈಗ ಆಮಿರ್ ಖಾನ್ ಅವರು ಆ ಸಿನಿಮಾದಲ್ಲಿ ನಟಿಸಲಿದ್ದಾರೆ. ಸಿನಿಮಾ ಬಗ್ಗೆ ಮಾತನಾಡಿರುವ ಆಮಿರ್ ಖಾನ್, ‘ಭಾರಿ ದೊಡ್ಡ ಬಜೆಟ್ನ ಸೂಪರ್ ಹೀರೋ ಮಾದರಿಯ ಸಿನಿಮಾನಲ್ಲಿ ನಟಿಸಲಿದ್ದೇನೆ. ಸಿನಿಮಾದ ಚಿತ್ರೀಕರಣ 2026ರ ಆಗಸ್ಟ್ ತಿಂಗಳಲ್ಲಿ ಪ್ರಾರಂಭ ಆಗಲಿದೆ’ ಎಂದಿದ್ದಾರೆ.
ಇದನ್ನೂ ಓದಿ:ಆಮಿರ್ ಖಾನ್ ಅನ್ನು ಒಂದೇ ದಿನದಲ್ಲಿ ಬಡವನನ್ನಾಗಿ ಮಾಡುವ ಶಕ್ತಿ ಆ ಒಬ್ಬ ವ್ಯಕ್ತಿಗಿದೆ
ಲೋಕೇಶ್ ಕನಗರಾಜ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಅವರು ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾನಲ್ಲಿ ಆಮಿರ್ ಖಾನ್ ಸಹ ನಟಿಸುತ್ತಿದ್ದಾರೆ. ಕನ್ನಡಿಗ ಉಪೇಂದ್ರ ಸಹ ಇದ್ದಾರೆ. ಈ ಸಿನಿಮಾದ ಚಿತ್ರೀಕರಣದ ವೇಳೆಯೇ ‘ಇರುಂಬು ಕೈ ಮಾಯಾವಿ’ ಕತೆಯನ್ನು ಲೋಕೇಶ್ ಅವರು ಆಮಿರ್ ಅವರಿಗೆ ಹೇಳಿದ್ದು, ಆಮಿರ್ ಸಹ ಬಹಳ ಆಸಕ್ತಿ ತೋರಿದ್ದಾರೆ.
‘ಕೂಲಿ’ ಸಿನಿಮಾದ ಬಳಿಕ ಲೋಕೇಶ್ ಕನಗರಾಜ್ ‘ಖೈದಿ 2’ ಸಿನಿಮಾ ನಿರ್ದೇಶನ ಮಾಡುವವರಿದ್ದಾರೆ. ಅದಾದ ಬಳಿಕ ‘ವಿಕ್ರಂ 2’ ಸಿನಿಮಾ ಸಹ ಮಾಡಲಿದ್ದಾರೆ. ಈ ಎರಡು ಸಿನಿಮಾಗಳ ಬಳಿಕವಷ್ಟೆ ‘ಇರುಂಬು ಕೈ ಮಾಯಾವಿ’ ಸಿನಿಮಾಕ್ಕೆ ಲೋಕೇಶ್ ಕೈ ಹಾಕಲಿದ್ದಾರೆ. ಇನ್ನು ಆಮಿರ್ ಖಾನ್ ‘ಸಿತಾರೆ ಜಮೀನ್ ಪರ್’ ಸಿನಿಮಾದ ಬಳಿಕ ಬೇರೊಂದು ಹಿಂದಿ ಸಿನಿಮಾನಲ್ಲಿ ನಟಿಸಲಿದ್ದು, ಅದರ ಬಳಿಕ ‘ಇರುಂಬು ಕೈ ಮಾಯಾವಿ’ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ