ಕತ್ರಿನಾ ಕೈಫ್​ಗೆ ಬಾಡಿ ಶೇಮಿಂಗ್ ಮಾಡಿದವರ ವಿರುದ್ಧ ಸಲ್ಮಾನ್ ಖಾನ್ ಗರಂ

ನಟಿ ಕತ್ರಿನಾ ಕೈಫ್ ಅವರು ತಾಯಿಯಾದ ನಂತರ ದಪ್ಪ ಆಗಿದ್ದಾರೆ. ಹಾಗಾಗಿ ಅವರಿಗೆ ಕೆಲವರು ಬಾಡಿ ಶೇಮಿಂಗ್ ಮಾಡಿದ್ದಾರೆ. ಟ್ರೋಲ್ ಮಾಡುವವರ ವಿರುದ್ಧ ಸಲ್ಮಾನ್ ಖಾನ್ ಅವರು ಗರಂ ಆಗಿದ್ದಾರೆ. ‘ಬಿಗ್ ಬಾಸ್ 20’ ಹೊಸ ಸಂಚಿಕೆಯಲ್ಲಿ ಈ ಬಗ್ಗೆ ಅವರು ಮಾತನಾಡಿದ್ದಾರೆ.

ಕತ್ರಿನಾ ಕೈಫ್​ಗೆ ಬಾಡಿ ಶೇಮಿಂಗ್ ಮಾಡಿದವರ ವಿರುದ್ಧ ಸಲ್ಮಾನ್ ಖಾನ್ ಗರಂ
Katrina Kaif, Salman Khan
Image Credit source: PTI

Updated on: Sep 20, 2026 | 9:30 AM

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರು ಬಿಗ್ ಬಾಸ್ ಸೀಸನ್ 20ರ ‘ವೀಕೆಂಡ್ ಕಾ ವಾರ್’ ಸಂಚಿಕೆಯಲ್ಲಿ ಸೋಷಿಯಲ್ ಮೀಡಿಯಾ ಟ್ರೋಲಿಗರ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ತಮ್ಮ ದೇಹ ಮತ್ತು ವಯಸ್ಸಿನ ಬಗ್ಗೆ ಕಾಮೆಂಟ್ ಮಾಡಿದವರಿಗೆ ವೇದಿಕೆಯಲ್ಲೇ ಶರ್ಟ್ ಬಿಚ್ಚಿ ತಿರುಗೇಟು ನೀಡಿದ್ದಾರೆ. ಅಲ್ಲದೇ, ತಮ್ಮ ಆಪ್ತ ಸ್ನೇಹಿತೆ ಹಾಗೂ ಸಹನಟಿ ಕತ್ರಿನಾ ಕೈಫ್ ಅವರ ಪರವಾಗಿ ಧ್ವನಿ ಎತ್ತಿ ಟ್ರೋಲಿಗರನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.

ಇತ್ತೀಚೆಗೆ ಅಂಬಾನಿ ಕುಟುಂಬದ ಗಣಪತಿ ಪೂಜೆ ಕಾರ್ಯಕ್ರಮದಲ್ಲಿ ಕತ್ರಿನಾ ಕೈಫ್ ಕಾಣಿಸಿಕೊಂಡಿದ್ದರು. ಮಗುವಿಗೆ ಜನ್ಮ ನೀಡಿದ ನಂತರ ಅವರ ದೇಹದ ತೂಕ ಹೆಚ್ಚಿದೆ. ಇದನ್ನು ಕಾರಣವಾಗಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಲವರು ಕತ್ರಿನಾ ವಿರುದ್ಧ ಖಾರವಾಗಿ ಬಾಡಿ ಶೇಮಿಂಗ್ ಮಾಡುತ್ತಿದ್ದರು. ಈ ವಿಚಾರವಾಗಿ ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್ ಅವರು ಟ್ರೋಲಿಗರ ಮನಸ್ಥಿತಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಯೂಟ್ಯೂಬರ್ ಸ್ಕೌಟ್ ಓಪಿ ಅವರು ಸಹ-ಸ್ಪರ್ಧಿ ಅರಿಶ್ಫಾ ಖಾನ್ ವಿರುದ್ಧ ತಮ್ಮ ಗೇಮಿಂಗ್ ಕಮ್ಯುನಿಟಿಗೆ ‘ಆಕೆಯನ್ನು ಮುಗಿಸಿಬಿಡಿ’ ಎಂದು ಹೇಳಿದ್ದ ಹೇಳಿಕೆಯನ್ನು ಸಲ್ಮಾನ್ ಖಾನ್ ಖಂಡಿಸಿದರು. ಈ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾದಲ್ಲಿನ ನೆಗೆಟಿವಿಟಿ ಬಗ್ಗೆ ಸಲ್ಮಾನ್ ಖಾನ್ ಅವರು ಮಾತನಾಡಿದರು.

‘ಇನ್ನೊಬ್ಬರನ್ನು ಕೀಳಾಗಿ ತೋರಿಸಿ ನೀವು ಹಣ ಸಂಪಾದಿಸುತ್ತಿದ್ದೀರಿ. ಸೆಲೆಬ್ರಿಟಿಗಳ ದೇಹದ ಬಣ್ಣ, ತೂಕ, ಕುಟುಂಬ, ವೃತ್ತಿಜೀವನದ ಹಿನ್ನಡೆ ಮತ್ತು ತಾಯ್ತನದಂತಹ ವೈಯಕ್ತಿಕ ವಿಚಾರಗಳನ್ನು ಗುರಿಯಾಗಿಸಿಕೊಂಡು ಟ್ರೋಲ್ ಮಾಡುವ ಮೂಲಕ ನೀವು ನಿಮ್ಮ ಸಂಸ್ಕಾರವನ್ನು ತೋರಿಸಿಕೊಳ್ಳುತ್ತಿದ್ದೀರಿ’ ಎಂದು ಸಲ್ಮಾನ್ ಖಾನ್ ಅವರು ಗರಂ ಆಗಿದ್ದಾರೆ.

ಇದನ್ನೂ ಓದಿ: ಬಿಗ್‌ ಬಾಸ್‌ ವೇದಿಕೆಯಲ್ಲಿ ಶರ್ಟ್‌ ಬಿಚ್ಚಿ ಟ್ರೋಲಿಗರಿಗೆ ತಕ್ಕ ಉತ್ತರ ನೀಡಿದ ಸಲ್ಮಾನ್‌ ಖಾನ್‌

ಕತ್ರಿನಾ ಕೈಫ್ ಅವರ ತಾಯ್ತನ ಮತ್ತು ಅವರ ದೇಹದ ತೂಕದ ಕುರಿತು ನಡೆಯುತ್ತಿರುವ ಟ್ರೋಲ್ ಬಗ್ಗೆ ಸಲ್ಮಾನ್ ಪ್ರತಿಕ್ರಿಯಿಸಿದ್ದಾರೆ. ‘ಗರ್ಭಿಣಿಯಾದ ನಂತರ ಪ್ರತಿಯೊಬ್ಬ ಮಹಿಳೆಯೂ ತೂಕ ಹೆಚ್ಚಿಸಿಕೊಳ್ಳುವುದು ಸಹಜ. ಇತ್ತೀಚೆಗಷ್ಟೇ ತಾಯಿಯಾಗಿರುವ ನಟಿಯ ತೂಕ ಮತ್ತು ಲುಕ್ ಬಗ್ಗೆ ಕಾಮೆಂಟ್ ಮಾಡಲು ನಿಮಗೇಕೆ ಅಷ್ಟೊಂದು ಆತುರ. ಕತ್ರಿನಾ ಮತ್ತೆ ಸಿನಿಮಾಗಳಿಗೆ ಮರಳಿದಾಗ ಖಂಡಿತವಾಗಿಯೂ ಮೊದಲಿನಂತೆ ಫಿಟ್ ಆಗುತ್ತಾರೆ. ಪ್ರಸ್ತುತ ಅವರಿಗೆ ಕುಟುಂಬದೊಂದಿಗೆ ಸಮಯ ಕಳೆಯಲು ಬಿಡಿ’ ಎಂದು ಸಲ್ಮಾನ್ ಹೇಳಿದ್ದಾರೆ.

ತಮ್ಮ ಮುಖವನ್ನು ತೋರಿಸಿಕೊಳ್ಳಲು ಧೈರ್ಯವಿಲ್ಲದೆ ಅನಾಮಧೇಯ ಖಾತೆಗಳ ಹಿಂದೆ ಅಡಗಿ ಕುಳಿತು ಇತರರ ಲುಕ್ ಮತ್ತು ತೂಕದ ಬಗ್ಗೆ ಮಾತನಾಡುವವರನ್ನು ಸಲ್ಮಾನ್ ತೀವ್ರವಾಗಿ ಟೀಕಿಸಿದ್ದಾರೆ. ತಮ್ಮ ವಯಸ್ಸಿನ ಬಗ್ಗೆ ಬರುತ್ತಿರುವ ಟ್ರೋಲ್‌ಗಳಿಗೂ ಉತ್ತರಿಸಿದ ಅವರು, ‘ಜನರು ಇತರರ ಸೋಲು ಮತ್ತು ವಯಸ್ಸಾಗುವಿಕೆಯನ್ನು ಸಂಭ್ರಮಿಸುತ್ತಾರೆ. ಮುದುಕನಾಗಿದ್ದಾನೆ ಎಂದು ಕಾಮೆಂಟ್ ಮಾಡುತ್ತಾರೆ. ಹೌದು, ನನಗೆ 60 ವರ್ಷವಾಗಿದೆ. ನಾನು ಸದಾ ಮೈನೆ ಪ್ಯಾರ್ ಕಿಯಾ ಚಿತ್ರದಲ್ಲಿದ್ದಂತೆ ಇರಲು ಸಾಧ್ಯವಿಲ್ಲ’ ಎಂದು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us