‘ರಾಮಾಯಣ’ ಚಿತ್ರತಂಡಕ್ಕೆ ಅರುಣ್ ಗೋವಿಲ್ ಸೇರ್ಪಡೆ: ದಶರಥನ ಪಾತ್ರದ ಪೋಸ್ಟರ್ ಬಿಡುಗಡೆ
ಹಿರಿಯ ನಟ ಅರುಣ್ ಗೋವಿಲ್ ಅವರು ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅವರ ಪಾತ್ರದ ಹೊಸ ಪೋಸ್ಟರ್ ಅನಾವರಣ ಮಾಡಲಾಗಿದೆ. ಈ ಚಿತ್ರದಲ್ಲಿ ಅವರು ದಶರಥನಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಸುಮಾರು 38 ವರ್ಷಗಳ ನಂತರ ಹಿರಿಯ ನಟ ಅರುಣ್ ಗೋವಿಲ್ ಮತ್ತೆ ‘ರಾಮಾಯಣ’ ಪಾತ್ರವರ್ಗಕ್ಕೆ ಮರಳಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ಅವರು ಈ ಬಾರಿ ರಾಜ ದಶರಥನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಪೋಸ್ಟರ್ ಬಿಡುಗಡೆಯಾಗಿದೆ. ರಾಮಾನಂದ್ ಸಾಗರ್ ಅವರ ಐಕಾನಿಕ್ ‘ರಾಮಾಯಣ’ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರ ಮಾಡಿ ಪ್ರತಿಯೊಬ್ಬ ಭಾರತೀಯನ ಮನ ಗೆದ್ದಿದ್ದ ಅರುಣ್ ಗೋವಿಲ್ ಅವರ ಈ ಹೊಸ ಅವತಾರ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಹುಟ್ಟುಹಾಕಿದೆ.
‘ರಾಮಾಯಣ’ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಅವರ ಪೋಸ್ಟರ್ ಹಂಚಿಕೊಂಡಿದ್ದು, ಅಯೋಧ್ಯೆಯ ರಾಜನಾಗಿ ಪೋಸ್ ನೀಡಿದ್ದಾರೆ. ರಾಜನ ಪೋಷಾಕು ಮತ್ತು ಕಿರೀಟ ಧರಿಸಿರುವ ಅರುಣ್ ಗೋವಿಲ್ ಅವರ ರಾಯಲ್ ಲುಕ್ ಗಮನ ಸೆಳೆಯುತ್ತಿದೆ. ‘ಒಂದು ಪೀಳಿಗೆಗೆ ಶ್ರೀರಾಮನನ್ನು ಜೀವಂತಗೊಳಿಸಿದ್ದವರು ಈಗ ಮತ್ತೆ ರಾಮಾಯಣದ ಜಗತ್ತಿಗೆ ಅಯೋಧ್ಯೆಯ ಮಹಾರಾಜನಾಗಿ ಮರಳುತ್ತಿದ್ದಾರೆ’ ಎಂದು ಕ್ಯಾಪ್ಷನ್ ನೀಡಲಾಗಿದೆ.
ಈ ಪೋಸ್ಟರ್ ಈಗಾಗಲೇ 31 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. ಅರುಣ್ ಗೋವಿಲ್ ಆಯ್ಕೆಯನ್ನು ನೆಟ್ಟಿಗರು ಹಾಗೂ ಅಭಿಮಾನಿಗಳು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಈ ದೃಶ್ಯಕಾವ್ಯದಲ್ಲಿ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಪ್ರಮುಖ ನಟ-ನಟಿಯರು ಅಭಿನಯಿಸುತ್ತಿದ್ದಾರೆ. ಆ ಕಾರಣದಿಂದಲೂ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಸೃಷ್ಟಿ ಆಗಿದೆ.
He once brought Ram to life for a generation. Now, he returns to the world of Ramayana as the King of Ayodhya.
Arun Govil as King Dashrath. 👑 https://t.co/q5wHKNtXMg
— The World Of Ramayana (@WorldOfRamayana) October 7, 2026
ಶ್ರೀರಾಮನಾಗಿ ರಣಬೀರ್ ಕಪೂರ್ ಅವರು ನಟಿಸುತ್ತಿದ್ದಾರೆ. ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಅವರು ಅಭಿನಯಿಸುತ್ತಿದ್ದಾರೆ. ‘ರಾಕಿಂಗ್ ಸ್ಟಾರ್’ ಯಶ್ ಅವರಿಗೆ ರಾವಣನ ಪಾತ್ರವನ್ನು ನೀಡಲಾಗಿದೆ. ಹನುಮಂತನಾಗಿ ಸನ್ನಿ ಡಿಯೋಲ್ ಅವರು ಬಣ್ಣ ಹಚ್ಚಿದ್ದಾರೆ. ಲಕ್ಷ್ಮಣನ ಪಾತ್ರದಲ್ಲಿ ರವಿ ದುಬೆ ಅವರು ನಟಿಸುತ್ತಿದ್ದಾರೆ. ಅನುಪಮ್ ಖೇರ್, ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ ಸಿಂಗ್, ವಿವೇಕ್ ಒಬೆರಾಯ್, ಕುನಾಲ್ ಕಪೂರ್, ಆದಿನಾಥ್ ಕೊಠಾರೆ, ಇಂದಿರಾ ಕೃಷ್ಣನ್, ಲಾರಾ ದತ್ತಾ ಕೂಡ ಪಾತ್ರವರ್ಗದಲ್ಲಿದ್ದಾರೆ.
ಇದನ್ನೂ ಓದಿ: ರಣಬೀರ್ ಕಪೂರ್, ಸಾಯಿ ಪಲ್ಲವಿ ಅಭಿನಯದ ‘ರಾಮಾಯಣ’ ಸಿನಿಮಾ ಸೆಟ್‌ನಲ್ಲಿ ಬೆಂಕಿ ಅವಘಡ
ನಮಿತ್ ಮಲ್ಹೋತ್ರಾ ಅವರ ‘ಪ್ರೈಮ್ ಫೋಕಸ್ ಸ್ಟುಡಿಯೋಸ್’, ‘DNEG’ ಹಾಗೂ ಯಶ್ ಅವರ ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್’ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ. ಹಿಂದಿ, ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರದ ಮೊದಲ ಭಾಗವು 2026ರ ನವೆಂಬರ್ 5ರಂದು ಹಾಗೂ ಎರಡನೇ ಭಾಗವು 2027ರ ದೀಪಾವಳಿ ಹಬ್ಬದ ವೇಳೆಗೆ ವಿಶ್ವದಾದ್ಯಂತ ತೆರೆಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




