ಅಮಿತಾಭ್ ಬಚ್ಚನ್-ಮಾಧುರಿ ಒಟ್ಟಿಗೆ ಕೆಲಸ ಮಾಡದಿರಲು ಕಾರಣವಾದ ಆ ಹೀರೋ ಯಾರು?
ಬಾಲಿವುಡ್‌ನ ಮಹಾನ್ ತಾರೆಯರಾದ ಅಮಿತಾಭ್ ಬಚ್ಚನ್ ಮತ್ತು ಮಾಧುರಿ ದೀಕ್ಷಿತ್ ಅಪಾರ ಜನಪ್ರಿಯತೆ ಗಳಿಸಿದ್ದರೂ, ಇವರಿಬ್ಬರೂ ಪ್ರಮುಖ ಪಾತ್ರಗಳಲ್ಲಿ ಒಟ್ಟಿಗೆ ನಟಿಸಿಲ್ಲ. ಈ ಕುತೂಹಲಕ್ಕೆ ಕಾರಣ ಅನಿಲ್ ಕಪೂರ್ ಅವರ ಸಲಹೆ ಎಂದು ಹೇಳಲಾಗುತ್ತದೆ. ಮಾಧುರಿ ಅವರ ಆರಂಭಿಕ ವೃತ್ತಿಜೀವನದಲ್ಲಿ ಅನಿಲ್ ಬೆಂಬಲ ನಿರ್ಣಾಯಕವಾಗಿತ್ತು. ಆದರೆ, ಅಮಿತಾಬ್ ಜೊತೆ ನಟಿಸದಂತೆ ಅನಿಲ್ ಹೇಳಿದ್ದೇ ಈ ದೈತ್ಯ ಜೋಡಿ ತೆರೆಗೆ ಬಾರದಿರಲು ಮುಖ್ಯ ಕಾರಣ ಎನ್ನಲಾಗಿದೆ.

ಬಾಲಿವುಡ್‌ನ ಇಬ್ಬರು ಮಹಾನ್ ತಾರೆಯರಾದ ಅಮಿತಾಭ್ ಬಚ್ಚನ್ ಮತ್ತು ಮಾಧುರಿ ದೀಕ್ಷಿತ್ ಅವರು ತಮ್ಮ ನಟನೆಯ ಮೂಲಕ ಕೋಟ್ಯಂತರ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಆದರೆ, ಇಷ್ಟು ದೀರ್ಘಾವಧಿಯ ವೃತ್ತಿಜೀವನವನ್ನು ಹೊಂದಿದ್ದರೂ ಇವರಿಬ್ಬರೂ ಪ್ರಮುಖ ಪಾತ್ರಗಳಲ್ಲಿ ಒಟ್ಟಿಗೆ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಅಮಿತಾಭ್ ಮತ್ತು ಗೋವಿಂದ ಅಭಿನಯದ ‘ಬಡೇ ಮಿಯಾ ಚೋಟೆ ಮಿಯಾ’ ಚಿತ್ರದ ಸಣ್ಣದೊಂದು ಹಾಡಿನಲ್ಲಿ ಮಾಧುರಿ ದೀಕ್ಷಿತ್ ಕಾಣಿಸಿಕೊಂಡಿದ್ದನ್ನು ಬಿಟ್ಟರೆ, ಈ ಸೂಪರ್ ಸ್ಟಾರ್ ಜೋಡಿ ಬೆಳ್ಳಿತೆರೆಯ ಮೇಲೆ ಪೂರ್ಣ ಪ್ರಮಾಣದಲ್ಲಿ ಒಟ್ಟಿಗೆ ನಟಿಸಲೇ ಇಲ್ಲ. ಈ ಪ್ರಶ್ನೆ ಇಂದಿಗೂ ಕೂಡ ಅಭಿಮಾನಿಗಳಲ್ಲಿ ದೊಡ್ಡ ಕುತೂಹಲ ಮತ್ತು ಚರ್ಚೆಯ ವಿಷಯವಾಗಿ ಉಳಿದಿದೆ.
ಮಾಧುರಿ ದೀಕ್ಷಿತ್ ಅವರು 1980ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಾಗ ಆರಂಭದ ದಿನಗಳಲ್ಲಿ ಅವರಿಗೆ ದೊಡ್ಡ ಯಶಸ್ಸು ಸಿಗಲಿಲ್ಲ. ಆ ಸಮಯದಲ್ಲಿ ಚಿತ್ರರಂಗದ ಪ್ರಮುಖ ನಟರು ಅವರೊಂದಿಗೆ ಅಭಿನಯಿಸಲು ಅಷ್ಟಾಗಿ ಆಸಕ್ತಿ ತೋರಿಸುತ್ತಿರಲಿಲ್ಲ ಎಂದು ಹೇಳಲಾಗುತ್ತದೆ. ಇಂತಹ ಕಠಿಣ ಸಂದರ್ಭದಲ್ಲಿ ನಟ ಅನಿಲ್ ಕಪೂರ್ ಅವರು ಮಾಧುರಿ ಅವರಿಗೆ ಸಾಕಷ್ಟು ಬೆಂಬಲ ನೀಡಿದರು ಮತ್ತು ಅವರ ಜೊತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡಿದರು. ಇವರಿಬ್ಬರ ಕಾಂಬಿನೇಷನ್ ಬಾಲಿವುಡ್‌ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತು.
ಬೆಳ್ಳಿತೆರೆಯ ಮೇಲೆ ಅನಿಲ್ ಕಪೂರ್ ಮತ್ತು ಮಾಧುರಿ ದೀಕ್ಷಿತ್ ಜೋಡಿಯನ್ನು ಪ್ರೇಕ್ಷಕರು ಅಪಾರವಾಗಿ ಇಷ್ಟಪಟ್ಟರು. ಇವರಿಬ್ಬರ ನಟನೆಯ ‘ತೇಜಾಬ್’, ‘ಬೇಟಾ’, ‘ಪರಿಂದಾ’ ಮತ್ತು ‘ಹಿಫಾಜತ್’ ನಂತಹ ಚಲನಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿದವು. ಇದರ ಬೆನ್ನಲ್ಲೇ ಈ ಜೋಡಿಯು ಆ ಕಾಲದ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ಜೋಡಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿತು. ಸತತ ಹಿಟ್ ಸಿನಿಮಾಗಳನ್ನು ನೀಡಿದ ನಂತರ ಮಾಧುರಿ ದೀಕ್ಷಿತ್ ಅವರ ಜನಪ್ರಿಯತೆ ಚಿತ್ರರಂಗದಲ್ಲಿ ರಾಕೆಟ್ ವೇಗದಲ್ಲಿ ಮುನ್ನುಗ್ಗಿತು.
ಇದನ್ನೂ ಓದಿ: ‘ಆ ವಯಸ್ಸಲ್ಲಿ ಗೋಲಿ ಆಡೋಕೂ ಬರ್ತಾ ಇರಲಿಲ್ಲ’; ಸೂರ್ಯವಂಶಿ ಬಗ್ಗೆ ಅಮಿತಾಭ್ ಮೆಚ್ಚುಗೆ
ಮಾಧುರಿ ದೀಕ್ಷಿತ್ ಅವರ ವೃತ್ತಿಜೀವನವು ಯಶಸ್ಸಿನ ಉತ್ತುಂಗದಲ್ಲಿದ್ದಾಗ, ಅವರಿಗೆ ಅಮಿತಾಬ್ ಬಚ್ಚನ್ ಅವರ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಹುಡುಕಿಕೊಂಡು ಬಂದಿದ್ದವು. ಆದರೆ, ಕೆಲವು ಮಾಧ್ಯಮ ವರದಿಗಳ ಪ್ರಕಾರ, ಅನಿಲ್ ಕಪೂರ್ ಅವರು ಮಾಧುರಿ ಅವರ ವೃತ್ತಿಬದುಕಿನ ವಿಷಯದಲ್ಲಿ ತುಂಬಾ ಕಾಳಜಿ ಹಾಗೂ ಪೊಸೆಸಿವ್ ಆಗಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ಮಾಧುರಿ ಅವರಿಗೆ ಅಮಿತಾಬ್ ಬಚ್ಚನ್ ಜೊತೆ ಚಿತ್ರಗಳಲ್ಲಿ ನಟಿಸದಂತೆ ಸಲಹೆ ನೀಡಿದ್ದರು ಎಂದು ಹೇಳಲಾಗುತ್ತದೆ. ಇದೇ ಕಾರಣದಿಂದ ಈ ಇಬ್ಬರು ದೈತ್ಯ ಪ್ರತಿಭೆಗಳು ಒಟ್ಟಿಗೆ ನಟಿಸಲು ಸಾಧ್ಯವಾಗಲಿಲ್ಲ ಎಂಬ ದೊಡ್ಡ ರಹಸ್ಯ ಈಗ ಬೆಳಕಿಗೆ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




