
ಸನ್ನಿ ಡಿಯೋಲ್, ಬಾಲಿವುಡ್ನ ಖ್ಯಾತ ನಟ ಹಾಗೂ ಮಾಜಿ ಸಂಸದ ಸಹ. ಸನ್ನಿ ಡಿಯೋಲ್ ನಟನೆ ಮಾಡಿರುವ ಇತ್ತೀಚೆಗಿನ ಕೆಲ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಆದರೆ ಇದೀಗ ಅವರೇ ನಟನೆ ಮಾಡಿರುವ ಹೊಸ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಸಿನಿಮಾದ ವಿರುದ್ಧ ಈಗಾಗಲೇ ಆಕ್ಷೇಪಗಳು ವ್ಯಕ್ತವಾಗಿದ್ದು, ಸಿಬಿಎಫ್ಸಿ ಸಹ ಸಿನಿಮಾದ ಕಂಟೆಂಟ್ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದೆ. ಇದೇ ಕಾರಣಕ್ಕೆ ಸಿನಿಮಾದ ಬಿಡುಗಡೆಯನ್ನೇ ಚಿತ್ರತಂಡ ಮುಂದೂಡಿದೆ. ಸಿನಿಮಾಕ್ಕೆ ಹಬ್ಬಿರುವ ವಿವಾದ ಏನು? ವಿವಾದಕ್ಕೆ ಈಡಾಗುವಂಥಹ್ದು ಸಿನಿಮಾನಲ್ಲಿ ಏನಿದೆ? ಇಲ್ಲಿದೆ ಮಾಹಿತಿ…
ಸನ್ನಿ ಡಿಯೋಲ್ ಅಭಿನಯದ ‘ಸೂರ್ಯ: ಅಂತ್ ಸೆ ಆರಂಭ್ ತಕ್’ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಪ್ರಮಾಣ ಪತ್ರಕ್ಕಾಗಿ ಸಿನಿಮಾ ಅನ್ನು ಸಿಬಿಎಫ್ಸಿಗೆ ಸಲ್ಲಿಕೆ ಮಾಡಲಾಗಿತ್ತು. ಆದರೆ ಖುದ್ದು ಸಿಬಿಎಫ್ಸಿಯು ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ತಡ ಮಾಡುತ್ತಿದೆ. ಇದೇ ಕಾರಣದಿಂದಾಗಿ ಸಿನಿಮಾದ ರಿಲೀಸ್ ಅನ್ನು ಚಿತ್ರತಂಡ ಮೂಂದೂಡಿದೆ. ಈ ಸಿನಿಮಾ ನವೆಂಬರ್ 20ಕ್ಕೆ ರಿಲೀಸ್ ಆಗಬೇಕಿತ್ತು. ಚಿತ್ರತಂಡ ಇದೇ ದಿನಾಂಕವನ್ನೇ ನಿಗದಿಪಡಿಸಿ ಪ್ರಚಾರವನ್ನೂ ಯೋಜಿಸಿತ್ತು ಆದರೆ ಇದೀಗ ಅಚಾನಕ್ಕಾಗಿ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ.
‘ಸೂರ್ಯ: ಅಂತ್ ಸೆ ಆರಂಭ್ ತಕ್’ ಸಿನಿಮಾನಲ್ಲಿ ವೈದ್ಯರನ್ನು ಬಿಂಬಿಸಿರುವ ರೀತಿಗೆ ವೈದ್ಯಕೀಯ ಸಮುದಾಯದ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಭಾರತೀಯ ವೈದ್ಯಕೀಯ ಸಂಘವು ಸಿನಿಮಾದ ಬಿಡುಡಗೆಗೆ ತಡೆ ನೀಡಬೇಕೆಂದು ಒತ್ತಾಯಿಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಹಾಗೂ ಸಿಬಿಎಫ್ಸಿಗೆ ಪತ್ರವನ್ನೂ ಸಹ ಬರೆದಿತ್ತು. ಅದರ ಬೆನ್ನಲ್ಲೆ ಸಿಬಿಎಫ್ಸಿಯು ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ವಿಳಂಬ ಮಾಡಿದೆ. ಸಿನಿಮಾದ ಕಂಟೆಂಟ್ ಅನ್ನು ಕೂಲಂಕುಷ ಪರಿವೀಕ್ಷಣೆಗೆ ಸಿಬಿಎಫ್ಸಿ ಒಳಪಡಿಸಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಇಬ್ಬರು ಬಾಲಿವುಡ್ ನಟರಿಗೆ ಹೆಚ್ಚಿದ ಭದ್ರತೆ, ಯಾವ ನಟರಿಗೆ ಯಾವ ಮಾದರಿ ಭದ್ರತೆ?
ಕೆಲವೇ ಸೆಕೆಂಡುಗಳ ಟೀಸರ್, ಟ್ರೈಲರ್ ತುಣುಕುಗಳನ್ನು ನೋಡಿ ಟೀಕೆ ಮಾಡುತ್ತಿರುವುದಕ್ಕೆ ಚಿತ್ರತಂಡ ಬೇಸರ ವ್ಯಕ್ತಪಡಿಸಿದೆ. ಯಾವುದೇ ತೀರ್ಮಾನಕ್ಕೆ ಬರುವ ಮುನ್ನ ಪೂರ್ತಿ ಕಥೆಯನ್ನು ನೋಡುವಂತೆ ಅವರು ಮಾಧ್ಯಮ ಮತ್ತು ಪ್ರೇಕ್ಷಕರನ್ನು ವಿನಂತಿಸಿದ್ದಾರೆ. “ಯಾವುದೇ ನಿರ್ಧಾರಕ್ಕೆ ಬರುವ ಮೊದಲು ಮಾಧ್ಯಮ ಮಿತ್ರರು ಮತ್ತು ಪ್ರೇಕ್ಷಕರು ಚಿತ್ರವನ್ನು ವಸ್ತುನಿಷ್ಠವಾಗಿ ನೋಡಿ, ಸಂಪೂರ್ಣ ಕಥೆಯನ್ನು ಅನುಭವಿಸಬೇಕೆಂದು ನಾವು ವಿನಮ್ರವಾಗಿ ವಿನಂತಿಸುತ್ತೇವೆ” ಎಂದು ಚಿತ್ರತಂಡ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸಿನಿಮಾನಲ್ಲಿ ವೈದ್ಯರ ಮೇಲಿನ ಹಿಂಸಾಚಾರ ಮತ್ತು ಆಸ್ಪತ್ರೆಗಳಲ್ಲಿನ ಭ್ರಷ್ಟಾಚಾರ ಹಾಗೂ ಅಕ್ರಮಗಳನ್ನು ತೋರಿಸುವ ದೃಶ್ಯಗಳಿಗೆ ಆಕ್ಷೇಪ ವ್ಯಕ್ತವಾಗಿದೆ. ಇಂತಹ ದೃಶ್ಯಗಳು ಇಡೀ ವೈದ್ಯಕೀಯ ವೃತ್ತಿಯ ಬಗ್ಗೆ ನಕಾರಾತ್ಮಕ ಭಾವನೆ ಮೂಡಿಸಬಹುದು ಎಂದು ವೈದ್ಯಕೀಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ಹಾಗಾಗಿ ಸಿನಿಮಾದ ಬಿಡುಗಡೆಯನ್ನು ತಡೆ ಹಿಡಿಯಬೇಕು ಎಂದು ಆಗ್ರಹಿಸಿದೆ. ಚಿತ್ರದಲ್ಲಿ ವೈದ್ಯರನ್ನು ಚಿತ್ರಿಸಿರುವ ಬಗೆಯ ಬಗ್ಗೆ ವೈದ್ಯಕೀಯ ವಲಯದಿಂದ ಕಳವಳ ವ್ಯಕ್ತವಾದ ನಂತರ ಈ ವಿವಾದ ಶುರುವಾಗಿದೆ.
ಟೀಕೆಗಳಿಗೆ ಉತ್ತರಿಸಿರುವ ಚಿತ್ರತಂಡ, ‘ಸೂರ್ಯ’ ಸಿನಿಮಾ ವೈದ್ಯರನ್ನಾಗಲೀ ಅಥವಾ ವೈದ್ಯಕೀಯ ವೃತ್ತಿಯನ್ನಾಗಲೀ ಗುರಿಯಾಗಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ. ವ್ಯವಸ್ಥೆಯೊಳಗಿನ ಕೆಲವು ವ್ಯಕ್ತಿಗಳು ನಡೆಸುವ ಭ್ರಷ್ಟಾಚಾರ, ಶೋಷಣೆ ಮತ್ತು ಸಂಘಟಿತ ಅಕ್ರಮಗಳ ಬಗ್ಗೆ ಚಿತ್ರ ಮಾತನಾಡುತ್ತದೆ ಎಂದು ಅವರು ಹೇಳಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡಿ ರೋಗಿಗಳ ಸೇವೆ ಸಲ್ಲಿಸುವ ವೈದ್ಯರ ಸಮರ್ಪಣಾ ಮನೋಭಾವವನ್ನು ಈ ಕಥೆ ಪ್ರಶ್ನಿಸುವುದಿಲ್ಲ ಎಂದು ತಂಡ ತಿಳಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ