
ನಟ ಶಾರುಖ್ ಖಾನ್ ಅವರು ‘ಪಠಾಣ್’ (Pathaan) ಸಿನಿಮಾ ಮೂಲಕ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿದರು. ಅದಕ್ಕೂ ಮುನ್ನ ಸತತ ಸೋಲು ಕಾಣುತ್ತಿದ್ದ ಅವರಿಗೆ ಈ ಚಿತ್ರದಿಂದ ಗೆಲುವು ಸಿಕ್ಕಿತು. 2023ರ ಆರಂಭದಲ್ಲಿ ಬಿಡುಗಡೆಯಾದ ಈ ಸಿನಿಮಾ ಇಂಡಿಯನ್ ಬಾಕ್ಸ್ ಆಫೀಸ್ನಲ್ಲಿ 543 ಕೋಟಿ ರೂಪಾಯಿ ಗಳಿಸಿದೆ. ವಿಶ್ವಾದ್ಯಂತ ಈ ಸಿನಿಮಾ 1000 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ನಿಜಕ್ಕೂ ಈ ಸಿನಿಮಾ ಎಷ್ಟು ಕಮಾಯಿ ಮಾಡಿದೆ ಎಂಬ ಬಗ್ಗೆ ಕೆಲವರಿಗೆ ಅನುಮಾನ ಇದೆ. ಜನಸಾಮಾನ್ಯರಿಗೆ ಮಾತ್ರವಲ್ಲದೇ ನಟಿ ಕಾಜೋಲ್ (Kajol) ಕೂಡ ಈ ಅನುಮಾನ ಹೊಂದಿದ್ದಾರೆ. ‘ಪಠಾಣ್ ಸಿನಿಮಾದ ನಿಜವಾದ ಕಲೆಕ್ಷನ್ ಎಷ್ಟು’ ಎಂದು ಅವರು ಬಹಿರಂಗವಾಗಿಯೇ ಪ್ರಶ್ನೆ ಮಾಡಿದ್ದಾರೆ. ಇದರಿಂದ ಶಾರುಖ್ ಖಾನ್ (Shah Rukh Khan) ಅಭಿಮಾನಿಗಳಿಗೆ ಕೋಪ ಬಂದಿದೆ.
ಕಾಜೋಲ್ ಅವರು ‘ದಿ ಟ್ರಯಲ್’ ವೆಬ್ ಸಿರೀಸ್ನಲ್ಲಿ ನಟಿಸಿದ್ದಾರೆ. ಅದರ ಪ್ರಚಾರದ ಸಲುವಾಗಿ ಅವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಶಾರುಖ್ ಖಾನ್ ಬಗ್ಗೆ ಪ್ರಸ್ತಾಪ ಆಗಿದೆ. ‘ನೀವು ಶಾರುಖ್ ಖಾನ್ಗೆ ಏನಾದರೂ ಪ್ರಶ್ನೆ ಕೇಳಬೇಕಾ’ ಎಂದು ನಿರೂಪಕರು ಕೇಳಿದ್ದಾರೆ. ಆಗ ಕಾಜೋಲ್ ನೀಡಿದ ಪ್ರತಿಕ್ರಿಯೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.
‘ಶಾರುಖ್ ಖಾನ್ ಬಗ್ಗೆ ನಾನೇನು ಕೇಳಲಿ. ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಎಲ್ಲವೂ ಇದೆ’ ಎಂದು ಕಾಜೋಲ್ ಅವರು ಒಂದು ಕ್ಷಣ ಬ್ಲಾಂಕ್ ಆಗಿದ್ದಾರೆ. ಕೂಡಲೇ ಏನನ್ನೋ ನೆನಪಿಸಿಕೊಂಡು, ‘ನಿಜಕ್ಕೂ ಪಠಾಣ್ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿತು’ ಎಂದು ಪ್ರಶ್ನೆ ಕೇಳಿದ್ದಾರೆ. ನಂತರ ಜೋರಾಗಿ ನಕ್ಕಿದ್ದಾರೆ. ಆ ನಗುವಿನಲ್ಲಿ ವ್ಯಂಗ್ಯ ಕಾಣಿಸಿದೆ ಎಂದು ನೆಟ್ಟಿಗರು ದೂರುತ್ತಿದ್ದಾರೆ.
ಇದನ್ನೂ ಓದಿ: ಯಶ್ ನಟನೆಯ ಸಿನಿಮಾಗಳನ್ನು ನೋಡಿ ‘ಜವಾನ್’ ಚಿತ್ರಕ್ಕಾಗಿ ತಯಾರಿ ಮಾಡಿಕೊಂಡಿದ್ದ ಶಾರುಖ್ ಖಾನ್
ಶಾರುಖ್ ಖಾನ್ ಮತ್ತು ಕಾಜೋಲ್ ಅವರು ಬಹುಕಾಲದ ಸ್ನೇಹಿತರು. ಅನೇಕ ಸಿನಿಮಾಗಳಲ್ಲಿ ಅವರು ಒಟ್ಟಾಗಿ ನಟಿಸಿದ್ದಾರೆ. ಆದರೆ ಈಗ ಅವರಿಬ್ಬರ ನಡುವೆ ನಿಜಕ್ಕೂ ಸ್ನೇಹ ಇದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಅಭಿಮಾನಿಗಳಿಗೆ ಅನುಮಾನ ಮೂಡಿದೆ. ಒಂದು ವೇಳೆ ಸ್ನೇಹ ಇದ್ದಿದ್ದೇ ಹೌದಾಗಿದ್ದರೆ ಕಾಜೋಲ್ ಅವರು ಈ ರೀತಿ ಪ್ರಶ್ನೆ ಕೇಳುತ್ತಿರಲಿಲ್ಲ ಎಂಬುದು ಕೆಲವರು ಅನಿಸಿಕೆ.
ಇದನ್ನೂ ಓದಿ: ಅಮ್ಮ-ಮಗನ ಪಾತ್ರದಲ್ಲಿ ದೀಪಿಕಾ ಪಡುಕೋಣೆ-ಶಾರುಖ್ ಖಾನ್? ಭಾರಿ ಟ್ವಿಸ್ಟ್ ನಿರೀಕ್ಷೆಯಲ್ಲಿ ಫ್ಯಾನ್ಸ್
‘ಪಠಾಣ್ ಸಿನಿಮಾದ ಬಿಸ್ನೆಸ್ ಬಗ್ಗೆ ಕಾಜೋಲ್ ಲೇವಡಿ ಮಾಡಿದ್ದಾರೆ. ಶಾರುಖ್ ಖಾನ್ ಅವರು ನಕಲಿ ಕಲೆಕ್ಷನ್ ಲೆಕ್ಕ ನೀಡಿದ್ದಾರೆ ಅಂತ ಮನೆಯಲ್ಲಿ ಕಾಜೋಲ್ ಜೊತೆ ಅಜಯ್ ದೇವಗನ್ ಮಾತನಾಡಿರಬಹುದು. ಇದು ಬಾಲಿವುಡ್ನ ಅಸಲಿ ಮುಖ’ ಎಂದು ಸ್ವಯಂ ಘೋಷಿತ ವಿಮರ್ಶಕ ಕಮಾಲ್ ಆರ್. ಖಾನ್ ಟ್ವೀಟ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.