ಬಾಲಿವುಡ್ ಬೆಡಗಿ ಆಲಿಯಾ ಭಟ್ (Alia Bhatt) ಮತ್ತೆ ಟ್ರೋಲ್ಗೆ ಒಳಗಾಗಿದ್ದಾರೆ. ಈ ಬಾರಿ ನೆಟ್ಟಿಗರು ಆಲಿಯಾರ ಹಳೆಯ ವಿಡಿಯೋಗಳನ್ನು ಹಾಗೂ ಅವರ ಇತ್ತೀಚಿನ ಜಾಹಿರಾತುಗಳನ್ನು ಹೋಲಿಸಿ ನಟಿಗೆ ಡಬಲ್ ಸ್ಟಾಂಡರ್ಡ್ ಎಂದು ಟೀಕಿಸುತ್ತಿದ್ದಾರೆ. ಅಷ್ಟಕ್ಕೂ ಆಲಿಯಾ ಹೀಗೆ ಟೀಕೆಗೆ ಒಳಗಾಗಲು ಕಾರಣವೇನು ಎಂಬುದರ ಮಾಹಿತಿ ಇಲ್ಲಿದೆ. ಈ ಹಿಂದೆ ಆಲಿಯಾ ಕಪಿಲ್ ಶರ್ಮಾ ಶೋದಲ್ಲಿ ಭಾಗಿಯಾಗಿದ್ದಾಗ ಚಹಾವನ್ನು ನಿರಾಕರಿಸಿದ್ದರು. ಅದಕ್ಕೆ ಕಾರಣ ಅದರಲ್ಲಿ ಸಕ್ಕರೆ ಹಾಕಿದ್ದಾರೆ ಎಂಬುದಾಗಿತ್ತು. ಕಪ್ನಲ್ಲಿ ತಂದುಕೊಟ್ಟಿದ್ದ ಟೀಯನ್ನು ಕುಡಿದಿದ್ದ ಆಲಿಯಾ, ಒಂದು ಗುಟುಕು ಕುಡಿಯುತ್ತಲೇ ಇದಕ್ಕೆ ಶುಗರ್ ಹಾಕಿದ್ದಾರೆಯೇ ಎಂದು ಪ್ರಶ್ನಿಸಿದ್ದರು. ಜತೆಗೆ ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಿ ಪಾನೀಯವನ್ನು ಮರಳಿಸಿದ್ದರು. ಆಗ ಸೆಟ್ನಲ್ಲಿದ್ದ ಕಪಿಲ್ ಶರ್ಮಾ ಹಾಗೂ ಸಹನಟರು ಇಷ್ಟೆಲ್ಲಾ ದುಡಿಯುತ್ತೀರಿ, ಆದರೆ ಶುಗರ್ ತಿನ್ನುವುದಕ್ಕಾಗುವುದಿಲ್ಲವೇ ಎಂದು ಪ್ರಶ್ನಿಸಿದಾಗ, ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಆಲಿಯಾ ಅದರ ಬಗ್ಗೆ ಎಲ್ಲರಿಗೂ ತಿಳಿಹೇಳಿದ್ದರು. ಆದರೆ ಆಲಿಯಾ ಪ್ರಸ್ತುತ ಶುಗರ್ ಹೊಂದಿರುವ ಹಲವಾರು ಪಾನೀಯ ಹಾಗೂ ತಿನಿಸುಗಳ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ.
ಆಲಿಯಾರ ಹೇಳಿಕೆಯನ್ನು ಹಾಗೂ ಅವರ ಜಾಹಿರಾತುಗಳನ್ನು ಸೇರಿಸಿ ಟ್ವಿಟರ್ನಲ್ಲಿ ವಿಡಿಯೋಗಳನ್ನು ಹರಿಬಿಡಲಾಗಿದೆ. ಅದರಲ್ಲಿ ಮೊದಲಿಗೆ ಆಲಿಯಾ ಶುಗರ್ ಒಳ್ಳೆಯದಲ್ಲ ಎನ್ನುವುದನ್ನು ತೋರಿಸಲಾಗಿದೆ. ಮುಂದಿನ ವಿಡಿಯೋದಲ್ಲಿ ಐಸ್ಕ್ರೀಮ್, ಪಾನೀಯ, ಚಾಕಲೇಟ್ ಸೇರಿದಂತೆ ವಿವಿಧ ಪದಾರ್ಥಗಳನ್ನು ಮಾರುವ ಕಂಪನಿಗಳ ಜಾಹಿರಾತುಗಳಲ್ಲಿ ಆಲಿಯಾ ಕಾಣಿಸಿಕೊಂಡಿದ್ದಾರೆ. ಜತೆಗೆ ಜನರಿಗೆ ಅದನ್ನೇ ತಿನ್ನುವಂತೆ ಸಲಹೆ ನೀಡಿದ್ದಾರೆ. ಇದು ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ.
‘‘ಶುಗರ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ನೀವು ತಿನ್ನುವುದನ್ನು ಬಿಟ್ಟಿದ್ದೀರಿ, ಆದರೆ ಜನರಿಗೆ ಅಂತಹ ಪದಾರ್ಥಗಳನ್ನೇ ತಿನ್ನುವಂತೆ ಸಾಲು ಸಾಲು ಜಾಹಿರಾತು ನೀಡುತ್ತೀರಲ್ಲ, ಇದು ಡಬಲ್ ಸ್ಟಾಂಡರ್ಡ್ ಅಲ್ಲವೇ?’’ ಎಂದು ಟ್ವೀಟ್ ಮೂಲಕ ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ. ಆಲಿಯಾ ನಿಲುವು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದ್ದು, ಜನರನ್ನು ತಪ್ಪಿದಾರಿಗೆ ಏಕೆ ಎಳೆಯುತ್ತೀರಿ ಎಂದು ಹಲವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಆಲಿಯಾ ಕಪಿಲ್ ಶರ್ಮಾ ಶೋದಲ್ಲಿ ಮಾತನಾಡಿರುವ ಹಾಗೂ ಅವರ ಜಾಹಿರಾತುಗಳ ವಿಡಿಯೋ ಇಲ್ಲಿದೆ:
Why does @aliaa08 promote sugary products if sugar is unhealthy and she won’t have it herself? https://t.co/EwDY7YtZPy
— Gems of Bollywood (@GemsOfBollywood) May 8, 2022
ಅಂದಹಾಗೆ ಬಾಲಿವುಡ್ ತಾರೆಯರಿಗೆ ಜಾಹಿರಾತುಗಳ ವಿಚಾರವಾಗಿ ಟೀಕೆಗಳು ಬರುವುದು ಹೊಸದೇನಲ್ಲ. ಇತ್ತೀಚೆಗಂತೂ ಬಾಲಿವುಡ್ ಸ್ಟಾರ್ಗಳು ಪಾನ್ ಮಸಾಲಾ ಬ್ರಾಂಡ್ಗಳನ್ನು ಬೆಂಬಲಿಸುತ್ತಿರುವುದಕ್ಕೆ ದೊಡ್ಡ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ಅಭಿಮಾನಿಗಳ ಆಕ್ರೋಶದ ನಂತರ ಅಮಿತಾಭ್ ಬಚ್ಚನ್ ಹಾಗೂ ಅಕ್ಷಯ್ ಕುಮಾರ್ ಈ ಬ್ರಾಂಡ್ಗಳ ಜಾಹಿರಾತುಗಳಿಂದ ಹಿಂದೆ ಸರಿದಿದ್ದನ್ನು ಇಲ್ಲಿ ಸ್ಮರಿಸಬಹುದು.
ಚಿತ್ರಗಳ ವಿಷಯಕ್ಕೆ ಬಂದರೆ ಆಲಿಯಾ ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಆರ್ಆರ್ಆರ್’ ಚಿತ್ರದಲ್ಲಿ. ನಂತರ ರಣಬೀರ್ ಕಪೂರ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಆಲಿಯಾ, ‘ಬ್ರಹ್ಮಾಸ್ತ್ರ’ ಬಿಡುಗಡೆಗೆ ಕಾಯುತ್ತಿದ್ದಾರೆ. ‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಹಾಗೂ ಹಾಲಿವುಡ್ನ ‘ಹಾರ್ಟ್ ಆಫ್ ಸ್ಟೋನ್’ ಚಿತ್ರದಲ್ಲಿ ನಟಿ ಬಣ್ಣಹಚ್ಚುತ್ತಿದ್ದಾರೆ.
ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ