ಸೋನಾಕ್ಷಿ ಸಿನ್ಹಾ ದೂರಿನ ಮೇರೆಗೆ ದೆಹಲಿಯಲ್ಲಿ ಬಂಧಿತನಾಗಿದ್ದ ಯುವಕನನ್ನು ಬಿಡುಗಡೆ ಮಾಡಿದ ಮುಂಬೈ ಕೋರ್ಟ್

ನಟಿ ಸೋನಾಕ್ಷಿ ಸಿನ್ಹಾ ಅವರು ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸುವಾಗ ಪೊಲೀಸರು ಸೂಕ್ತ ಕಾನೂನು ಪಾಲಿಸಿಲ್ಲ. ‘ನಿಯಮಗಳನ್ನು ಗಾಳಿಗೆ ತೂರಿ ವ್ಯಕ್ತಿಯನ್ನು ಬಂಧಿಸಿ ಕಸ್ಟಡಿಯಲ್ಲಿ ಇರಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸದ್ಯಕ್ಕೆ ಬಾಂದ್ರಾ ಪೊಲೀಸರು ತಮ್ಮ ತನಿಖೆಯನ್ನು ಮುಂದುವರಿಸಿದ್ದಾರೆ.

ಸೋನಾಕ್ಷಿ ಸಿನ್ಹಾ ದೂರಿನ ಮೇರೆಗೆ ದೆಹಲಿಯಲ್ಲಿ ಬಂಧಿತನಾಗಿದ್ದ ಯುವಕನನ್ನು ಬಿಡುಗಡೆ ಮಾಡಿದ ಮುಂಬೈ ಕೋರ್ಟ್
Sonakshi Sinha

Updated on: Nov 15, 2026 | 12:37 PM

ತಮ್ಮ ಫೋಟೋಗಳನ್ನು ಆಕ್ಷೇಪಾರ್ಹವಾಗಿ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ ಎಂದು ಆರೋಪಿಸಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ನೀಡಿದ್ದ ದೂರಿನ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಬಾಂದ್ರಾ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದ ಆರ್ಯನ್ ದೀಪಕ್ ಜೈನ್ ಎಂಬ ಯುವಕನನ್ನು ಬಿಡುಗಡೆ ಮಾಡುವಂತೆ ಮುಂಬೈ ನ್ಯಾಯಾಲಯ ಆದೇಶಿಸಿದೆ. ಬಂಧನದ ವೇಳೆ ಪೊಲೀಸರು ಕಾನೂನು ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ನ್ಯಾಯಾಲಯ ಈ ತೀರ್ಪು ನೀಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಮಾರ್ಫ್ ಮಾಡಿದ ತಮ್ಮ ಫೋಟೋಗಳು ವೈರಲ್ ಆಗುತ್ತಿರುವುದನ್ನು ಗಮನಿಸಿದ ನಟಿ ಸೋನಾಕ್ಷಿ ಸಿನ್ಹಾ, ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ದೆಹಲಿಯ ಶಹದಾರಾದ ಜಗತ್‌ಪುರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಿಗ್ಗೆ 10:11ರ ಸುಮಾರಿಗೆ ಆರ್ಯನ್ ದೀಪಕ್ ಜೈನ್‌ನನ್ನು ಬಂಧಿಸಿ, ವಿಮಾನದ ಮೂಲಕ ನೇರವಾಗಿ ಮುಂಬೈಗೆ ಕರೆತಂದಿದ್ದರು.

Loading...

ಮಾರ್ಫ್ ಫೋಟೋಗಳನ್ನು ಸೃಷ್ಟಿಸಲು ಮತ್ತು ಹಂಚಿಕೊಳ್ಳಲು ಬಳಸಲಾದ ಎಲೆಕ್ಟ್ರಾನಿಕ್ ಸಾಧನವನ್ನು ಪತ್ತೆಹಚ್ಚಲು ಆರೋಪಿಯನ್ನು 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಬಾಂದ್ರಾ ಪೊಲೀಸರು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಬಂಧನ ಪ್ರಕ್ರಿಯೆಯಲ್ಲಿನ ಲೋಪಗಳ ಬಗ್ಗೆ ಪೊಲೀಸರನ್ನು ತೀವ್ರವಾಗಿ ಪ್ರಶ್ನಿಸಿದೆ.

ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಿದ ಬಳಿಕ ಅಲ್ಲಿನ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸದೆ ನೇರವಾಗಿ ಮುಂಬೈಗೆ ಕರೆತಂದಿದ್ದೇಕೆ ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಇದಕ್ಕೆ ಸಮರ್ಪಕ ಕಾರಣ ನೀಡುವಲ್ಲಿ ಪೊಲೀಸರು ವಿಫಲರಾದರು. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ಬಂಧನದ ಮಾರ್ಗಸೂಚಿಗಳನ್ನು ಪಾಲಿಸಲಾಗಿದೆಯೇ ಎಂದು ನ್ಯಾಯಾಲಯ ಕೇಳಿದೆ. ಈ ಪ್ರಕರಣದ ಅಪರಾಧಗಳಿಗೆ ಗರಿಷ್ಠ 7 ವರ್ಷಗಳವರೆಗೆ ಶಿಕ್ಷೆ ಇರುವುದರಿಂದ, BNSS ಸೆಕ್ಷನ್ 35(1)(b) ಅಡಿಯಲ್ಲಿ ಬಂಧನ ಏಕೆ ಅಗತ್ಯ ಎಂಬುದನ್ನು ತನಿಖಾಧಿಕಾರಿ ಲಿಖಿತವಾಗಿ ದಾಖಲಿಸುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: ಸೋನಾಕ್ಷಿ ಸಿನ್ಹಾ ವಿರುದ್ಧ ಕಿಡಿಕಾರಿದ ಕಂಗನಾ ರಣಾವತ್; ಖಾರದ ಮಾತುಗಳಲ್ಲಿ ಟೀಕೆ

ಆರ್ಯನ್ ಪರ ವಕೀಲರಾದ ಅಮನ್ ಶಾಹಿ, ಪ್ರಶಾಂತ್ ತ್ರಿವೇದಿ ಮತ್ತು ಆದಿತ್ಯ ಜೈನ್ ಅವರು ಬಂಧನದ ಕಾನೂನುಬದ್ಧತೆಯನ್ನು ಪ್ರಶ್ನಿಸಿದರು. ಬಂಧನಕ್ಕೂ ಮುನ್ನ ಪೊಲೀಸರು ಕಡ್ಡಾಯ ನೋಟಿಸ್ ನೀಡಿಲ್ಲ ಹಾಗೂ ಬಂಧನಕ್ಕೆ ಕಾರಣವನ್ನೂ ತಿಳಿಸಿಲ್ಲ ಎಂದು ವಾದಿಸಿದರು. ಅಲ್ಲದೆ, ದೂರುದಾರರ ಪ್ರಭಾವಕ್ಕೆ ಒಳಗಾಗಿ ಪೊಲೀಸರು ತರಾತುರಿಯಲ್ಲಿ ಈ ಕ್ರಮ ಕೈಗೊಂಡಿದ್ದಾರೆ ಎಂದು ಆರೋಪಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us