
ಬಾಲಿವುಡ್‌ನ ಹಿರಿಯ ನಟ ಗೋವಿಂದ ಮತ್ತು ಅವರ ಪತ್ನಿ ಸುನಿತಾ ಅಹುಜಾ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪಗಳು ಬಾಲಿವುಡ್ ಅಂಗಳದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಗೋವಿಂದ ಅವರು ನಂಬಿಕೆಗೆ ದ್ರೋಹ ಎಸಗಿದ್ದಾರೆ ಎಂದು ಇತ್ತೀಚೆಗೆ ಸುನಿತಾ ಬಹಿರಂಗವಾಗಿ ಆರೋಪಿಸಿದ್ದರು. ಇದೀಗ ಈ ವಿಚಾರವಾಗಿ ಮೌನ ಮುರಿದಿರುವ ಗೋವಿಂದ, ತಮ್ಮ ಪತ್ನಿಯನ್ನು ಯಾರೋ ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಮತ್ತು ಅವರ ಹಿಂದೆ ನಿಂತು ಆಟವಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಸುನಿತಾ ಅಹುಜಾ ಅವರು ಪತಿ ಗೋವಿಂದ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ. ‘ರೂಪಾ’ ಚಿತ್ರದ ಸಹನಟಿ ಕೋಮಲ್ ರಾಣಿ ಸ್ವರ್ಣಕಾರ್ ಅವರೊಂದಿಗೆ ಗೋವಿಂದ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬುದು ಸುನಿತಾ ಅವರ ಪ್ರಮುಖ ಆರೋಪವಾಗಿತ್ತು. ಇತ್ತೀಚೆಗೆ ಮುಂಬೈನ ಪ್ರಸಿದ್ಧ ‘ಲಾಲ್‌ಬಾಗ್‌ಚಾ ರಾಜ’ ಗಣಪತಿ ಪೆಂಡಾಲ್‌ನಲ್ಲಿ ಗೋವಿಂದ ಅವರು ಕೋಮಲ್ ಅವರೊಂದಿಗೆ ಕಾಣಿಸಿಕೊಂಡಿದ್ದು ಈ ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ನೀಡಿತ್ತು. ಅದೇ ದಿನ ಸುನಿತಾ ಅವರು ಒಬ್ಬರೇ ಪೆಂಡಾಲ್‌ಗೆ ಭೇಟಿ ನೀಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಗೋವಿಂದ, ‘ಯಾರನ್ನಾದರೂ ಮುಜುಗರಕ್ಕೆ ಈಡುಮಾಡುವುದು ಅಥವಾ ಮಾನಹಾನಿ ಮಾಡುವುದು ನನ್ನ ಸ್ವಭಾವವಲ್ಲ. ಏಳೆಂಟು ವರ್ಷಗಳ ಹಿಂದೆಯೇ ನಾನು ಇಂತಹ ಕಷ್ಟದ ಹಂತವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದೆ. ಈಗ ನಾವೆಲ್ಲರೂ ಅದೇ ಸುಳಿಯಲ್ಲಿ ಸಿಲುಕಿದ್ದೇವೆ. ನನ್ನ ಹೆಸರಿಗೆ ಕಳಂಕ ತರುವುದು ಹೊಸದೇನಲ್ಲ. ನಾನು ಎಂದಿಗೂ ನಂಬಿಕೆ ದ್ರೋಹ ಮಾಡುತ್ತೇನೆ ಎಂದೇ ಜನರು ಭಾವಿಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮುಂದುವರಿದು ಮಾತನಾಡಿದ ಗೋವಿಂದ ಅವರು, ‘ನನ್ನ ಮತ್ತು ಸುನಿತಾ ನಡುವೆ ಯಾರೋ ದೊಡ್ಡ ಆಟವಾಡುತ್ತಿದ್ದಾರೆ. ಸುನಿತಾ ಅವರನ್ನು ಯಾರೋ ಮಿಸ್‌ಗೈಡ್ ಮಾಡುತ್ತಿದ್ದಾರೆ ಮತ್ತು ಪ್ರಚೋದಿಸುತ್ತಿದ್ದಾರೆ. ಆದರೆ ಸುನಿತಾ ನನ್ನ ಜೀವನ ಮತ್ತು ವೃತ್ತಿಜೀವನಕ್ಕೆ ನೀಡಿದ ಕೊಡುಗೆಯನ್ನು ನಾನು ಎಂದಿಗೂ ಮರೆಯುವುದಿಲ್ಲ. ಅವರ ಗೌರವಕ್ಕೆ ಧಕ್ಕೆ ತರಲು ನಾನು ಬಯಸುವುದಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ: ಪ್ರೇಯಸಿ ಜತೆ ಗಣಪತಿ ದರ್ಶನಕ್ಕೆ ಬಂದ ಗೋವಿಂದ: ಪತ್ನಿ ಸುನೀತಾ ಪ್ರತಿಕ್ರಿಯೆ
‘ಅವರನ್ನು ಪ್ರಚೋದಿಸುತ್ತಿರುವವರಿಗೆ ತಲೆತಿರುಗಿ ಸುಮ್ಮನಾಗುವವರೆಗೆ ನಾನು ಈ ಆರೋಪಗಳನ್ನು ಎದುರಿಸುತ್ತಲೇ ಇರುತ್ತೇನೆ. ಅವರು ಗೋವಿಂದ ಜೊತೆ ಆಟವಾಡುತ್ತಿದ್ದೇವೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಕಹಿ ಎಂದಿಗೂ ಸಿಹಿಯಾಗಲು ಸಾಧ್ಯವಿಲ್ಲ. ಈ ಕೆಟ್ಟ ಸಮಯ ಕಳೆದ ಮೇಲೆ ಜನರು ನಾನು ಎಷ್ಟು ಗೌರವಯುತವಾಗಿ ನಡೆದುಕೊಂಡೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ. ನಾನು ಅವರ ಯಾವುದೇ ತಂತ್ರಗಳಿಗೆ ಬಲಿಯಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.