ಅಶ್ಲೀಲ ಎಐ ಕಂಟೆಂಟ್ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನಟಿ ಕಂಗನಾ ರಣಾವತ್

ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ಎಐ ಸೃಷ್ಟಿತ ಅಶ್ಲೀಲ ಹಾಗೂ ನಕಲಿ ವಿಷಯಗಳ ವಿರುದ್ಧ ನಟಿ ಮತ್ತು ಸಂಸದೆ ಕಂಗನಾ ರಣಾವತ್ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ವ್ಯಕ್ತಿತ್ವ ಹಕ್ಕುಗಳ ರಕ್ಷಣೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಪ್ರತಿವಾದಿಗಳಿಗೆ ಸಮನ್ಸ್ ಜಾರಿ ಮಾಡಿದೆ.

ಅಶ್ಲೀಲ ಎಐ ಕಂಟೆಂಟ್ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನಟಿ ಕಂಗನಾ ರಣಾವತ್
Kangana Ranaut
Image Credit source: instagram/kanganaranaut

Updated on: Oct 08, 2026 | 9:41 PM

ಇಂಟರ್ನೆಟ್‌ನಲ್ಲಿ ತಮ್ಮ ಹೆಸರಿನಲ್ಲಿ ಹರಿದಾಡುತ್ತಿರುವ ಎಐ ಆಧಾರಿತ ಅಶ್ಲೀಲ ಹಾಗೂ ಸುಳ್ಳು ವಿಷಯಗಳನ್ನು ತಕ್ಷಣವೇ ತೆಗೆದುಹಾಕುವಂತೆ ಕೋರಿ ಬಾಲಿವುಡ್ ನಟಿ ಹಾಗೂ ಮಂಡಿ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಇಂತಹ ನಕಲಿ ಕಂಟೆಂಟ್‌ಗಳು ತಮ್ಮ ವೈಯಕ್ತಿಕ ಗೌರವಕ್ಕೆ ಧಕ್ಕೆ ತರುತ್ತಿದ್ದು, ವ್ಯಕ್ತಿತ್ವದ ಹಕ್ಕುಗಳನ್ನು ಉಲ್ಲಂಘಿಸುತ್ತಿವೆ ಎಂದು ಅವರು ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಕಂಗನಾ ರಣಾವತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಕಾಸ್ ಮಹಾಜನ್ ಅವರಿದ್ದ ಪೀಠವು, ಪ್ರತಿವಾದಿಗಳಿಗೆ ಸಮನ್ಸ್ ಜಾರಿಗೊಳಿಸಿದ್ದು, ಈ ವಿಚಾರದಲ್ಲಿ ಶೀಘ್ರದಲ್ಲೇ ಮಧ್ಯಂತರ ಆದೇಶ ಹೊರಡಿಸುವುದಾಗಿ ತಿಳಿಸಿದೆ. ತಮ್ಮ ವಿರೋಧ ಇರುವುದು ಮೀಮ್ಸ್‌ಗಳಿಗಲ್ಲ, ಅಶ್ಲೀಲ ವಿಷಯಗಳಿಗೆ ಮಾತ್ರ ಎಂದು ನಟಿಯ ಪರ ವಕೀಲರು ಹೇಳಿದ್ದಾರೆ.

ಕಂಗನಾ ಪರ ವಾದ ಮಂಡಿಸಿದ ವಕೀಲರು, ‘ಸಾಮಾಜಿಕ ಜಾಲತಾಣಗಳಲ್ಲಿರುವ ಲೈಂಗಿಕ, ಅಶ್ಲೀಲ, ನಕಲಿ ಸುದ್ದಿ ಹಾಗೂ ಎಐ ಮೂಲಕ ಕಂಗನಾ ಅವರದ್ದೇ ಹೇಳಿಕೆ ಎಂಬಂತೆ ಬಿಂಬಿಸಲಾಗುತ್ತಿರುವ ವಿಷಯಗಳ ವಿರುದ್ಧ ಮಾತ್ರವೇ ನಾವು ರಿಲೀಫ್ ಕೋರುತ್ತಿದ್ದೇವೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ವ್ಯಂಗ್ಯಚಿತ್ರ ಅಥವಾ ಮೀಮ್ಸ್‌ ವಿರುದ್ಧ ನಾವು ಯಾವುದೇ ಕ್ರಮಕ್ಕೆ ಮನವಿ ಮಾಡುತ್ತಿಲ್ಲ’ ಎಂದು ಕೋರ್ಟ್‌ಗೆ ಸ್ಪಷ್ಟಪಡಿಸಿದ್ದಾರೆ.

ತಮ್ಮ ವ್ಯಕ್ತಿತ್ವ ಹಕ್ಕುಗಳ ರಕ್ಷಣೆಗಾಗಿ ಮತ್ತು ಎಐ ಆಧಾರಿತ ದುರ್ಬಳಕೆಯ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರುತ್ತಿರುವ ಪ್ರಮುಖರಲ್ಲಿ ಕಂಗನಾ ರಣಾವತ್ ಅವರಷ್ಟೇ ಮೊದಲಲ್ಲ. ಇತ್ತೀಚಿನ ದಿನಗಳಲ್ಲಿ ಚಿತ್ರರಂಗ ಹಾಗೂ ರಾಜಕೀಯ ರಂಗದ ಹಲವು ಪ್ರಮುಖ ಗಣ್ಯರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹಲವು ಸೆಲೆಬ್ರಿಟಿಗಳು ಈ ರೀತಿ ಕೋರ್ಟ್ ಮೊರೆ ಹೋಗುತ್ತಿದ್ದಾರೆ.

ಇದನ್ನೂ ಓದಿ: ‘ಪೌರಕಾರ್ಮಿಕನ ಕೆಲಸವೂ ನಿಮಗ ಸಿಗಲ್ಲ’: ನಟಿ ರಾಖಿ ಸಾವಂತ್ ಕಾಲೆಳೆದ ಕಂಗನಾ ರಣಾವತ್

ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಬಚ್ಚನ್, ಸಲ್ಮಾನ್ ಖಾನ್, ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್, ಪೋಡ್‌ಕಾಸ್ಟರ್ ರಾಜ್ ಶಮಾನಿ, ಕ್ರಿಕೆಟಿಗ ಅಭಿಷೇಕ್ ಶರ್ಮಾ ಸೇರಿದಂತೆ ಹಲವರು ಕೋರ್ಟ್‌ ಮೆಟ್ಟಿಲೇರಿದ್ದರು. ಈ ಎಲ್ಲಾ ಗಣ್ಯರ ಅರ್ಜಿಯನ್ನು ಆಲಿಸಿದ್ದ ದೆಹಲಿ ಹೈಕೋರ್ಟ್, ಅವರಿಗೆ ಮಧ್ಯಂತರ ಆದೇಶದ ಮೂಲಕ ಅವರ ಚಿತ್ರ, ಧ್ವನಿ ಹಾಗೂ ವ್ಯಕ್ತಿತ್ವದ ಅಕ್ರಮ ಬಳಕೆಗೆ ತಡೆ ನೀಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us