
ಇತ್ತೀಚೆಗಷ್ಟೆ ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ನಡು ರಸ್ತೆಯಲ್ಲಿ ಗುಂಡಿನ ದಾಳಿ ನಡೆಸಲಾಗಿದೆ. ಆ ತನಿಖೆ ಇನ್ನೂ ಆರಂಭಿಕ ಹಂತದಲ್ಲಿರುವಾಗಲೇ ಇದೀಗ ಭಾರತೀಯ ಚಿತ್ರರಂಗದ ದಿಗ್ಗಜ ನಟ ಅಮಿತಾಬ್ ಬಚ್ಚನ್ ಮನೆಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಬಂದಿದೆ. ಮುಂಬೈನಲ್ಲಿರುವ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಬಂಗಲೆಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ ಎಂದು ಶುಕ್ರವಾರ ಮುಂಬೈ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಬಚ್ಚನ್ ಅವರ ಮನೆ ಮಾತ್ರವೇ ಅಲ್ಲದೆ ಮುಂಬೈನ ಇನ್ನೂ ಕೆಲವೆಡೆ ಬಾಂಬ್ ಇಟ್ಟಿರುವುದಾಗಿ ಅಗಂತುಕರು ಇ-ಮೇಲ್ ಮಾಡಿದ್ದಾರೆ.
ಈ ಬೆದರಿಕೆ ಇಮೇಲ್ ಮುಂಬೈನ ಬಾಂದ್ರಾ-ಕುರ್ಲಾ ಸಂಕೀರ್ಣ (BKC) ಪ್ರದೇಶದ ಶಾಲೆಯೊಂದಕ್ಕೆ ಬಂದಿದೆ.
ಮುಂಬೈ ಪೊಲೀಸರು ಈ ವಿಷಯದ ಕುರಿತು ತನಿಖೆ ಆರಂಭಿಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಮುಂಬೈನಲ್ಲಿ ಬಚ್ಚನ್ ಅವರ ಎರಡು ಬಂಗ್ಲೆಗಳಿವೆ, ಜಲ್ಸಾ ಮತ್ತು ಪ್ರತೀಕ್ಷಾ ಎರಡರಲ್ಲಿ ಯಾವುದಕ್ಕೆ ಬಾಂಬ್ ಇಡಲಾಗಿದೆ ಎಂಬ ಬಗ್ಗೆ ಇ-ಮೇಲ್ನಲ್ಲಿ ಮಾಹಿತಿ ಇಲ್ಲ. ಅದಾಗ್ಯೂ ಮುಂಬೈ ಪೊಲೀಸರು ಬಚ್ಚನ್ ಅವರ ಎರಡೂ ಮನೆಗಳ ತಪಾಸಣೆ ನಡೆಸಿದ್ದಾರೆ ಎನ್ನಲಾಗಿದೆ. ದಿಲ್ಜೀತ್ ದೊಸ್ಸಾಂಜ್ ಅವರ ಕಾನ್ಸರ್ಟ್ ಮೇಲೆಯೂ ದಾಳಿ ಮಾಡುವುದಾಗಿ ಇ-ಮೇಲ್ನಲ್ಲಿ ಬೆದರಿಕೆ ಹಾಕಲಾಗಿದೆ.
ಬೃಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಕಚೇರಿಗೂ ಬೆದರಿಕೆ ಇಮೇಲ್ ಬಂದಿದ್ದು ಕಚೇರಿಯಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಲಾಗಿದೆ. ಅಲ್ಲಿಯೂ ಸಹ ಪೊಲೀಸರು ತಪಾಸಣೆ ನಡೆಸಿದ್ದು ಯಾವುದೇ ಅನುಮಾನಾಸ್ಪದ ವಸ್ತುಗಳು ಪೊಲೀಸರಿಗೆ ದೊರಕಿಲ್ಲ. ಈ ಬೆದರಿಕೆಯು ಸ್ಮಿತ್ ಜಾನ್ಸನ್ ಹೆಸರಿನ ಇ-ಮೇಲ್ ಖಾತೆಯಿಂದ ಬಂದಿದೆ. ಅಲ್ಲದೆ, ಈ ಬಾಂಬ್ ದಾಳಿಗಳು ಅಕ್ಟೋಬರ್ 30 ರಿಂದ ನವೆಂಬರ್ 27ರ ಒಳಗೆ ನಡೆಯಲಿವೆ ಎಂದು ಇ-ಮೇಲ್ನಲ್ಲಿ ಹೇಳಲಾಗಿದೆ. ಇ ಮೇಲ್ನಲ್ಲಿ ಖಲಿಸ್ತಾನಕ್ಕೆ ಸಂಬಂಧಿಸಿದ ವಾಕ್ಯವೊಂದಿದೆ.
ಇದನ್ನೂ ಓದಿ:ಭೂಗತ ಪಾತಕಿಗಳಿಂದ ದಾಳಿಗೆ ಒಳಗಾದ ಬಾಲಿವುಡ್ ನಟರು: ಇಲ್ಲಿದೆ ಪಟ್ಟಿ
ಇ-ಮೇಲ್ ಬಂದ ಬೆನ್ನಲ್ಲೆ ಬಿಎಂಸಿ ಖುದ್ದು ಅಧಿಕೃತವಾಗಿ ಮುಂಬೈ ಪೊಲೀಸರಿಗೆ ದೂರು ದಾಖಲಿಸಿದ್ದು, ಸೈಬರ್ ಸೆಲ್ ಮತ್ತು ಮುಂಬೈ ಪೊಲೀಸ್ ಜಂಟಿಯಾಗಿ ಪ್ರಕರಣದ ತನಿಖೆ ನಡೆಸುತ್ತಿದೆ. ಜೊತೆಗೆ ಇ-ಮೇಲ್ನಲ್ಲಿ ಉಲ್ಲೇಖವಾಗಿರುವ ಜಾಗಗಳಲ್ಲಿ ಹೆಚ್ಚಿನ ಭದ್ರತೆಯನ್ನು ನಿಯೋಜಿಸಿದ್ದಾರೆ. ಮುಂಬೈನಲ್ಲಿ ಇತ್ತೀಚೆಗೆ ಮಾಫಿಯಾಗಳ ಅಟ್ಟಹಾಸ ಹೆಚ್ಚಾಗಿರುವ ಕಾರಣ, ಈ ಬೆದರಿಕೆ ಇ-ಮೇಲ್ ಅನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ