‘ಗೋಲ್​​ಮಾಲ್’ ನಿರ್ದೇಶಕ ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ

ಸ್ಟಾರ್ ಡೈರೆಕ್ಟರ್ ರೋಹಿತ್ ಶೆಟ್ಟಿ ಅವರ ನಿವಾಸದ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದೆ. ಈ ಘಟನೆಯಿಂದ ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಆತಂಕ ಹೆಚ್ಚಾಗಿದೆ. ದಾಳಿಗೆ ಕಾರಣ ತಿಳಿದು ಬಂದಿಲ್ಲ. ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರೋಹಿತ್ ಶೆಟ್ಟಿ ಮನೆಯ ಎದುರು ಭದ್ರತೆ ಹೆಚ್ಚಿಸಲಾಗಿದೆ.

‘ಗೋಲ್​​ಮಾಲ್’ ನಿರ್ದೇಶಕ ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ
Rohit Shetty
Image Credit source: PTI

Updated on: Feb 01, 2026 | 9:12 AM

ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮನೆ ಮೇಲೆ ಗುಂಡಿನ ದಾಳಿ (Firing) ಮಾಡಲಾಗಿದೆ. ಮುಂಬೈನ ಜುಹುನಲ್ಲಿ ರೋಹಿತ್ ಶೆಟ್ಟಿ (Rohit Shetty) ನಿವಾಸ ಇದೆ. ಶನಿವಾರ (ಜನವರಿ 31) ರಾತ್ರಿ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಗುಂಡಿನ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ. ಒಟ್ಟು ನಾಲ್ಕು ಸುತ್ತು ಗುಂಡು ಹಾರಿಸಲಾಯಿತು ಎಂದು ಸ್ಥಳೀಯರು ಹೇಳಿದ್ದಾರೆ. ಈ ಕೃತ್ಯ ಎಸಗಿದವರು ಯಾರು ಎಂಬುದು ಇನ್ನೂ ಪತ್ತೆ ಆಗಿಲ್ಲ. ಘಟನೆ ನಡೆದ ಕೂಡಲೇ ಕಾರ್ಯಪ್ರವೃತ್ತರಾಗಿರುವ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಯಾವ ಉದ್ದೇಶದಿಂದ ಗುಂಡಿನ ದಾಳಿ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಆ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಎಲ್ಲ ಆಯಾಮದಿಂದಲೂ ತನಿಖೆ ಚುರುಕುಕೊಂಡಿದೆ. ಈ ಘಟನೆಯಿಂದಾಗಿ ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಆತಂಕ ಹೆಚ್ಚಾಗಿದೆ. ಈ ಮೊದಲು ನಟ ಸಲ್ಮಾನ್ ಖಾನ್ ಅವರ ನಿವಾಸದ ಮೇಲೆ ಕೂಡ ಇದೇ ರೀತಿ ಗುಂಡಿನ ದಾಳಿ ಮಾಡಲಾಗಿತ್ತು.

ರೋಹಿತ್ ಶೆಟ್ಟಿ ಅವರ ನಿವಾಸಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಗುಂಡಿನ ದಾಳಿ ನಡೆದ ಜಾಗದಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ತನಿಖೆ ಮಾಡಲಾಗುತ್ತಿದೆ. ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಕೂಡ ಸ್ಥಳಕ್ಕೆ ಆಗಮಿಸಿ ಅಗತ್ಯ ಮಾಹಿತಿ ಕಲೆಹಾಕುತ್ತಿದೆ. ಕೆಲವು ವಿಡಿಯೋಗಳು ವೈರಲ್ ಆಗಿವೆ.

ಈ ಗುಂಡಿನ ದಾಳಿಯಲ್ಲಿ ವಿದೇಶಿ ಭಯೋತ್ಪಾದಕರ ಕೈವಾಡ ಇದೆಯಾ ಎಂಬುದನ್ನು ಕೂಡ ಪತ್ತೆ ಹಚ್ಚಲಾಗುತ್ತಿದೆ. ಸದ್ಯಕ್ಕೆ ಯಾವುದೇ ಸುಳಿವು ಸಿಕ್ಕಿಲ್ಲ. ಯಾರು ಕೂಡ ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಘಟನೆಗೆ ಸಂಬಂಧಿಸಿದಂತೆ ರೋಹಿತ್ ಶೆಟ್ಟಿ ಹಾಗೂ ಅವರ ಕುಟುಂಬದರು ಹೇಳಿಕೆ ನೀಡುವುದು ಬಾಕಿ ಇದೆ.

ಇದನ್ನೂ ಓದಿ: ಹೊಸ ಸಾಹಸಕ್ಕೆ ಮುಂದಾದ ರೋಹಿತ್​ ಶೆಟ್ಟಿ; ಮುಂಬೈನಲ್ಲಿ ತಲೆ ಎತ್ತಲಿದೆ ಅತಿ ದೊಡ್ಡ ಸ್ಟುಡಿಯೋ?

ಬಾಲಿವುಡ್​​ನಲ್ಲಿ ರೋಹಿತ್ ಶೆಟ್ಟಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಕಾಮಿಡಿ ಮತ್ತು ಆ್ಯಕ್ಷನ್ ಸಿನಿಮಾಗಳ ಮೂಲಕ ಅವರು ಹೆಸರು ಮಾಡಿದ್ದಾರೆ. ‘ಗೋಲ್​​ಮಾಲ್’, ‘ಸಿಂಘಂ’, ‘ಚೆನ್ನೈ ಎಕ್ಸ್​ಪ್ರೆಸ್’ ಮುಂತಾದ ಸಿನಿಮಾಗಳಿಗೆ ಅವರು ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್, ಅಜಯ್ ದೇವಗನ್, ರಣವೀರ್ ಸಿಂಗ್, ಅಕ್ಷಯ್ ಕುಮಾರ್ ಮುಂತಾದ ನಟರ ಜೊತೆ ರೋಹಿತ್ ಶೆಟ್ಟಿ ಕೆಲಸ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us