
ಹಿರಿಯ ನಟ ನಾನಾ ಪಾಟೇಕರ್ ಇತ್ತೀಚೆಗೆ ನಿಧನರಾದರು. ಅವರ ನೆನಪುಗಳನ್ನು ಮೆಲುಕು ಹಾಕಲಾಗುತ್ತಿದೆ. ಖ್ಯಾತ ನಟ ಶಾರುಖ್ ಖಾನ್ ಅವರ ಆರಂಭಿಕ ದಿನಗಳಲ್ಲಿ ನಾನಾ ಪಾಟೇಕರ್ ಸಹಾಯ ಮಾಡಿದ್ದರು. ಆ ಬಗ್ಗೆ ಶಾರುಖ್ ಖಾನ್ ಮಾತನಾಡಿದ್ದ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಈಗ ಭಾರೀ ವೈರಲ್ ಆಗಿದೆ. ಶಾರುಖ್ ಖಾನ್ ಅವರು ಜೈಲು ಸೇರಿದ್ದಾಗ ಅವರನ್ನು ಬಿಡಿಸಿಕೊಂಡು ಬಂದಿದ್ದು ಇದೇ ನಾನಾ ಪಾಟೇಕರ್!
ಆರಂಭದ ದಿನಗಳಲ್ಲಿ ಮುಂಬೈಗೆ ಹೊಸಬರಾಗಿದ್ದ ಶಾರುಖ್ ಖಾನ್, 1992ರ ‘ರಾಜು ಬನ್ ಗಯಾ ಜಂಟಲ್ಮನ್’ ಚಿತ್ರದಲ್ಲಿ ನಾನಾ ಪಾಟೇಕರ್ ಜೊತೆಗೆ ನಟಿಸಿದ್ದರು. ವೃತ್ತಿಜೀವನದ ಆರಂಭದಲ್ಲಿ ಶಾರುಖ್ ಖಾನ್ ಮಾಡಿದ ತಪ್ಪೊಂದಕ್ಕೆ ಜೈಲು ಸೇರಬೇಕಾಗಿ ಬಂದಿತ್ತು. ಆ ಸಂದರ್ಭದಲ್ಲಿ ನಾನಾ ಪಾಟೇಕರ್ ಅವರು ಶಾರುಖ್ ಅವರನ್ನು ಜೈಲಿನಿಂದ ಬಿಡಿಸಲು ನೆರವಾಗಿದ್ದರು.
ತೇಹಲ್ಕಾ ಅವರ ‘ಥಿಂಕ್ 2012’ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶಾರುಖ್ ಖಾನ್, 1990ರ ದಶಕದ ಆರಂಭದಲ್ಲಿ ನಡೆದ ಘಟನೆಯೊಂದನ್ನು ಬಿಚ್ಚಿಟ್ಟಿದ್ದರು. ಹೊಸದಾಗಿ ಮದುವೆಯಾಗಿದ್ದ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರನ್ನು ಗುರಿಯಾಗಿಸಿ ಮ್ಯಾಗಜೀನ್ ಒಂದರಲ್ಲಿ ನಟಿಯೊಬ್ಬರ ಜೊತೆಗಿನ ಸಂಬಂಧದ ಬಗ್ಗೆ ವರದಿ ಪ್ರಕಟವಾಗಿತ್ತು. ಇದರಿಂದ ಗೌರಿ ಖಾನ್ ಆತಂಕಗೊಂಡರೆ, ಶಾರುಖ್ ಖಾನ್ ಆಕ್ರೋಶಗೊಂಡಿದ್ದರು.
ಆ ಕೋಪದಲ್ಲೇ ಆ ಪತ್ರಕರ್ತರ ಮನೆಗೆ ತೆರಳಿದ ಶಾರುಖ್, ತಮ್ಮ ಮಾವ (ಸೇನಾಧಿಕಾರಿಯಾಗಿದ್ದವರು) ಉಡುಗೊರೆಯಾಗಿ ನೀಡಿದ್ದ ಕತ್ತಿಯನ್ನು ಜೊತೆಗೆ ತೆಗೆದುಕೊಂಡು ಹೋಗಿದ್ದರು. ‘ನಾನು ತುಂಬಾ ತಪ್ಪಾಗಿ ವರ್ತಿಸಿದೆ, ಜೈಲು ಸೇರಬೇಕಾಯಿತು. ನನ್ನ ಮಾವ ಪಂಜಾಬಿ ಸಂಪ್ರದಾಯದಂತೆ ಕತ್ತಿ ನೀಡಿದ್ದರು. ‘ಮಗನೇ, ನೀನು ನನ್ನ ಮಗಳನ್ನು ರಕ್ಷಿಸಬೇಕು’ ಎಂದಿದ್ದರು. ನಾನು ಯೋಚಿಸದೆ ಆ ಕತ್ತಿಯನ್ನು ತೆಗೆದುಕೊಂಡು ಪತ್ರಕರ್ತರ ಮನೆಗೆ ಹೋದೆ’ ಎಂದು ಶಾರುಖ್ ಆ ಘಟನೆಯನ್ನು ಮೆಲುಕು ಹಾಕಿದ್ದರು.
ಪತ್ರಕರ್ತರ ಮನೆಯಲ್ಲಿದ್ದವರನ್ನು ಬೆದರಿಸಿ, ಯುವಕನೊಬ್ಬನನ್ನು ಗಾಯಗೊಳಿಸಿದ್ದ ಶಾರುಖ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ನಂತರ ‘ಕಭಿ ಹಾ ಕಭಿ ನಾ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾಗ ಪೊಲೀಸರು ಸೆಟ್ಗೆ ಬಂದು ಶಾರುಖ್ ಅವರನ್ನು ವಶಕ್ಕೆ ಪಡೆದಿದ್ದರು. ಸಂಜೆ 6 ಗಂಟೆ ದಾಟಿದ್ದರಿಂದ ಅಂದು ಜಾಮೀನು ಸಿಕ್ಕಿರಲಿಲ್ಲ. ಆ ಕಠಿಣ ಪರಿಸ್ಥಿತಿಯಲ್ಲಿ ನಾನಾ ಪಾಟೇಕರ್ ಅವರು ಸಹಾಯಕ್ಕೆ ಬಂದಿದ್ದರು.
ಇದನ್ನೂ ಓದಿ: ಅಭಿಮಾನಿಗಳ ದರ್ಶನಕ್ಕಾಗಿ ಶಾರುಖ್ ಖಾನ್ ಮನೆ ಮುಂದೆ ನಿರ್ಮಾಣವಾಗುತ್ತಿದೆ ಹೊಸ ಗ್ಯಾಲರಿ
‘ನಾನಾ ಪಾಟೇಕರ್ ಕೊನೆಗೆ ನನ್ನನ್ನು ಜೈಲಿನಿಂದ ಹೊರಬರಲು ತುಂಬಾ ಸಹಾಯ ಮಾಡಿದರು. ವಾರಾಂತ್ಯದಲ್ಲಿ ಸಂಜೆಯ ನ್ಯಾಯಾಲಯದಿಂದ ಜಾಮೀನು ಪಡೆಯಲು ಅವರು ನೆರವಾದರು. ಅಂದಿನಿಂದ ನಾನು ನನ್ನ ನಡವಳಿಕೆಯನ್ನು ತಿದ್ದಿಕೊಂಡಿದ್ದೇನೆ’ ಎಂದು ಶಾರುಖ್ ಖಾನ್ ತಿಳಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.