
ಅನಂತ್ ನಾಗ್ ಅವರು ಕನ್ನಡದ ಹಿರಿಯ ನಟ. ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟರಲ್ಲಿ ಒಬ್ಬರು. ಇತ್ತೀಚೆಗಷ್ಟೆ ಅವರಿಗೆ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಿ ಅವರ ಸೇವೆಯನ್ನು ಗೌರವಿಸಲಾಯ್ತು. ಅನಂತ್ ನಾಗ್ ಅವರು ಕನ್ನಡದ ನಟನಾಗಿದ್ದರೂ ಸಹ ಅವರು ಮೊದಲು ನಟನೆಗೆ ಕಾಲಿರಿಸಿದ್ದು ಹಿಂದಿ ಸಿನಿಮಾ ಮೂಲಕ. ಹಿಂದಿಯಲ್ಲಿ ಹಲವು ರಾಷ್ಟ್ರಪ್ರಶಸ್ತಿ ವಿಜೇತ ನಟ, ನಿರ್ದೇಶಕರುಗಳೊಟ್ಟಿಗೆ ಅನಂತ್ ನಾಗ್ ಕೆಲಸ ಮಾಡಿದ್ದರು. ಅನಂತ್ ಅವರು ತಮ್ಮ ನಟನಾ ವೃತ್ತಿಯ ಆರಂಭದಲ್ಲಿ ನಟಿಸಿದ್ದ ಹಿಂದಿ ಸಿನಿಮಾಗಳು ಇಂದಿಗೂ ಕಲ್ಟ್ ಎನಿಸಿಕೊಂಡಿವೆ. ಪ್ರಾದೇಶಿಕ ಭಾಷೆಯ ಯಾವುದೇ ನಟರಿಗೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವುದು ಕನಸು, ಆದರೆ ಅನಂತ್ ನಾಗ್ ಅವರಿಗೆ ಆಗಲೇ ಸಾಕಷ್ಟು ಹಿಂದಿ ಸಿನಿಮಾಗಳ ಅವಕಾಶ ಇತ್ತು. ಆದರೆ ಅನಂತ್ ಅವರು ಪ್ರಜ್ಞಾಪೂರ್ವಕವಾಗಿ ಬಾಲಿವುಡ್ ಅನ್ನು ತ್ಯಜಿಸಿ ಕನ್ನಡ ಚಿತ್ರರಂಗನ್ನೇ ತಮ್ಮ ಕರ್ಮಭೂಮಿ ಮಾಡಿಕೊಂಡರು, ಅದಕ್ಕೆ ಕಾರಣವನ್ನೂ ಸಹ ಅವರು ನೀಡಿದ್ದಾರೆ.
ಟಿವಿ9ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅನಂತ್ ನಾಗ್, ‘ತಾವು ಮುಂಬೈನಲ್ಲಿದ್ದಾಗ ಹಲವು ಹಿಂದಿ ಹಾಗೂ ಮರಾಠಿ ನಾಟಕಗಳಲ್ಲಿ ನಟಿಸಿದ್ದು, ಅವುಗಳ ಕಾರಣದಿಂದಾಗಿಯೇ ತಮಗೆ ಹಿಂದಿ ಸಿನಿಮಾನಲ್ಲಿ ಅವಕಾಶಗಳು ದೊರಕಿತು ಎಂದಿದ್ದಾರೆ. ಅದರಲ್ಲೂ ‘ಅಂಕುರ್’ ಸಿನಿಮಾದ ಹೆಸರನ್ನು ಸಹ ತಾವೇ ನೀಡಿದ್ದಾಗಿಯೂ ಅನಂತ್ ನಾಗ್ ಹೇಳಿಕೊಂಡರು. ಸುಮಾರು ಒಂದು ದಶಕದ ಕಾಲ ಅನಂತ್ ನಾಗ್ ಅವರು ಹಿಂದಿ ಹಾಗೂ ಕನ್ನಡ ಎರಡೂ ಭಾಷೆಯ ಸಿನಿಮಾಗಳಲ್ಲಿ ನಟಿಸಿದರು. ಆದರೆ 1983 ರ ಬಳಿಕ, ಗಟ್ಟಿ ನಿರ್ಣಯ ಮಾಡಿ ಬಾಲಿವುಡ್ಗೆ ಬೈ-ಬೈ ಹೇಳಿದರು. ಅದಕ್ಕೆ ಕಾರಣವೂ ಇತ್ತು.
ಅನಂತ್ ನಾಗ್ ಅವರೇ ಹೇಳಿರುವಂತೆ, ಕಲಾತ್ಮಕ ಸಿನಿಮಾಗಳಲ್ಲಿ ನಟಿಸುತ್ತಿದ್ದ ಕಾರಣ ಅವರಿಗೆ ಹಣ ಹೆಚ್ಚಾಗಿ ಸಿಗುತ್ತಿರಲಿಲ್ಲವಂತೆ. ಅದೇ ಕಾರಣಕ್ಕೆ ಅವರು ಕನ್ನಡದಲ್ಲಿ ಮೇನ್ ಸ್ಟ್ರೀಂ ಅಥವಾ ಕಮರ್ಶಿಯಲ್ ಎನ್ನಬಹುದಾದ ಸಿನಿಮಾಗಳಲ್ಲೂ ನಟಿಸುತ್ತಿದ್ದರಂತೆ. ಸಮಯ ಕಳೆದಂತೆ ಹಿಂದಿಯಲ್ಲಿಯೂ ಮೇನ್ ಸ್ಟ್ರೀಂ ಸಿನಿಮಾಗಳು ಸಿಗಲು ಆರಂಭವಾದುವಂತೆ. ಆದರೆ ಅಲ್ಲಿ ಅನಂತ್ ನಾಗ್ ಅವರಿಗೆ ದೊಡ್ಡ ಸಮಸ್ಯೆ ಎದುರಾಯ್ತಂತೆ. ಅದುವೇ ಡ್ಯಾನ್ಸ್.
ಇದನ್ನೂ ಓದಿ:‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ಅನಂತ್ ನಾಗ್ ಅವರು ಟಿವಿ9 ಸಂದರ್ಶನದಲ್ಲಿ ಹೇಳಿರುವಂತೆ ಅವರಿಗೆ ಡ್ಯಾನ್ಸ್ ಮಾಡುವುದು ಬಹು ದೊಡ್ಡ ಸಮಸ್ಯೆ ಆಗಿತ್ತಂತೆ. ‘ಗಂಡಸರು ಸೊಂಟ ಅಲ್ಲಾಡಿಸುತ್ತಾ ಕುಣಿಯುವುದು ನನಗೆ ಊಹಿಸಲು ಸಹ ಸಾಧ್ಯವಾಗಲಿಲ್ಲ. ಅದು ನನಗೆ ಅಸಾಧ್ಯ ಎನಿಸಿಬಿಟ್ಟಿತು. ಯಾವ ಮಟ್ಟಿಗೆಂದರೆ ನನ್ನ ಮನಸ್ಸೇ ಅದನ್ನು ಒಪ್ಪಿಕೊಳ್ಳಲಿಲ್ಲ’ ಎಂದಿದ್ದಾರೆ ಅನಂತ್ ನಾಗ್. ‘ನಾನು ಯಕ್ಷಗಾನ ನೋಡಿ ಬೆಳೆದವನು, ಅಲ್ಲಿ ಕುಣಿತ ವಿಶೇಷವಾಗಿ ಗಂಡಸರ ಕುಣಿತಕ್ಕೆ ಬೇರೆಯದ್ದೇ ಲಯವಿದೆ. ಆ ರೀತಿಯ ಕುಣಿತವಾದರೆ ನನಗೆ ಮಾಡಲು ಅಡ್ಡಿ ಇಲ್ಲ, ಆದರೆ ಹೀಗೆ ಕೈ, ಕಾಲು, ಸೊಂಟ ಕುಣಿಸುತ್ತಾ ಮಾಡುವ ಡ್ಯಾನ್ಸ್ ನನಗಾಗದು. ಇದೇ ಕಾರಣಕ್ಕೆ ನಾನು ಹಿಂದಿ ಸಿನಿಮಾಗಳನ್ನು ಬಿಟ್ಟು ಬಂದೆ’ ಎಂದಿದ್ದಾರೆ ಅನಂತ್ ನಾಗ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:14 pm, Sat, 3 October 26