
ಹಿಂದಿ ಚಿತ್ರರಂಗಕ್ಕೆ ‘ಪಠಾಣ್’ (Pathaan Movie) ಸಿನಿಮಾದಿಂದ ಹೊಸ ಚೈತನ್ಯ ಸಿಕ್ಕಿದೆ. 2022ರಲ್ಲಿ ಸೊರಗಿದ್ದ ಬಾಲಿವುಡ್ ಬಾಕ್ಸ್ ಆಫೀಸ್ 2023ರ ಆರಂಭದಲ್ಲೇ ಅಬ್ಬರಿಸಿದೆ. ನಟ ಶಾರುಖ್ ಖಾನ್ ಅಭಿನಯದ ‘ಪಠಾಣ್’ ಸಿನಿಮಾವನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ವಿಶ್ವಾದ್ಯಂತ 700 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ (Pathaan Box Office Collection) ಮಾಡಿ ಈ ಸಿನಿಮಾ ಮುನ್ನುಗ್ಗುತ್ತಿದೆ. ಎರಡನೇ ವೀಕೆಂಡ್ನಲ್ಲೂ ಅನೇಕ ಕಡೆಗಳಲ್ಲಿ ‘ಪಠಾಣ್’ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಆದರೆ ಕೆಲವರಿಗೆ ಈ ಸಿನಿಮಾ ಇಷ್ಟ ಆಗಿಲ್ಲ. ‘ನನಗೆ ಪಠಾಣ್ ಚಿತ್ರ ಇಷ್ಟ ಆಗಿಲ್ಲ’ ಎಂದು ಚಿಕ್ಕ ಬಾಲಕಿಯೊಬ್ಬಳು ನೇರವಾಗಿ ಹೇಳಿದ್ದಾಳೆ. ಆ ವಿಡಿಯೋ ಟ್ವಿಟರ್ನಲ್ಲಿ ವೈರಲ್ ಆಗಿದೆ. ಅದನ್ನು ನೋಡಿರುವ ಶಾರುಖ್ ಖಾನ್ (Shah Rukh Khan) ಅವರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಅಹಾನಾ ಎಂಬ ಬಾಲಕಿ ‘ಪಠಾಣ್’ ಸಿನಿಮಾ ವೀಕ್ಷಿಸಿದ್ದಾಳೆ. ಚಿತ್ರ ನೋಡಿದ ಬಳಿಕ ಆಕೆಯ ಪಾಲಕರು ಅವಳ ಅಭಿಪ್ರಾಯ ಕೇಳಿದ್ದಾರೆ. ನಿನಗೆ ಸಿನಿಮಾ ಇಷ್ಟ ಆಯ್ತಾ ಎಂದು ಪ್ರಶ್ನಿಸಿದ್ದಕ್ಕೆ ಆಕೆ ನೇರವಾಗಿ ‘ಇಲ್ಲ’ ಎಂದು ಉತ್ತರಿಸಿದ್ದಾಳೆ. ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡು ಶಾರುಖ್ ಖಾನ್ಗೆ ಟ್ಯಾಗ್ ಮಾಡಲಾಗಿದೆ. ಅದಕ್ಕೆ ಶಾರುಖ್ ನೀಡಿದ ಉತ್ತರ ಎಲ್ಲರ ಗಮನ ಸೆಳೆಯುತ್ತಿದೆ.
‘ಓಹ್.. ಇನ್ನೂ ಕಷ್ಟಪಟ್ಟು ಕೆಲಸ ಮಾಡಬೇಕು ಈಗ. ಚಿಕ್ಕ ವಯಸ್ಸಿನ ವೀಕ್ಷಕರು ನಿರಾಶರಾಗಬಾರದು. ದೇಶದ ಯುವ ಜನತೆಯ ವಿಷಯ ಇದು. ಆಕೆಗೆ ಡಿಡಿಎಲ್ಜೆ ಸಿನಿಮಾ ತೋರಿಸಿ ಪ್ಲೀಸ್. ಆಕೆ ರೊಮ್ಯಾಂಟಿಕ್ ಚಿತ್ರ ಇಷ್ಟಪಡುವ ಹುಡುಗಿ ಎನಿಸುತ್ತದೆ’ ಎಂದು ಶಾರುಖ್ ಖಾನ್ ಅವರು ಟ್ವೀಟ್ ಮಾಡಿದ್ದಾರೆ.
‘ಪಠಾಣ್’ ಸಿನಿಮಾದ ಗೆಲುವಿನ ಖುಷಿಯಲ್ಲಿರುವ ಶಾರುಖ್ ಖಾನ್ ಅವರು ಅಭಿಮಾನಿಗಳ ಜೊತೆ ಟ್ವಿಟರ್ನಲ್ಲಿ ಪ್ರಶ್ನೋತ್ತರ ನಡೆಸಿದ್ದಾರೆ. ಈ ವೇಳೆ ಪಠಾಣ್ ಸಿನಿಮಾದ ನಿಜವಾದ ಕಲೆಕ್ಷನ್ ಬಗ್ಗೆ ವ್ಯಕ್ತಿಯೊಬ್ಬರು ಪ್ರಶ್ನೆ ಎತ್ತಿದ್ದಾರೆ. ಅದಕ್ಕೆ ಶಾರುಖ್ ಖಾನ್ ನೀಡಿದ ಉತ್ತರ ಎಲ್ಲರ ಗಮನ ಸೆಳೆದಿದೆ.
‘ಪಠಾಣ್ ಸಿನಿಮಾದ ಕಲೆಕ್ಷನ್ ಇಷ್ಟೇನಾ’ ಎಂದು ರಾಜ್ ಶ್ರೀವಾಸ್ತವ ಎಂಬ ವ್ಯಕ್ತಿ ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಶಾರುಖ್ ಖಾನ್ ಅವರು ಊಹಿಸಲಾಗದಂತಹ ಉತ್ತರ ನೀಡಿದ್ದಾರೆ. ‘5 ಸಾವಿರ ಕೋಟಿ ಪ್ರೀತಿ. 3 ಸಾವಿರ ಕೋಟಿ ಮೆಚ್ಚುಗೆ. 3250 ಕೋಟಿ ಅಪ್ಪುಗೆ. 2 ಬಿಲಿಯನ್ ನಗು.. ಇನ್ನೂ ಎಣಿಸಲಾಗುತ್ತಿದೆ. ನಿನ್ನ ಅಕೌಂಟೆಂಟ್ ಏನು ಹೇಳುತ್ತಿದ್ದಾರೆ?’ ಎಂದು ಶಾರುಖ್ ಖಾನ್ ಟ್ವೀಟ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.