
ಬಹಳಷ್ಟು ನಿರೀಕ್ಷೆ ಮೂಡಿಸಿರುವ ‘ರಾಮಾಯಣ’ ಸಿನಿಮಾದ ನಿರ್ಮಾಪಕರಿಗೆ ಹೊಸ ಸಂಕಷ್ಟ ಎದುರಾಗಿದೆ. ಚಿತ್ರ ನಿರ್ಮಾಣ ಮಾಡುತ್ತಿರುವ ಪ್ರೈಮ್ ಫೋಕಸ್ ಸಂಸ್ಥೆಯ ಮುಂಬೈ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಸಂಸ್ಥೆಯ ಮುಖ್ಯಸ್ಥ ನಮಿತ್ ಮಲ್ಹೋತ್ರಾ ಅವರ ಕಚೇರಿ, ಮನೆಯಲ್ಲಿ ಶೋಧ ಕಾರ್ಯ ನಡೆದಿದೆ. ಈ ಹಠಾತ್ ದಾಳಿಯಿಂದಾಗಿ ಸಿನಿಮಾ ತಂಡ ತೀವ್ರ ಆತಂಕಕ್ಕೆ ಒಳಗಾಗಿದೆ. ಶೋಧ ಕಾರ್ಯ ಇನ್ನೂ ಮುಂದುವರಿದಿದ್ದು, ಹಲವು ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಸಂಸ್ಥೆಯು ನಡೆಸಿರುವ ಕೆಲವು ವಿದೇಶಿ ಹಣಕಾಸು ವಹಿವಾಟುಗಳ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ವಿದೇಶಿ ಹೂಡಿಕೆಯಲ್ಲಿ ಅಕ್ರಮ ನಡೆದಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಐಟಿ ದಾಳಿಯ ಸುದ್ದಿ ಹೊರಬಿದ್ದ ಬೆನ್ನಲ್ಲೇ ಪ್ರೈಮ್ ಫೋಕಸ್ ಸಂಸ್ಥೆಯ ಶೇರು ಮೌಲ್ಯದಲ್ಲಿ ಕುಸಿತ ಕಂಡಿದೆ. ಏಕಾಏಕಿ ಶೇಕಡಾ 8 ರಷ್ಟು ಶೇರು ದರ ಕುಸಿದಿರುವುದು ಹೂಡಿಕೆದಾರರಲ್ಲೂ ಆತಂಕ ಮೂಡಿಸಿದೆ.
‘ರಾಮಾಯಣ’ ಚಿತ್ರಕ್ಕೆ ವಿವಿಧ ವಿದೇಶಿ ಕಂಪನಿಗಳ ಮೂಲಕ ಭಾರಿ ಪ್ರಮಾಣದ ಹಣ ಹರಿದುಬಂದಿದೆ. ಚಿತ್ರ ನಿರ್ಮಾಣಕ್ಕಾಗಿ ನೂರಾರು ಕೋಟಿ ರೂಪಾಯಿಗಳನ್ನು ಭಾರತಕ್ಕೆ ತರಲಾಗಿದೆ ಎಂದು ಹೇಳಲಾಗುತ್ತಿದೆ. ಸಿನಿಮಾ ಘೋಷಣೆಯಾದಂದಿನಿಂದಲೇ ಚಿತ್ರತಂಡ ಪ್ರಚಾರಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಈ ಎಲ್ಲಾ ವಹಿವಾಟುಗಳು ಈಗ ಆದಾಯ ತೆರಿಗೆ ಇಲಾಖೆಯ ಕಣ್ಣಿಗೆ ಬಿದ್ದಿವೆ.
ಪ್ರಸ್ತುತ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇಂತಹ ಸಮಯದಲ್ಲಿ ಐಟಿ ದಾಳಿ ನಡೆದಿರುವುದು ಎಲ್ಲರ ಗಮನ ಸೆಳೆದಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಹಾಗೂ ಸನ್ನಿ ಡಿಯೋಲ್ ನಟಿಸುತ್ತಿದ್ದಾರೆ. ಪ್ರಮುಖ ತಾರಾಗಣ ಹೊಂದಿರುವ ಸಿನಿಮಾ ಸುತ್ತ ಈಗ ಈ ವಿವಾದ ಸುತ್ತಿಕೊಂಡಿದೆ.
ಇದನ್ನೂ ಓದಿ: ‘ರಾಮಾಯಣ’ ಚಿತ್ರತಂಡಕ್ಕೆ ಅರುಣ್ ಗೋವಿಲ್ ಸೇರ್ಪಡೆ: ದಶರಥನ ಪಾತ್ರದ ಪೋಸ್ಟರ್ ಬಿಡುಗಡೆ
ಈ ದಾಳಿ ಹಾಗೂ ತನಿಖೆಯ ಕುರಿತು ಐಟಿ ಇಲಾಖೆಯಾಗಲಿ ಅಥವಾ ಪ್ರೈಮ್ ಫೋಕಸ್ ಸಂಸ್ಥೆಯಾಗಲಿ ಅಧಿಕೃತ ಹೇಳಿಕೆ ನೀಡಿಲ್ಲ. ತನಿಖೆ ಮುಗಿದ ನಂತರಷ್ಟೇ ಸಂಪೂರ್ಣ ವಿವರಗಳು ಹೊರಬರಬೇಕಿದೆ. ಚಿತ್ರರಂಗದ ಪ್ರಮುಖರು ಈ ಬೆಳವಣಿಗೆಯನ್ನು ಕುತೂಹಲದಿಂದ ಗಮನಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾಯ್ದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.