
ಬಾಲಿವುಡ್‌ನ ಜನಪ್ರಿಯ ನಟ ಟೈಗರ್ ಶ್ರಾಫ್ ಅವರು ಮುಂಬೈನ ಖಾರ್ ವೆಸ್ಟ್‌ನಲ್ಲಿರುವ ತಮ್ಮ ಐಷಾರಾಮಿ ಅಪಾರ್ಟ್‌ಮೆಂಟ್ ಅನ್ನು 9 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ರಿಯಲ್ ಎಸ್ಟೇಟ್ ಡೇಟಾ ವಿಶ್ಲೇಷಣಾ ಸಂಸ್ಥೆ ‘ಸಿಆರ್‌ಇ ಮ್ಯಾಟ್ರಿಕ್ಸ್’ ಹಂಚಿಕೊಂಡಿರುವ ಆಸ್ತಿ ನೋಂದಣಿ ದಾಖಲೆಗಳಿಂದ ಈ ಮಾಹಿತಿ ಸಿಕ್ಕಿದೆ. ಇತ್ತೀಚೆಗಷ್ಟೇ, ಅಂದರೆ ಅಕ್ಟೋಬರ್ 18ರಂದು ಮುಂಬೈನ ಜುಹು ಪ್ರದೇಶದಲ್ಲಿ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಘಟನೆ ನಡೆದಿತ್ತು. ಈ ಭೀಕರ ಘಟನೆಯ ಬೆನ್ನಲ್ಲೇ ಆಸ್ತಿ ಮಾರಾಟದ ಸುದ್ದಿ ಹೊರಬಿದ್ದಿದೆ.
ದಾಖಲೆಗಳ ಪ್ರಕಾರ, ಈ ಅಪಾರ್ಟ್‌ಮೆಂಟ್ ಖಾರ್ ವೆಸ್ಟ್‌ನ ‘ರುಸ್ತುಮ್‌ಜಿ ಪ್ಯಾರಾಮೌಂಟ್ ಡಿ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ’ಯ 9ನೇ ಮಹಡಿಯಲ್ಲಿದೆ. ಇದರಲ್ಲಿ 1,291.14 ಚದರ ಅಡಿ ಕಾರ್ಪೆಟ್ ಏರಿಯಾ ಇದೆ. 95.80 ಚದರ ಅಡಿ ವಿಶೇಷ ಜಾಗವಿದೆ. ಪ್ರತಿ ಚದರ ಅಡಿಗೆ ಸುಮಾರು 64,891 ರೂಪಾಯಿ ಬೆಲೆ ಇದೆ. 54 ಲಕ್ಷ ರೂಪಾಯಿ ಸ್ಟ್ಯಾಂಪ್ ಡ್ಯೂಟಿ ಪಾವತಿಸಲಾಗಿದೆ. 2 ಕವರ್ಡ್ ಕಾರ್ ಪಾರ್ಕಿಂಗ್ ಜಾಗಗಳನ್ನು ಒಳಗೊಂಡಿದೆ.
ಈ ವ್ಯವಹಾರವು ಅಕ್ಟೋಬರ್ 22ರಂದು ಅಧಿಕೃತವಾಗಿ ನೋಂದಣಿಯಾಗಿದೆ. ಟೈಗರ್ ಶ್ರಾಫ್ ಅವರು 2018ರ ಜುಲೈ 17ರಂದು ‘ಕೀಸ್ಟೋನ್ ರಿಯಾಲ್ಟರ್ಸ್ ಪ್ರೈವೇಟ್ ಲಿಮಿಟೆಡ್’ ಡೆವಲಪರ್‌ಗಳಿಂದ 7.61 ಕೋಟಿ ರೂಪಾಯಿಗೆ ಈ ಫ್ಲಾಟ್ ಖರೀದಿಸಿದ್ದರು.
ಟೈಗರ್ ಶ್ರಾಫ್ ಇದೇ ಕಟ್ಟಡದಲ್ಲಿ ಆಸ್ತಿ ಮಾರಾಟ ಮಾಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಕೂಡ ಅವರು ಇದೇ ಯೋಜನೆಯ 22ನೇ ಮಹಡಿಯಲ್ಲಿದ್ದ ಮತ್ತೊಂದು ಅಪಾರ್ಟ್‌ಮೆಂಟ್ ಅನ್ನು 15.6 ಕೋಟಿ ರೂಪಾಯಿಗೆ ಮಾರಾಟ ಮಾಡಿ ಸುಮಾರು ಶೇಕಡ 31ರಷ್ಟು ಲಾಭಗಳಿಸಿದ್ದರು. ಆ ಫ್ಲಾಟ್ 1,989.72 ಚದರ ಅಡಿ ಕಾರ್ಪೆಟ್ ಏರಿಯಾ ಹಾಗೂ 2,189 ಚದರ ಅಡಿ ಬಿಲ್ಟ್-ಅಪ್ ಏರಿಯಾ ಹೊಂದಿತ್ತು. ಅದನ್ನು 2018ರಲ್ಲಿ 11.62 ಕೋಟಿ ರೂಪಾಯಿಗೆ ಖರೀದಿಸಲಾಗಿತ್ತು.
ಇದನ್ನೂ ಓದಿ: ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಎಐ ವಿಡಿಯೋ, ಸುಳ್ಳು ಮಾಹಿತಿ ವಿರುದ್ಧ ಎಚ್ಚರಿಕೆ
ಗುಂಡಿನ ದಾಳಿಯ ಆತಂಕದ ನಡುವೆ ನಿರ್ಧಾರ: ಅಕ್ಟೋಬರ್ 18ರ ಸಾಯಂಕಾಲ ಜುಹು ಪ್ರದೇಶದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಟೈಗರ್ ಶ್ರಾಫ್ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ದಿಢೀರ್ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಈ ಘಟನೆಯಲ್ಲಿ ಟೈಗರ್ ಶ್ರಾಫ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದರೂ, ಅವರ ಚಾಲಕ ಮತ್ತು ಹತ್ತಿರದಲ್ಲಿದ್ದ ಸಾರ್ವಜನಿಕರೊಬ್ಬರು ಗಾಯಗೊಂಡಿದ್ದರು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಫ್ಲಾಟ್ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.