
ನಟ ಶಾರುಖ್ ಖಾನ್ (Shah Rukh Khan) ಅವರು ಬಾಕ್ಸ್ ಆಫೀಸ್ ಕಿಂಗ್ ಎಂಬುದು ಸಾಬೀತಾಗಿದೆ. ಈ ವರ್ಷ ಅವರ ಎರಡು ಸಿನಿಮಾಗಳು (ಪಠಾಣ್, ಜವಾನ್) ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ಹಾಗಂತ ಅವರೊಬ್ಬರೇ ಇಂಥ ಸಾಧನೆ ಮಾಡಿರುವುದಲ್ಲ. ಬಾಲಿವುಡ್ ನಟ ಸನ್ನಿ ಡಿಯೋಲ್ ಕೂಡ ಈ ವರ್ಷ ತಮ್ಮ ಸಾಮರ್ಥ್ಯ ಏನು ಎಂಬುದು ತೋರಿಸಿದ್ದಾರೆ. ಅವರು ನಟಿಸಿದ ‘ಗದರ್ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಮಾಯಿ ಮಾಡಿದೆ. ಅಮೀಷಾ ಪಾಟೇಲ್, ಸನ್ನಿ ಡಿಯೋಲ್ (Sunny Deol) ನಟನೆಯ ಈ ಸಿನಿಮಾಗೆ ಜನರು ಮನ ಸೋತಿದ್ದಾರೆ. ‘ಜವಾನ್’ ಸಿನಿಮಾದ ಅಬ್ಬರದ ನಡುವೆಯೂ ‘ಗದರ್ 2’ ಹವಾ ಮುಂದುವರಿದಿದೆ. ಅಚ್ಚರಿ ಎಂದರೆ ಭಾರತದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾ ಎಂಬ ಖ್ಯಾತಿ ‘ಗದರ್ 2’ (Gadar 2) ಚಿತ್ರಕ್ಕಿದೆ. ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾವನ್ನೂ ಈ ಚಿತ್ರ ಮೀರಿಸಿದೆ. ಆ ಬಗ್ಗೆ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಭಾರತದ ಬಾಕ್ಸ್ ಆಫೀಸ್ನಲ್ಲಿ ‘ಪಠಾಣ್’ ಸಿನಿಮಾ (ಹಿಂದಿ, ತೆಲುಗು ತಮಿಳು ವರ್ಷನ್ ಸೇರಿ) ಒಟ್ಟು 543 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕೇವಲ ಹಿಂದಿ ವರ್ಷನ್ನಿಂದ ಈ ಸಿನಿಮಾ ಗಳಿಸಿದ್ದ 524.53 ಕೋಟಿ ರೂಪಾಯಿ. ಈ ಮೊತ್ತವನ್ನು ‘ಗದರ್ 2’ ಸಿನಿಮಾದ ಹಿಂದಿ ವರ್ಷನ್ ಗಳಿಕೆ ಹಿಂದಿಕ್ಕಿದೆ. ‘ಗದರ್ 2’ ಸಿನಿಮಾಗೆ 524.75 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಆ ಮೂಲಕ ಭಾರತದಲ್ಲಿ ಅತಿ ಹೆಚ್ಚು ಕಮಾಯಿ ಮಾಡಿದ ಹಿಂದಿ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ. ಇದು ಸನ್ನಿ ಡಿಯೋಲ್ ಅಭಿಮಾನಿಗಳಿಗೆ ಖುಷಿ ನೀಡಿದೆ.
‘ಗದರ್ 2’ ಸಿನಿಮಾಗೆ ಅನಿಲ್ ಶರ್ಮಾ ನಿರ್ದೇಶನ ಮಾಡಿದ್ದಾರೆ. ಆಗಸ್ಟ್ 11ರಂದು ಬಿಡುಗಡೆ ಆದ ಈ ಸಿನಿಮಾ ಈಗಲೂ ಕೆಲವು ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. 7ನೇ ವೀಕೆಂಡ್ನಲ್ಲೂ ಈ ಸಿನಿಮಾ 2.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆ ಮೂಲಕ ಇನ್ನೂ ಜನರು ಈ ಚಿತ್ರವನ್ನು ನೋಡುತ್ತಿದ್ದಾರೆ ಎಂಬುದು ಸಾಬೀತಾಗಿದೆ. ನಟಿ ಅಮೀಷಾ ಪಟೇಲ್ ಅವರಿಗೂ ಈ ಚಿತ್ರದಿಂದ ಭರ್ಜರಿ ಗೆಲುವು ಸಿಕ್ಕಿದೆ. ಹಲವು ವರ್ಷಗಳಿಂದ ನಿರೀಕ್ಷಿತ ಮಟ್ಟದ ಗೆಲುವು ಕಾಣದೇ ಮಂಕಾಗಿದ್ದ ಸನ್ನಿ ಡಿಯೋಲ್ ಅವರು ಈ ಚಿತ್ರದಿಂದ ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳಿದ್ದಾರೆ.
ಸನ್ನಿ ಡಿಯೋಲ್ ಬಳಿಕ ಅಬ್ಬರಿಸಲು ಸಜ್ಜಾದ ಬಾಬಿ ಡಿಯೋಲ್; ‘ಅನಿಮಲ್’ ಪೋಸ್ಟರ್ ವೈರಲ್
ಸನ್ನಿ ಡಿಯೋಲ್ ಅವರು ಸಂಸದ ಕೂಡ ಹೌದು. ಬಹುವರ್ಷಗಳ ಬಳಿಕ ಅವರಿಗೆ ಚಿತ್ರರಂಗದಲ್ಲಿ ಯಶಸ್ಸು ಸಿಕ್ಕಿರುವುದರಿಂದ ರಾಜಕೀಯಕ್ಕಿಂತಲೂ ಹೆಚ್ಚಾಗಿ ಸಿನಿಮಾದಲ್ಲಿ ತೊಡಗಿಕೊಳ್ಳಲು ಅವರು ಈಗ ನಿರ್ಧರಿಸಿದ್ದಾರೆ. ಅವರ ಮುಂಬರುವ ಸಿನಿಮಾಗಳ ಮೇಲೆ ನಿರೀಕ್ಷೆ ಮೂಡಿದೆ. ಅವರ ಸಹೋದರ ಬಾಬಿ ಡಿಯೋಲ್ ‘ಅನಿಮಲ್’ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದು, ಆ ಚಿತ್ರ ಡಿಸೆಂಬರ್ 1ರಂದು ರಿಲೀಸ್ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.