‘ಶ್ರೀರಾಮನನ್ನು ಸಲ್ಮಾನ್, ರಜನಿಕಾಂತ್ ತರ ತೋರಿಸಿದ್ದಾರೆ’: ‘ರಾಮಾಯಣ’ ಸಿನಿಮಾ ವಿರುದ್ಧ ಮುಕೇಶ್ ಖನ್ನಾ ಕಿಡಿ
ನಿಖಿಲ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ಶ್ರೀರಾಮನ ಪಾತ್ರವನ್ನು ಆಕ್ಷನ್ ಹೀರೋನಂತೆ ತೋರಿಸಲಾಗಿದೆ ಎಂದು ಹಿರಿಯ ನಟ ಮುಕೇಶ್ ಖನ್ನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಣಬೀರ್ ಕಪೂರ್ ಅಭಿನಯದ ಈ ಸಿನಿಮಾದಲ್ಲಿ ಅತಿಯಾದ ವಿಎಫ್‌ಎಕ್ಸ್ ಬಳಕೆಯನ್ನು ಪ್ರಶ್ನಿಸಿರುವ ಅವರು, ಶ್ರೀರಾಮನನ್ನು ಸಲ್ಮಾನ್ ಅಥವಾ ರಜನಿಕಾಂತ್ ತರಹ ಬಿಂಬಿಸಲಾಗಿದೆ ಎಂದು ಕಿಡಿಕಾರಿದ್ದಾರೆ.

ಮುಖ್ಯಾಂಶಗಳು
- ‘ರಾಮಾಯಣ' ಚಿತ್ರದ ವಿರುದ್ಧ ಮುಕೇಶ್ ಖನ್ನಾ ಗರಂ
- ಆಕ್ಷನ್ ಹೀರೋ ಆದ್ರಾ ಮರ್ಯಾದಾ ಪುರುಷೋತ್ತಮ?
- ರಣಬೀರ್ ಕಪೂರ್ ಲುಕ್ ಬಗ್ಗೆ ಹಿರಿಯ ನಟನ ಪ್ರಶ್ನೆ
ನಿತೇಶ್ ತಿವಾರಿ ನಿರ್ದೇಶನದ ಬೃಹತ್ ಬಜೆಟ್‌ನ ‘ರಾಮಾಯಣ’ ಚಿತ್ರದ ವಿರುದ್ಧ ಹಿರಿಯ ನಟ ಮುಕೇಶ್ ಖನ್ನಾ ಮತ್ತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಶ್ರೀರಾಮನ ಪಾತ್ರವನ್ನು ಮರ್ಯಾದಾ ಪುರುಷೋತ್ತಮನಂತೆ ತೋರಿಸುವ ಬದಲು ಮಾಸ್ ಆಕ್ಷನ್ ಹೀರೋನಂತೆ ಬಿಂಬಿಸಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ಜೊತೆಗೆ ಸಿನಿಮಾದಲ್ಲಿ ಅತಿಯಾದ ವಿಎಫ್‌ಎಕ್ಸ್ ಬಳಸಿರುವುದನ್ನೂ ಅವರು ತೀವ್ರವಾಗಿ ಪ್ರಶ್ನಿಸಿದ್ದಾರೆ. ಅವರ ಈ ಹೇಳಿಕೆಗಳು ಈಗ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಶಕ್ತಿಮಾನ್ ಖ್ಯಾತಿಯ ಮುಕೇಶ್ ಖನ್ನಾ ಟ್ರೇಲರ್ ಹಾಗೂ ಸಾಹಸ ಸನ್ನಿವೇಶಗಳನ್ನು ಟೀಕಿಸಿದ್ದಾರೆ. ‘ರಣಬೀರ್ ಕಪೂರ್ ಪೋಲಿಸ್ ಅಥವಾ ಆಕ್ಷನ್ ಹೀರೋನಂತೆ ಮರ ಹತ್ತಿ ಬಾಣ ಬಿಡುವುದನ್ನು ನಾನು ಒಪ್ಪುವುದಿಲ್ಲ. ಶ್ರೀರಾಮ ಎಂದಿಗೂ ಹೀಗೆ ಆಕ್ಷನ್ ಮಾಡುತ್ತಿರಲಿಲ್ಲ. ರಾಮಾಯಣ ಹಾಗೂ ರಾಮಲೀಲಾದಲ್ಲಿ ನಾವು ಇಂತಹ ದೃಶ್ಯಗಳನ್ನು ಕಂಡಿಲ್ಲ. ಶ್ರೀರಾಮನನ್ನು ಸಲ್ಮಾನ್ ಖಾನ್, ರಜನಿಕಾಂತ್ ಅಥವಾ ಅಮಿತಾಭ್ ಬಚ್ಚನ್ ತರಹ ಬದಲಾಯಿಸಿದ್ದಾರೆ’ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಶ್ರೀರಾಮ ಸದಾ ಶಾಂತ ಸ್ವರೂಪಿ ಹಾಗೂ ಮರ್ಯಾದಾ ಪುರುಷೋತ್ತಮ. ಶ್ರೀರಾಮ ಸಮುದ್ರಕ್ಕೂ ಕೈಜೋಡಿಸಿ ಪ್ರಾರ್ಥಿಸುತ್ತಿದ್ದನೇ ಹೊರತು ಶಕ್ತಿ ಪ್ರದರ್ಶನ ಮಾಡುತ್ತಿರಲಿಲ್ಲ. ಆತನನ್ನು ಹಾಲಿವುಡ್ ಆ್ಯಕ್ಷನ್ ಹೀರೋ ತರಹ ತೋರಿಸಿದರೆ ಜನ ಹೇಗೆ ಸ್ವೀಕರಿಸುತ್ತಾರೆ? ರಾಮನೇ ಹೀಗೆ ಹೋರಾಡಿದ್ದರೆ ವಾನರ ಸೇನೆಯ ಅಗತ್ಯವೇನಿತ್ತು’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಸಿನಿಮಾದಲ್ಲಿನ ಅತಿಯಾದ ವಿಎಫ್‌ಎಕ್ಸ್ ಹಾಗೂ ಗ್ರಾಫಿಕ್ಸ್ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಈ ರೀತಿಯ ಅತಿಯಾದ ತಂತ್ರಜ್ಞಾನ ಹೊಂದಿರುವ ಸಿನಿಮಾಗಳು ವಿದೇಶಗಳಲ್ಲಿ ಉತ್ತಮ ಗಳಿಕೆ ಮಾಡಬಹುದು. ಆದರೆ ಭಾರತೀಯ ಪ್ರೇಕ್ಷಕರು ಶ್ರೀರಾಮನನ್ನು ಭಕ್ತಿಯಿಂದ ಕಾಣುತ್ತಾರೆ. ಇಲ್ಲಿ ತಾಂತ್ರಿಕತೆಗಿಂತ ಜನರ ನಂಬಿಕೆ ಮುಖ್ಯ. ಹಿಂದೆ ಅನಿಮಲ್ ಸಿನಿಮಾದಲ್ಲಿ ಕ್ರೂರ ಪಾತ್ರ ಮಾಡಿದ್ದ ರಣಬೀರ್ ಅವರ ಆ ಇಮೇಜ್ ರಾಮಾಯಣದ ಮೇಲೆ ಕೆಟ್ಟ ಪರಿಣಾಮ ಬೀರಬಹುದು’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ‘ಸಿಗ್ಮಾ ಚಿತ್ರ ನೋಡಿ ಅಪ್ಪ ವಿಜಯ್ ಖಂಡಿತ ಹೆಮ್ಮೆಪಡುತ್ತಾರೆ’: ಮಗ ಜೇಸನ್ ಸಂಜಯ್ ವಿಶ್ವಾಸ
ನಿತೇಶ್ ತಿವಾರಿ ನಿರ್ದೇಶಿಸುತ್ತಿರುವ ಈ ಬೃಹತ್ ರಾಮಾಯಣ ಎರಡು ಭಾಗಗಳಲ್ಲಿ ಮೂಡಿಬರಲಿದೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ಅಭಿನಯಿಸುತ್ತಿದ್ದಾರೆ. ಸನ್ನಿ ಡಿಯೋಲ್ ಹನುಮಂತನಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ಕಾಣಿಸಿಕೊಳ್ಳಲಿದ್ದಾರೆ. ನಮಿತ್ ಮಲ್ಹೋತ್ರಾ ಮತ್ತು ಯಶ್ ಸುಮಾರು 4,000 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಬಿಗ್ ಬಜೆಟ್ ಸಿನಿಮಾ ನಿರ್ಮಿಸುತ್ತಿದ್ದು, ಹ್ಯಾನ್ಸ್ ಝಿಮ್ಮರ್ ಹಾಗೂ ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




