ರಣಬೀರ್ ಕಪೂರ್, ಸಾಯಿ ಪಲ್ಲವಿ ಅಭಿನಯದ ‘ರಾಮಾಯಣ’ ಸಿನಿಮಾ ಸೆಟ್‌ನಲ್ಲಿ ಬೆಂಕಿ ಅವಘಡ
ಮುಂಬೈನ ಪ್ರೈಮ್ ಫೋಕಸ್ ಸ್ಟುಡಿಯೋಸ್‌ನಲ್ಲಿ ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ ಸಿನಿಮಾ ಸೆಟ್‌ನ ಟೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಬೆಂಕಿ ನಂದಿಸಲಾಗಿದ್ದು, ಯಾವುದೇ ಗಾಯಗಳಾಗದೆ ದೊಡ್ಡ ಅನಾಹುತ ತಪ್ಪಿದೆ. ನಂತರ ಚಿತ್ರೀಕರಣ ಪುನರಾರಂಭಗೊಂಡಿದೆ. ಅಗ್ನಿ ಅವಘಡದ ವಿಡಿಯೋ ವೈರಲ್ ಆಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..

ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಸೆಟ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಹಾಗೂ ದೊಡ್ಡ ಮಟ್ಟದ ಅನಾಹುತ ತಪ್ಪಿದೆ. ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ ಅಧ್ಯಕ್ಷ ಬಿ.ಎನ್. ತಿವಾರಿ ಅವರು ಈ ಘಟನೆಯನ್ನು ಖಚಿತಪಡಿಸಿದ್ದು, ಇದು ಸಣ್ಣ ಪ್ರಮಾಣದ ಅಗ್ನಿ ಅವಘಡ ಎಂದು ತಿಳಿಸಿದ್ದಾರೆ.
ಮುಂಬೈನ ‘ಪ್ರೈಮ್ ಫೋಕಸ್ ಸ್ಟುಡಿಯೋಸ್’ನಲ್ಲಿ ರಾಮಾಯಣ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಸ್ಟುಡಿಯೋ ಹೊರಗಿನ ಟೆಂಟ್ ಒಂದರಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಜಾಗರೂಕರಾದ ಸಿಬ್ಬಂದಿ ಬೆಂಕಿ ಹೆಚ್ಚು ಹರಡುವ ಮುನ್ನವೇ ಸಂಪೂರ್ಣವಾಗಿ ಹತೋಟಿಗೆ ತಂದಿದ್ದಾರೆ. ಇದೇ ಸ್ಟುಡಿಯೋ ಆವರಣದಲ್ಲಿ ‘ಹಸಲ್’ ಮತ್ತು ‘ಪತಿ ಪತ್ನಿ ಪಂಗಾ’ ಎಂಬ ಟಿವಿ ಶೋಗಳ ಚಿತ್ರೀಕರಣವೂ ನಡೆಯುತ್ತಿತ್ತು. ಬೆಂಕಿ ಹತೋಟಿಗೆ ಬಂದ ನಂತರ ಚಿತ್ರೀಕರಣವನ್ನು ಪುನರಾರಂಭಿಸಲಾಗಿದೆ.
A fire broke out at a temporary shooting set linked to director Nitesh Tiwari’s ‘Ramayana’ at Film City in Goregaon East on Monday evening. According to the BMC Fire Brigade, the blaze was reported at 4:02 pm and brought under control by 4:55 pm. No injuries were reported. https://t.co/4azYGy6KLZ
— Visshal Singh (@VishooSingh) October 5, 2026
ಈ ಬಗ್ಗೆ ಪ್ರತಿಕ್ರಿಯಿಸಿದ ಬಿ.ಎನ್. ತಿವಾರಿ, ‘ಕೆಲ ದಿನಗಳ ಹಿಂದಷ್ಟೇ ಹತ್ತಿರದ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಹೀಗಾಗಿ ಎಲ್ಲಾ ನಿರ್ಮಾಪಕರಿಗೂ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿತ್ತು. ಆದಾಗ್ಯೂ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಆದರೆ, ಮುಂಬರುವ ದಿನಗಳಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ಇರುವಂತೆ ಸಿನಿಮಾ ತಂಡಗಳಿಗೆ ಸೂಚನೆ ನೀಡಲಾಗಿದೆ’ ಎಂದಿದ್ದಾರೆ.
ಇದನ್ನೂ ಓದಿ: ‘ಶ್ರೀರಾಮನನ್ನು ಸಲ್ಮಾನ್, ರಜನಿಕಾಂತ್ ತರ ತೋರಿಸಿದ್ದಾರೆ’: ‘ರಾಮಾಯಣ’ ಸಿನಿಮಾ ವಿರುದ್ಧ ಮುಕೇಶ್ ಖನ್ನಾ ಕಿಡಿ
ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ರಾಮಾಯಣ’ ಸಿನಿಮಾ ಎರಡು ಭಾಗಗಳ ಬೃಹತ್ ಪ್ರಾಜೆಕ್ಟ್ ಆಗಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಅವರು ಶ್ರೀರಾಮನಾಗಿ, ಸಾಯಿ ಪಲ್ಲವಿ ಅವರು ಸೀತೆಯಾಗಿ ಹಾಗೂ ಯಶ್ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನುಳಿದಂತೆ ಹನುಮಂತನಾಗಿ ಸನ್ನಿ ಡಿಯೋಲ್, ಲಕ್ಷ್ಮಣನಾಗಿ ರವಿ ದುಬೆ, ದಶರಥನಾಗಿ ಅರುಣ್ ಗೋವಿಲ್ ಮತ್ತು ಕೈಕೇಯಿ ಪಾತ್ರದಲ್ಲಿ ಲಾರಾ ದತ್ತಾ ಅಭಿನಯಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




