
ಬಾಲಿವುಡ್ ನಟ ಅಜಯ್ ದೇವಗನ್ ಅವರು ದಕ್ಷಿಣದ ಸಿನಿಮಾಗಳನ್ನು ರಿಮೇಕ್ ಮಾಡಿ ಯಶಸ್ಸು ಕಾಣುತ್ತಿದ್ದಾರೆ. ಅವರ ಬಹುನಿರೀಕ್ಷಿತ ಕ್ರೈಮ್ ಥ್ರಿಲ್ಲರ್ ‘ದೃಶ್ಯಂ 3: ದಿ ಕನ್‌ಕ್ಲೂಷನ್’ ಸಿನಿಮಾ ಪ್ರದರ್ಶನ ಆರಂಭಿಸಿ ಬಾಕ್ಸ್ ಆಫೀಸ್‌ನಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ನಟ ಅಜಯ್ ದೇವಗನ್ ಅವರ ವಿಜಯ್ ಸಲ್ಗಾಂವ್ಕರ್ ಪಾತ್ರವು ಮತ್ತೊಮ್ಮೆ ಪ್ರೇಕ್ಷಕರನ್ನು ಅಚ್ಚರಿಯ ತುದಿಗೆ ತಳ್ಳಿದೆ. ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ಈ ಚಿತ್ರ ಜಾಗತಿಕವಾಗಿ ಅಬ್ಬರಿಸುತ್ತಿದೆ.
ಚಿತ್ರವು ಭಾರತದಲ್ಲಿ ಮೊದಲ ವಾರಾಂತ್ಯದಲ್ಲಿ ಬರೋಬ್ಬರಿ 176.50 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು ಗ್ರಾಸ್ ಕಲೆಕ್ಷನ್ 272.80 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಗಾಂಧಿ ಜಯಂತಿಯಂದು ಬಿಡುಗಡೆಯಾದ ಈ ಸಿನಿಮಾ ಇಂದೇ 300 ಕೋಟಿ ರೂಪಾಯಿ ಗಡಿ ದಾಟಲಿದೆ.
ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಸಿನಿಮಾ ಬಿಡುಗಡೆಯಾದ 3ನೇ ದಿನ ಭಾರತದಲ್ಲೇ 61 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಮೊದಲ ದಿನ 62 ಕೋಟಿ ರೂಪಾಯಿ, ಎರಡನೇ ದಿನ 53.50 ಕೋಟಿ ಹಾಗೂ ಮೂರನೇ ದಿನ 61 ಕೋಟಿ ರೂಪಾಯಿ ಸಂಗ್ರಹವಾಗಿದೆ. ಈ ಮೂಲಕ ‘ದೃಶ್ಯಂ 3’ ತನ್ನ ಹಿಂದಿನ ಎರಡೂ ಭಾಗಗಳ ಆರಂಭಿಕ ದಾಖಲೆಗಳನ್ನು ಧೂಳಿಪಟ ಮಾಡಿದೆ.
ಅಭಿಷೇಕ್ ಪಾಠಕ್ ನಿರ್ದೇಶನದ ಈ ಥ್ರಿಲ್ಲರ್ ಚಿತ್ರ ಮಲಯಾಳಂ ‘ದೃಶ್ಯಂ 3’ ಸಿನಿಮಾದ ರಿಮೇಕ್. ಆದರೆ, ಈ ಚಿತ್ರದಲ್ಲಿ ಕ್ಲೈಮ್ಯಾಕ್ಸ್ ಬದಲಿಸಲಾಗಿದೆಯಂತೆ. ಹಿಂದಿ ‘ದೃಶ್ಯಂ 3’ ಚಿತ್ರದಲ್ಲಿ ಅಜಯ್ ದೇವಗನ್ ಜೊತೆಗೆ ಶ್ರಿಯಾ ಶರಣ್, ಟಬು ಹಾಗೂ ಇಶಿತಾ ದತ್ತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಕಾಶ್ ರಾಜ್ ಹಾಗೂ ಜೈದೀಪ್ ಅಹ್ಲಾವತ್ ಅವರ ಹೊಸ ಪಾತ್ರಗಳು ಚಿತ್ರದ ರೋಚಕತೆಯನ್ನು ಇನ್ನಷ್ಟು ಹೆಚ್ಚಿಸಿವೆ.
ಇದನ್ನೂ ಓದಿ: ಮೊದಲ ದಿನ ದಾಖಲೆಯ ಗಳಿಕೆ ಕಂಡ ‘ದೃಶ್ಯಂ 3’; ಶತಕೋಟಿ ಜಸ್ಟ್ ಮಿಸ್
ಅಕ್ಟೋಬರ್ 2ರಂದು ತೆರೆಕಂಡ ‘ದೃಶ್ಯಂ 3’ ಸಿನಿಮಾ ಪ್ರೇಕ್ಷಕರಿಂದ ಸಿಗುತ್ತಿರುವ ಅಭೂತಪೂರ್ವ ಬೆಂಬಲದಿಂದಾಗಿ ಮುಂಬರುವ ದಿನಗಳಲ್ಲಿ ಬಾಕ್ಸ್ ಆಫೀಸ್‌ನ ಸಾಲು ಸಾಲು ಹಳೆಯ ದಾಖಲೆಗಳನ್ನು ಅಳಿಸಿಹಾಕುವ ಸೂಚನೆ ನೀಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.